ಸಂಕಟ ಹರನಿಗೆ ಸಂಭ್ರಮದ ವಿದಾಯ

KannadaprabhaNewsNetwork | Published : Sep 14, 2024 1:52 AM

ಸಾರಾಂಶ

ಪಟ್ಟಣ ಸೇರಿದಂತೆ ವಿವಿಧೆಡೆ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನಲು ಗುರುವಾರ ಸಂಜೆ ಅದ್ಧೂರಿಯಾಗಿ ವಿಸರ್ಜನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣ ಸೇರಿದಂತೆ ವಿವಿಧೆಡೆ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನಲು ಗುರುವಾರ ಸಂಜೆ ಅದ್ಧೂರಿಯಾಗಿ ವಿಸರ್ಜನೆ ಮಾಡಲಾಯಿತು.

ಸಾರ್ವಜನಿಕ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ, ಹೋಮ ಹವನ ಸತ್ಯನಾರಾಯಣ ಪೂಜೆ ಸೇರಿದಂತೆ ಹಲವರು ಧಾರ್ಮಿಕ ಕಾರ್ಯಕ್ರಮಗಳನ್ನು ವಿವಿಧ ಮುಖಂಡರ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಗಣೇಶ ವಿಸರ್ಜನೆಗಾಗಿ ಆಗಮಿಸಿದ್ದ ಭಕ್ತರಿಗೆ ಉತ್ಸವದ ಸಂಘಟಕರು ಸ್ವಹಸ್ತದಿಂದ ಗಣಪತಿಗೆ ಅಭಿಷೇಕವನ್ನು ಕೊಡುವ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದರು. ಮೂರ್ತಿ ವಿಸರ್ಜನೆಗೆ ಸಾವಿರಾರು ಜನರು ಸಾಕ್ಷಿಯಾದರು. ಗಣಪತಿ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಮಧ್ಯೆ ನಡೆಯಿತು.

ಆಯಾ ಗಣೇಶ ಮಂಡಳಿಯವರು ಅಲಂಕರಿಸಿದ ವಾಹನದಲ್ಲಿ ವಿಘ್ನವಿನಾಶಕನನ್ನು ಪ್ರತಿಷ್ಠಾಪಿಸಿ, ಗಣಪತಿ ಬಪ್ಪಾ ಮೋರಯಾ ಘೋಷಣೆಗಳೊಂದಿಗೆ ಡಿ.ಜಿ. ಹಚ್ಚಿಕೊಂಡು ಮೂರ್ತಿಗಳ ಮೆರವಣೆಗೆಯೊಂದಿಗೆ ಪಟಾಕಿ ಸಿಡಿಸುತ್ತಾ ಹೆಜ್ಜೆ ಹಾಕಿದರು. ಈ ಬಾರಿ ಪಟ್ಟಣ ಪಂಚಾಯತ ಅಧಿಕಾರಿಗಳು ವರ್ಚಗಲ್ ಕರೆಗಳ ಬಳಿ ನಿರ್ಮಿಸಿರುವ ಕೃತಕ ಹೊಂಡ ಸಜ್ಜುಗೊಳಿಸಿತ್ತು. ಜತೆಗೆ ಪ್ರಮುಖ ಸ್ಥಳಗಳಲ್ಲಿ ಮೊಬೈಲ್ ಟ್ಯಾಂಕ್‌ಗಳನ್ನು ವ್ಯವಸ್ಥೆ ಕೂಡ ಮಾಡಲಾಗಿತ್ತು. ಎಲ್ಲೂ ಕೆರೆಗೆ ನೇರವಾಗಿ ಮೂರ್ತಿಗಳನ್ನು ವಿಸರ್ಜಿಸಲು ನಿರ್ಬಂಧ ಇರುವುದರಿಂದ ನಾಗರಿಕರಿಗೆ ತೊಂದರೆ ಆಗದಂತೆ ಸಂಚಾರಿ ಟ್ಯಾಂಕ್‌ಗಳನ್ನು ಬಳಸಿಕೊಳ್ಳಲಾಯಿತು. ಈ ವ್ಯವಸ್ಥೆಯನ್ನು ಬಹಳಷ್ಟು ಜನರು ಬಳಸಿಕೊಂಡಿದ್ದಾರೆ ಎಂದು ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ತಿಳಿಸಿದರು.

ಸಮೀಪದ ಲಕ್ಷಾನಟ್ಟಿ, ಅರಳಿಕಟ್ಟಿ, ಜಾಲಿಕಟ್ಟಿ, ನಾಗಣಾಪುರ, ವೆಂಕಟಾಪುರ, ಬ್ರಾಹ್ಮಣ ಗಲ್ಲಿ, ಜ್ಞಾನೇಶ್ವರ ಮಠದ ಆವರಣ, ಶ್ರೀನಿವಾಸ ನಗರ, ಹೊಸಕೊಟಿ, ದಾದನಟ್ಟಿ ಗ್ರಾಮಗಳಲ್ಲಿ ಗಣೇಶನ ವಿಸರ್ಜನೆ ಮಾಡಲಾಯಿತು. ಕೆಲವೊಂದು ಗಣೇಶ ವಿಸರ್ಜನೆ ಭಾನುವಾರ ನೆರವೇರುವವು ಎಂದು ಗಣೇಶ ಮಂಡಳಿಯವರು ತಿಳಿಸಿದ್ದಾರೆ.

ಬುಧವಾರ ಜನತಾ ಪ್ಲಾಟ್‌, ಗೋಂಧಳಿ ಸಮಾಜದ ಭಾರತೀಯ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಗಣೇಶನ ಮೂರ್ತಿ ವಿಸರ್ಜಿನೆ ಮಾಡಲಾಯಿತು. ಈ ವೇಳೆ ಕುಣಿದು ಕುಪ್ಪಳಿಸುವ ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಈ ಗಣೇಶ ವಿಸರ್ಜನೆ ವೇಳೆ ಮೆರವಣೆಗೆ ಸಂತರ ದಿಂಡೆ, ಮಕ್ಕಳ ತಾಳ, ವಾದ್ಯ ಎಲ್ಲರಿಗೂ ಗಮನ ಸೆಳೆಯಿತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪಿಎಸ್‌ಐ ಕೆ.ಬಿ.ಜಕ್ಕನ್ನವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Share this article