ಕನ್ನಡಪ್ರಭ ವಾರ್ತೆ ಮೈಸೂರು
ಕಲಾವಿದರು ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗು ಚತುರ್ಭಾಷಾ ಚಲನಚಿತ್ರಗೀತೆಗಳನ್ನು ಹಾಡಿ ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದ ಮನರಂಜನೆಯನ್ನು ನೀಡಿದರು.
ತಂಡದ ಕಲಾವಿದರಿಂದ ಹೊಸ ಬೆಳಕು ಚಿತ್ರದ ತೆರೆದಿದೆ ಮನೆ ಓ ಬಾ ಅತಿಥಿ ಹಾಡನ್ನು ಶೀಲಾ ಗುರುದತ್ ಹಾಗೂ ಇಂದ್ರಾಣಿ ಅನಂತರಾಮ್, ಶಂಕರ್ ಗುರು ಚಿತ್ರದ ಏನೇನೋ ಆಸೆ ಹಾಡನ್ನು ಡಾ.ಎ.ಡಿ. ಶ್ರೀನಿವಾಸನ್ ಹಾಗೂ ಡಾ. ಪದ್ಮಶ್ರೀ ದಂಪತಿ ಹಾಡಿದರು. ತದನಂತರ ಬಂಧನ ಚಿತ್ರದ ನೂರೊಂದು ನೆನಪು ಗೀತೆಯನ್ನು ಇಂಜಿನಿಯರ್ ಹಾಗೂ ಗಾಯಕ ಎಚ್. ಅಶ್ವತ್ ನಾರಾಯಣ್ ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಇದರ ತರುವಾಯ ಮಾಂಗಲ್ಯ ಭಾಗ್ಯ ಚಿತ್ರದ ಆಸೆಯ ಭಾವ ಹಾಡನ್ನು ಗುರುದತ್ ಹಾಡಿದರೆ, ವಿಜಯವಾಣಿ ಚಿತ್ರದ ಮಧುಮಾಸ ಚಂದ್ರಮ ಹಾಡನ್ನು ಶ್ವೇತಾ ಸೊಗಸಾಗಿ ಹಾಡಿದರು.ಇದಾದ ನಂತರ ಲವ್ 360 ಚಿತ್ರದ ಜಗವೇ ನೀನು ಹಾಡನ್ನು ಡಾ.ಎ.ಡಿ. ಶ್ರೀನಿವಾಸನ್ ದಂಪತಿಯ ಪುತ್ರ ಶ್ರೀಹರಿ ಹಾಡಿ ಮೋಡಿ ಮಾಡಿದರು. ಹಿಂದಿ ಚಲನಚಿತ್ರ ಸತ್ಯಂ ಶಿವಂ ಸುಂದರಂ ಚಿತ್ರದ ಶೀರ್ಷಿಕೆ ಗೀತೆಯನ್ನು ಗಾಯಕಿ ಇಂದ್ರಾಣಿ ಅನಂತರಾಮ್ ಭಾವಪೂರ್ಣವಾಗಿ ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ಆರಂಭದಲ್ಲಿ ಡಾ.ಎ.ಡಿ. ಶ್ರೀನಿವಾಸನ್ ಅವರು ನಮ್ಮಮ್ಮ ಶಾರದೆ ಉಮಾಮಹೇಶ್ವರಿ ಎಂಬ ಸ್ತುತಿಯೊಂದಿಗೆ ಪ್ರಾರ್ಥನೆ ಸಲ್ಲಿಸಿದರೆ ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಘಟಕದ ಅಧ್ಯಕ್ಷ ಡಾ. ನಾಗರಾಜ್ ವಿ.ಬೈರಿ ಚಾಲನೆ ನೀಡಿ ಶುಭ ಕೋರಿದರು. ಆಕಾಶವಾಣಿ ಉದ್ಘೋಷಕ ಮಂಜುನಾಥ್ ನಿರೂಪಿಸಿದರು.