ಅಸ್ಸಾಂ ಚುನಾವಣೆ ಸಂಬಂಧ ಶುಕ್ರವಾರ ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಎಲ್ಲ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರು ನಮ್ಮ ನಾಯಕರು. ಅವರ ಭೇಟಿಯಲ್ಲಿ ಹೊಸತೇನಿಲ್ಲ ಎಂದು ತಿಳಿಸಿದರು.

ಬೆಂಗಳೂರು : ಅಸ್ಸಾಂ ಚುನಾವಣೆ ಸಂಬಂಧ ಶುಕ್ರವಾರ ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಎಲ್ಲ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ರಾಹುಲ್‌ ಗಾಂಧಿ ಅವರು ನಮ್ಮ ನಾಯಕರು. ಅವರ ಭೇಟಿಯಲ್ಲಿ ಹೊಸತೇನಿಲ್ಲ. ಅವರ ಭೇಟಿಯಾಗಿ ಕೆಲ ವಿಚಾರ ಚರ್ಚೆ ಮಾಡಿದ್ದೇನೆ. ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಇನ್ನು ಅಸ್ಸಾಂ ಚುನಾವಣೆ ಸಂಬಂಧ ಸಭೆಯಿದ್ದು, ಅದಕ್ಕಾಗಿ ಶುಕ್ರವಾರ ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿಗೆ ಹೋದಾಗ ನಮ್ಮ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.

ಆಪ್ತರ ಬಯಕೆ (ಸಿಎಂ ಸ್ಥಾನ)ಯನ್ನು ರಾಹುಲ್‌ ಗಾಂಧಿ ಅವರ ಬಳಿ ಪ್ರಸ್ತಾಪಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಿಮ್ಮ (ಮಾಧ್ಯಮ) ಬಯಕೆಯನ್ನೂ ರಾಹುಲ್‌ ಗಾಂಧಿ ಅವರ ಮುಂದೆ ಹೇಳುತ್ತೇವೆ ಎಂದರು.

ನನ್ನ ಪೋಸ್ಟ್‌ ಬೇರೆ ರೀತಿ ವ್ಯಾಖ್ಯಾನ:

ಬುಧವಾರ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿದ ಪೋಸ್ಟ್‌ ಕುರಿತು ಉತ್ತರಿಸಿದ ಡಿ.ಕೆ.ಶಿವಕುಮಾರ್‌, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಾನು ಎಕ್ಸ್‌ನಲ್ಲಿ ಹಾಕಿದ್ದೆ. ಕಾವೇರಿ ಆರತಿ ಪ್ರಾರ್ಥನೆ ನಂತರ ಸುಪ್ರೀಂ ಕೋರ್ಟ್‌ ಮೇಕೆದಾಟು ಯೋಜನೆ ವಿಚಾರವಾಗಿ ರಾಜ್ಯದ ಪರ ಆದೇಶ ನೀಡಿತ್ತು. ಮೇಕೆದಾಟು ಯೋಜನೆ ತಾಂತ್ರಿಕ ಅಂಶವನ್ನು ಕೇಂದ್ರ ಜಲ ಆಯೋಗವೇ ತೀರ್ಮಾನ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಆ ಹಿನ್ನೆಲೆಯಲ್ಲಿ ನಾನು ಪೋಸ್ಟ್‌ ಹಾಕಿದ್ದು, ಅದನ್ನು ಬೇರೆ ರೀತಿ ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದು ಹೇಳಿದರು.

- ಅಸ್ಸಾಂ ಚುನಾವಣೆಯ ಸಭೆಯಲ್ಲಿ ಭಾಗಿ

- ಅಸ್ಸಾಂ ಚುನಾವಣೆಯ ವೀಕ್ಷಕರಾಗಿ ನೇಮಕಗೊಂಡಿರುವ ಡಿ.ಕೆ. ಶಿವಕುಮಾರ್‌

- ಆ ಚುನಾವಣೆ ಸಂಬಂಧ ದೆಹಲಿಯಲ್ಲಿ ಇಂದು ಕಾಂಗ್ರೆಸ್‌ ನಾಯಕರಿಂದ ಸಭೆ

- ಇದೇ ವೇಳೆ ಎಲ್ಲ ನಾಯಕರನ್ನು ಭೇಟಿಯಾಗುವುದಾಗಿ ಖುದ್ದು ಡಿಸಿಎಂ ಹೇಳಿಕೆ

- ಮೈಸೂರಿನಲ್ಲಿ ಮಂಗಳವಾರ ರಾಹುಲ್‌ ಗಾಂಧಿ ಜತೆ ಪ್ರತ್ಯೇಕ ಚರ್ಚೆ ಮಾಡಿದ್ದ ಡಿಕೆ

- ಈಗ ಮತ್ತೆ ದಿಲ್ಲಿಗೆ- ಕುತೂಹಲ. ನಾಯಕತ್ವ ಚರ್ಚೆ ಗುಟ್ಟು ಬಿಟ್ಟುಕೊಡದ ಡಿಸಿಎಂ

ಪ್ರಾರ್ಥನೆ ಬಗ್ಗೆ ಬೇರೆ ವ್ಯಾಖ್ಯಾನ ಬೇಡ

ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬ ನನ್ನ ಪೋಸ್ಟ್‌ ಬಗ್ಗೆ ಬೇರೆ ರೀತಿ ವ್ಯಾಖ್ಯಾನ ಮಾಡುವುದು ಸರಿಯಲ್ಲ. ಮೇಕೆದಾಟು ಕುರಿತು ವ್ಯಕ್ತಪಡಿಸಿದ ಅಭಿಪ್ರಾಯ ಅದಾಗಿತ್ತು.

- ಡಿ.ಕೆ.ಶಿವಕುಮಾರ್‌, ಡಿಸಿಎಂ