ಕನ್ನಡಪ್ರಭ ವಾರ್ತೆ ಹನೂರು
ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಲೆಮಹದೇಶ್ವರ ಬೆಟ್ಟದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕೊನೆಯ ದಿನ ಮಹಾ ರಥೋತ್ಸವ ಮುಗಿದ ನಂತರ ಸಂಜೆ ಕೊಂಡೋತ್ಸವ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಬೇಡಗಂಪಣ ಸಮುದಾಯದ ಪದ್ಧತಿಯಂತೆ ಸಂಭ್ರಮದಿಂದ ಜರುಗಿತು.ಕೊಂಡೋತ್ಸವ ವಿಶೇಷ:ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕೊಂಡೋತ್ಸವಕ್ಕೂ ಮುನ್ನ ಅರಣ್ಯ ಪ್ರದೇಶದಲ್ಲಿ ಒಣಗಿದ ಬೆಚ್ಚಲು ಮರದ 5 ಟನ್ ಸೌದೆಯನ್ನು ಶೇಖರಣೆ ಮಾಡಿ ರಾಜಗೋಪುರದ ಮುಂಭಾಗ ಕೊಂಡೋತ್ಸವ ನಡೆಯುವ ಸ್ಥಳದಲ್ಲಿ ಕಟ್ಟಿಗೆಗೆ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಮಲೆ ಮಾದೇಶ್ವರರಿಗೆ ಪೂಜೆ ಸಲ್ಲಿಸಿ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.ಸಂಜೆವರೆಗೂ ಉರಿದ ಕಟ್ಟಿಗೆ ಕೆಂಡಗಳಾದ ನಂತರ ಅದರ ಮೇಲೆ ಬೇಡಗಂಪಣರ ಸಮುದಾಯದ ಹಿರಿಯ ಅರ್ಚಕ ಕೆ.ವಿ ಮಾದೇಶ್ ಮಾರ್ಗದರ್ಶನದಲ್ಲಿ 12 ಅರ್ಚಕರು ವೀರಭದ್ರನ ಕಾಸೆ ಧರಿಸಿರುವ ನಾಲಿಗೆ ಎದೆಯ ಮೇಲೆ ಇರಿಸಿ ಕಾರಯದ ಕಿಡಿ, ಚಿನ್ನದ ವೀರಭದ್ರೇಶ್ವರ ಅಲೆಗೆ ಕಟ್ಟಿಕೊಂಡು ಮುಂಗೊಂಡ ಕೊಂಡ ಹಾಯ್ದರು. 11ಜನರು ಅರ್ಚಕರು ಸಹ ಸಾತ್ ನೀಡುವ ಮೂಲಕ ಬೇಡಗಂಪಣರ ಅರ್ಚಕರು ಅನಾದಿಕಾಲದಿಂದಲೂ ಪದ್ಧತಿಯಂತೆ ಆಚರಿಸಿಕೊಂಡು ಬಂದಿರುವಂತೆ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ವಾದ್ಯ ಮೇಳಗಳ ಜೊತೆ ವೇಷ ಭೂಷಣಗಳೊಂದಿಗೆ ಅರ್ಚಕರು ಕೆಂಪು ವಸ್ತ್ರದಾರಿಗಳಾಗಿ ಕತ್ತಿ ಹಿಡಿದು ಕೊಂಡ ಹಾಯ್ದರು. ರಾಜ್ಯದ ನಾನಾ ಭಾಗಗಳಿಂದ ಹಾಗೂ ತಮಿಳುನಾಡಿನಿಂದಲೂ ಸಹ ಕೊಂಡೋತ್ಸವವನ್ನು ಕಣ್ತುಂಬಿಕೊಳ್ಳಲು ಮಾದಪ್ಪನ ಭಕ್ತರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.ಓಕುಳಿ ಸೇವೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರೆ ಮುಗಿದ ನಂತರ ಮಂಗಳವಾರ ಸಂಜೆ ಓಕುಳಿ ಸೇವೆ ನಡೆಯಿತು. ಮಹಾಶಿವರಾತ್ರಿ ಹಬ್ಬದ ನಂತರ ಬೇಡ ಕೆಂಪಣ್ಣರು ಸಂಜೆ ಓಕುಳಿ ಸೇವೆ ಎಂಬ ಬಣ್ಣದ ನೀರನ್ನು ಎರಚಿ ಮಲೆ ಮಾದೇಶ್ವರ ಅವರಿಗೆ ಪೂಜೆ ಸಲ್ಲಿಸಿದರು.
ಹಬ್ಬಮುಗಿದರೂ ಜಾತ್ರೆ ಮುಗಿದಿಲ್ಲ: ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮುಗಿದರೂ ಸಹ ಇನ್ನೂ ಮಂಗಳವಾರವು ಸಹ ರಾಜ್ಯದ ನಾನಾ ಭಾಗಗಳಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳಿ, ಅಪಾರ ಸಂಖ್ಯೆಯ ಭಕ್ತರು ಮಲೆ ಮಾದೇಶ್ವರನ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಮಲೆ ಮಾದೇಶ್ವರರಿಗೆ ನಿವೇದನೆ ಮಾಡಿಕೊಂಡು ಉಫೇ ಉಘೇ ಮಾದಪ್ಪ ಎಂದು ಜೈಕಾರ ಮೊಳಗಿಸಿದರು. ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆಗಳ 5 ದಿನಗಳ ಜಾತ್ರೆ ಪ್ರಯುಕ್ತ ಕೊಂಡೋತ್ಸವದಲ್ಲಿ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಮತ್ತು ಉಪ ಕಾರ್ಯದರ್ಶಿ ಚಂದ್ರಶೇಖರ್, ಪೊಲೀಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.