ರಾಜಕೀಯ ತಿರುವು ಪಡೆಯುತ್ತಿರುವ ಕೋಮುಗಲಭೆ ಪ್ರಕರಣ

KannadaprabhaNewsNetwork |  
Published : Sep 14, 2024, 01:50 AM IST
13ಕೆಎಂಎನ್‌ಡಿ-2ನಾಗಮಂಗಲದಲ್ಲಿ ಗಲಭೆಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. | Kannada Prabha

ಸಾರಾಂಶ

ಗಲಭೆಯಲ್ಲಿ ನಷ್ಟವಾಗಿರುವ ಹಿಂದು-ಮುಸ್ಲಿಂ ಎರಡೂ ಸಮುದಾಯದ 30ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ವೈಯುಕ್ತಿಕವಾಗಿ ನನ್ನ ಕೈಲಾದಷ್ಟು ಆರ್ಥಿಕ ಸಹಾಯ ಮಾಡುತ್ತೇನೆಂದು ಘೋಷಿಸಿದ ಕೇಂದ್ರ ಸಚಿವ ಎಚ್ಡಿಕೆ ತಪ್ಪಿತಸ್ಥರು ಯಾರೇ ಆಗಲಿ ಅವರಿಗೆ ಶಿಕ್ಷೆಯಾಗಬೇಕು. ಅಮಾಯಕರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ನೀವು ಧೈರ್ಯದಿಂದಿರಿ ಎಂದು ಮಹಿಳೆಯರಿಗೆ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದಲ್ಲಿ ಬುಧವಾರ ರಾತ್ರಿ ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಕೋಮು ಗಲಭೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಂತಾಗಿದೆ.

ಗಲಭೆ ಪ್ರಕರಣವನ್ನೇ ಬ್ರಹ್ಮಾಸ್ತ್ರ ಮಾಡಿಕೊಂಡು ಗುರುವಾರ ಪಟ್ಟಣಕ್ಕೆ ರಾಜ್ಯ ಬಿಜೆಪಿ ನಾಯಕರ ತಂಡ ಭೇಟಿ ಕೊಟ್ಟು ಕಾಂಗ್ರೆಸ್‌ನ ಓಲೈಕೆಯ ಪ್ರತಿಫಲವೇ ಈ ಗಲಭೆ ಕಾರಣ. ಮತ ಬ್ಯಾಂಕ್‌ಗಾಗಿ ಒಂದು ಸಮುದಾಯವನ್ನು ಓಲೈಕೆ ಮಾಡಿಕೊಂಡು ಶಾಂತಿ, ನೆಮ್ಮದಿ ಕದಡುವ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರು.

ಶುಕ್ರವಾರ ಬೆಳಗ್ಗೆ ಕೇಂದ್ರ ಸಚಿವ ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಾಯಕರು ಆಗಮಿಸಿ ಗಲಭೆ ವಿಚಾರವನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಮತ್ತು ಬದ್ದ ರಾಜಕೀಯ ವೈರಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದರು.

ಕೇಂದ್ರ ಸಚಿವ ಎಚ್ಡಿಕೆ ಅವರನ್ನು ಭೇಟಿ ಮಾಡಿದ ಬಂಧನಕೊಳಗಾದ ಕುಟುಂಬಸ್ಥ ಮಹಿಳೆಯರು ಪೊಲೀಸರು ಅಮಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ವಿಡಿಯೋದಲ್ಲಿ ಇಲ್ಲ ಅಂದ್ರೆ ವಾಪಸ್ ಕಳುಹಿಸುತ್ತೇವೆ ಎಂದಿದ್ದರು. ಆದರೆ, ಈಗ ಜೈಲಿಗೆ ಕಳುಹಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

ವೈಯಕ್ತಿಕ ಪರಿಹಾರ ಘೋಷಿಸಿದ ಎಚ್ಡಿಕೆ:

ಗಲಭೆಯಲ್ಲಿ ನಷ್ಟವಾಗಿರುವ ಹಿಂದು-ಮುಸ್ಲಿಂ ಎರಡೂ ಸಮುದಾಯದ 30ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ವೈಯುಕ್ತಿಕವಾಗಿ ನನ್ನ ಕೈಲಾದಷ್ಟು ಆರ್ಥಿಕ ಸಹಾಯ ಮಾಡುತ್ತೇನೆಂದು ಘೋಷಿಸಿದ ಕೇಂದ್ರ ಸಚಿವ ಎಚ್ಡಿಕೆ ತಪ್ಪಿತಸ್ಥರು ಯಾರೇ ಆಗಲಿ ಅವರಿಗೆ ಶಿಕ್ಷೆಯಾಗಬೇಕು. ಅಮಾಯಕರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ನೀವು ಧೈರ್ಯದಿಂದಿರಿ ಎಂದು ಮಹಿಳೆಯರಿಗೆ ಭರವಸೆ ನೀಡಿದರು.

ಗುರುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪರಿಶೀಲನೆ ನಡೆಸಿ, ಸರ್ಕಾರದ ಸಿಗಬಹುದಾದ ಪರಿಹಾರ ಕೊಡಿಸುವ ಜೊತೆಗೆ ವೈಯುಕ್ತಿಕವಾಗಿಯೂ ಆರ್ಥಿಕ ನೆರವು ನೀಡುವುದಾಗಿ ಸಂತ್ರಸ್ಥರಿಗೆ ಧೈರ್ಯ ತುಂಬಿದ್ದರು.

ಬಳಿಕ ಅಧಿಕಾರಿಗಳ ಸಭೆ ನಡೆಸಿ ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿರಲಿ ನಿರ್ಧಾಕ್ಷೀಣ್ಯವಾಗಿ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೋರ್ಟ್ ಅನುಮತಿ:

ನಾಗಮಂಗಲ ಗಲಭೆ ಪ್ರಕರಣದ 15ನೇ ಆರೋಪಿ ಬದರಿಕೊಪ್ಪಲಿನ ದಿವಾಕರ್ ಮಾವ ಪುಟ್ಟರಾಜು ಶುಕ್ರವಾರ ಮೃತಪಟ್ಟಿದ್ದರುವ ಹಿನ್ನೆಲೆಯಲ್ಲಿ ಗಂಡ ಜೈಲಿನಲ್ಲಿದ್ದಾರೆ. ಅಪ್ಪ ಮೃತಪಟ್ಟಿದ್ದಾರೆ. ಬೆಂಕಿ ಹಚ್ಚಿ ದಾಂಧಲೆ ನಡೆಸಿದವರು ಅರಾಮಾಗಿ ಓಡಾಡಿಕೊಂಡಿದ್ದಾರೆ. ನಾವು ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ನನ್ನ ಅಪ್ಪನ ಅಂತಿಮ ದರ್ಶನ ಮಾಡಲು ನನ್ನ ಗಂಡನಿಗೆ ಅವಕಾಶ ನೀಡಬೇಕೆಂದು ದಿವಾಕರ್ ಪತ್ನಿ ದಿವ್ಯ ನ್ಯಾಯಾಧೀಶರ ಮೊರೆಹೋಗಿದ್ದರು.

ಮನವಿ ಪುರಸ್ಕರಿಸಿದ ನಾಗಮಂಗಲ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಬುಧವಾರ ರಾತ್ರಿ ಬಂಧನಕ್ಕೊಳಗಾಗಿ 14 ದಿನ ನ್ಯಾಯಾಂಗ ಬಂಧನದಲ್ಲಿರುವ ದಿವಾಕರ್‌ಗೆ ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆಯುವ ಪುಟ್ಟರಾಜು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿದರು.

40 ಗಂಟೆ ಕಳೆದರೂ ಆರದ ಕಿಚ್ಚು:

ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದ ಕೋಮು ಗಲಭೆಯಲ್ಲಿ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಆಟೋ ಮೊಬೈಲ್ಸ್ ಸೇರಿದಂತೆ ಹಲವು ಸ್ಕೂಟರ್ ಗ್ಯಾರೇಜ್ ಮತ್ತು ಪಂಚರ್ ಶಾಪ್‌ಗಳಿಗೆ ಕಿಡಿಗೇಡಿಗಳು ಬೆಂಕಿಹಚ್ಚಿದ್ದರಿಂದ ಅಂಗಡಿಯಲ್ಲಿದ್ದ ಒಟ್ಟು 25 ಲಕ್ಷ ಮೌಲ್ಯದ ಟೈಯರ್‌ಗಳು, ಪಂಚರ್ ಹಾಕುವ ಮೆಷಿನ್, ರಿಪೇರಿಗೆ ಬಂದಿದ್ದ ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿದ್ದವು.

ಘಟನೆ ಸಂಭವಿಸಿ 40ಗಂಟೆ ಕಳೆದರೂ ಕೂಡ ಅಂಗಡಿಯೊಳಗಿನ ಬೆಂಕಿಯ ಕಿಚ್ಚು ಆರಿರಲಿಲ್ಲ. ಶುಕ್ರವಾರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅಂಗಡಿಗಳ ಮೇಲ್ಚಾವಣಿ ಮತ್ತು ಕಬ್ಬಿಣದ ಶೆಲ್ಟರ್‌ಗಳನ್ನು ಸುತ್ತಿಗೆಯಿಂದ ಹೊಡೆದು ಕಳಚಿ ಬೆಂಕಿ ನಂದಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...