ಕಾಂಗ್ರೆಸ್‌ ಕಿತ್ತೊಗೆಯುವ ಕ್ರಾಂತಿಯಾಗಲಿ: ಸಂಸದ ಅನಂತಕುಮಾರ

KannadaprabhaNewsNetwork | Published : Mar 13, 2024 2:03 AM

ಸಾರಾಂಶ

ಜಿ ೨೦ ಸಮಾವೇಶಕ್ಕೆ ಇಡೀ ಜಗತ್ತು ಬಂದು ನಮ್ಮ ದೇಶವನ್ನು, ಮೋದಿಯನ್ನು ಹೊಗಳಿದೆ. ಆದರೆ ರಾಹುಲ್ ಗಾಂಧಿ ನಾಪತ್ತೆಯಾಗಿದ್ದರು ಎಂದು ಸಂಸದ ಅನಂತಕುಮಾರ ಹೆಗಡೆ ವಾಗ್ದಾಳಿ ನಡೆಸಿದರು.

ಕಾರವಾರ: ಒಮ್ಮೆ ಕ್ರಾಂತಿ ಆದರೇನೇ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ. ಕ್ರಾಂತಿ ಇಲ್ಲದೇನೆ ಶಾಂತಿ ಶಾಶ್ವತವಾಗಿ ನೆಲೆಸುವುದಿಲ್ಲ. ಒಮ್ಮೆ ಕಾಂಗ್ರೆಸ್ಸನ್ನು ಕಿತ್ತೊಗೆಯುವ ಕ್ರಾಂತಿ ಈ ನೆಲದಲ್ಲಿ ಆಗಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜಿ ೨೦ ಸಮಾವೇಶಕ್ಕೆ ಇಡೀ ಜಗತ್ತು ಬಂದು ನಮ್ಮ ದೇಶವನ್ನು, ಮೋದಿಯನ್ನು ಹೊಗಳಿದೆ. ಆದರೆ ರಾಹುಲ್ ಗಾಂಧಿ ನಾಪತ್ತೆಯಾಗಿದ್ದರು. ಎಲ್ಲಿದಾರೋ ಗೊತ್ತಿಲ್ಲ. ಆಲೂಗಡ್ಡೆಯಿಂದ ಬಂಗಾರ ತೆಗೆಯುತ್ತಿರಬೇಕು ಎಂದು ಕೆಲವರು ಹೇಳಿದರು ಎಂದು ವ್ಯಂಗ್ಯವಾಡಿದ ಅವರು, ಇಡೀ ಜಗತ್ತು ಬಂದು ದೇಶವನ್ನು ಹಾಡಿ ಹೊಗಳಿದರೂ ವಿರೋಧ ಪಕ್ಷದ ಅಸ್ತಿತ್ವವೇ ಇಲ್ಲ. ಅದೆಷ್ಟರ ಮಟ್ಟಿಗೆ ಕಾಂಗ್ರೆಸ್ ದಿವಾಳಿಯಾಗಿದೆ. ದೇಶದಲ್ಲಿ ಹೊಸ ಭರವಸೆ ಬರಬೇಕಾದರೆ, ಶಾಂತಿ, ನೆಮ್ಮದಿ ಸಿಗಬೇಕಾದರೆ ಬಿಜೆಪಿ ಗೆಲ್ಲಬೇಕು. ಉತ್ತರ ಕನ್ನಡದಲ್ಲಿ ಕಳೆದ ಬಾರಿ ಸಿಕ್ಕ ಲೀಡ್ ದಕ್ಷಿಣ ಭಾರತದಲ್ಲೇ ದಾಖಲೆಯಾಗಿತ್ತು. ಹಳೆಯ ದಾಖಲೆಯನ್ನು ಅಳಿಸಿ ಹೊಸ ದಾಖಲೆಯನ್ನು ಬರೆಯಬೇಕು. ಬಿಜೆಪಿ ಮತ್ತೆ ಅಜೇಯ ಶಕ್ತಿಯಾಗಿ ಬೆಳೆದು ಬರಬೇಕು. ಅಭ್ಯರ್ಥಿ ಯಾರೇ ಇರಲಿ, ಬಿಜೆಪಿ ಗೆಲುವು ಸಾಧಿಸಬೇಕು ಎಂದರು.

ಶ್ವೇತಪತ್ರ ಹೊರಡಿಸಲಿ: ಪ್ರತಿ ಚುನಾವಣೆಯಲ್ಲೂ ಹೊಸ ಹೊಸ ಘೋಷಣೆಗಳನ್ನು ಮಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಸಿದ್ರಾಮುಲ್ಲಾ ಖಾನ್ ಗ್ಯಾರಂಟಿ ಕೊಡ್ತೀವಿ ಎಂದು ಘೋಷಣೆ ಮಾಡಿದರು. ಅಧಿಕಾರಕ್ಕೆ ಬಂದು ವರ್ಷದಲ್ಲೇ ರಾಜ್ಯ ಸರ್ಕಾರ ಅಲುಗಾಡುತ್ತಿದೆ ಎಂದು ಸಂಸದ ಅನಂತಕುಮಾರ ಹೆಗಡೆ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದು ಒಂದು ವರ್ಷವಾಗಿಲ್ಲ. ಸರ್ಕಾರಿ ನೌಕರರಿಗೆ ವೇತನ ಕೊಡಲು ದುಡ್ಡಿಲ್ಲ. ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತಂತೆ ಶ್ವೇತಪತ್ರ ಹೊರಡಿಸಲಿ ನೋಡೋಣ ಎಂದು ಸವಾಲು ಹಾಕಿದ ಅವರು, ಸಿದ್ದರಾಮಯ್ಯರಿಗೆ ನಿಜಕ್ಕೂ ಧಮ್ ಇದ್ರೆ, ಪ್ರಾಮಾಣಿಕತೆ ಇದ್ರೆ, ಆರ್ಥಿಕತೆಯ ಕಳಕಳಿಯಿದ್ರೆ ಶ್ವೇತಪತ್ರ ಹೊರಡಿಸಬೇಕು, ಆಗ ಕಳೆದ ಒಂದು ವರ್ಷದಲ್ಲಿ ಇವರು ಕಡಿದಿದ್ದೇನೆಂದು ಗೊತ್ತಾಗುತ್ತದೆ. ಈ ಚುನಾವಣೆ ತನಕ ಹಾಗೋ ಹೀಗೋ ಗ್ಯಾರಂಟಿ ಸ್ಕೀಮ್‌ಗಳನ್ನು ಕಾಂಗ್ರೆಸ್ ನಡೆಸಬಹುದು. ಆದರೆ ಅದರ ನಂತರ ಕಾಂಗ್ರೆಸ್ಸಿಗೆ ಕರ್ನಾಟಕ ಸರ್ಕಾರವನ್ನು ನಡೆಸಲಾಗುವುದಿಲ್ಲ ಎಂದರು.ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮನೋಜ ಭಟ್, ಗಜಾನನ ಗುನಗ, ಅಶೋಕ ಗೌಡ ಮೊದಲಾದವರು ಇದ್ದರು.

ಸಕ್ರಿಯ ರಾಜಕಾರಣಕ್ಕೆ ಬಂದಿದ್ದು ಸಂತಸ

ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ಅನಂತಕುಮಾರ ಹೆಗಡೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದ ಸಮಯದಲ್ಲಿ ತಾವು ಆಕಾಂಕ್ಷಿಯಾಗಿದ್ದು, ಆದರೆ ಈಗ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತಾವು ಆಕಾಂಕ್ಷಿ ಅಲ್ಲ. ಯಾವತ್ತೂ ಅನಂತಕುಮಾರ ಅವರಿಗೆ ಟಿಕೆಟ್ ಕೊಡಬಾರದು ಎಂದು ಹೇಳಲಿಲ್ಲ. ಅನಂತಕುಮಾರ ಹೆಗಡೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದಿರುವುದು ಸಂತಸ ಉಂಟುಮಾಡಿದೆ. ಕಳೆದ ಬಾರಿಗಿಂತ ಹೆಚ್ಚಿನ ಮತವನ್ನು ಈ ಬಾರಿ ನಮ್ಮ ವಿಧಾನಸಭಾ ಕ್ಷೇತ್ರದಿಂದ ಕೊಡುತ್ತೇವೆ. ಏಳನೇ ಬಾರಿಗೆ ಅನಂತಕುಮಾರ ಹೆಗಡೆಯವರನ್ನು ಆಯ್ಕೆ ಮಾಡೋಣ ಎಂದು ಮನವಿ ಮಾಡಿದರು.

Share this article