2025ನೇ ವರ್ಷಕ್ಕೆ ಮಂಡ್ಯ ಜಿಲ್ಲೆಯ ಜನರಿಂದ ಸಂಭ್ರಮದ ಸ್ವಾಗತ

KannadaprabhaNewsNetwork |  
Published : Jan 02, 2025, 12:31 AM IST
1ಕೆಎಂಎನ್ ಡಿ20,21 | Kannada Prabha

ಸಾರಾಂಶ

2024, ಡಿಸೆಂಬರ್ 31 ವರ್ಷ ಮುಗಿದು ರಾತ್ರಿ 12 ಗಂಟೆಯಾಗುತ್ತಿದ್ದಂತೆ ಜಿಲ್ಲಾದ್ಯಂತ ಜನರು ಸಂಭ್ರಮದಿಂದ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಪರಸ್ಪರ ನೂತನ ವರ್ಷದ ಶುಭಾಶಯ ವಿನಿಯಮ ಮಾಡಿಕೊಂಡರು. ಕೆಲವರು ಹೊಸ ವರ್ಷವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಡಿ.31ರ ರಾತ್ರಿ ವಿವಿಧ ಸಿದ್ಧತೆಗಳನ್ನು ಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಮಂಡ್ಯ

2025ರ ಹೊಸ ವರ್ಷವನ್ನು ಜಿಲ್ಲೆಯ ಜನರು ಸಂಭ್ರಮದಿಂದ ಸ್ವಾಗತಿಸಿದರು.

2024, ಡಿಸೆಂಬರ್ 31 ವರ್ಷ ಮುಗಿದು ರಾತ್ರಿ 12 ಗಂಟೆಯಾಗುತ್ತಿದ್ದಂತೆ ಜಿಲ್ಲಾದ್ಯಂತ ಜನರು ಸಂಭ್ರಮದಿಂದ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಪರಸ್ಪರ ನೂತನ ವರ್ಷದ ಶುಭಾಶಯ ವಿನಿಯಮ ಮಾಡಿಕೊಂಡರು.

ಕೆಲವರು ಹೊಸ ವರ್ಷವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಡಿ.31ರ ರಾತ್ರಿ ವಿವಿಧ ಸಿದ್ಧತೆಗಳನ್ನು ಮಾಡಿಕೊಂಡರು. ಜಿಲ್ಲೆಯ ಬೇಕರಿಗಳಿಗೆ ಕೇಕ್ ಗಳನ್ನು ಕೊಳ್ಳಲು ಯುವಕರು, ಯುವತಿಯರು ಸೇರಿದಂತೆ ಮಕ್ಕಳು, ಹಿರಿಯ ನಾಯಕರೀಕರು ಮುಗಿಬಿದ್ದರು. ಮತ್ತೆ ಕೆಲವರು ಎಣ್ಣೆ ಪಾರ್ಟಿಗಾಗಿ ಬಾರ್ ಗಳಲ್ಲಿ ಮದ್ಯವನ್ನು ಕೊಳ್ಳಲು ಮುಂದಾದರು.

ರಾತ್ರಿ 12ರ ನಂತರ ತಮ್ಮ ಮನೆಗಳಲ್ಲಿ ಕುಟುಂಬ ಸಮೇತ ಹಾಗೂ ಅಕ್ಕಪಕ್ಕದ ಮನೆಯವರ ಸಹಕಾರದಿಂದ ಕೇಕ್ ಕತ್ತರಿಸಿ ಪರಸ್ಪರ ಸಿಹಿ ಹಂಚಿಕೊಂಡರೆ, ಮತ್ತೆ ಕೆಲವರು ಹೋಟೆಲ್‌ಗಳು, ಸಭಾಂಗಣದಲ್ಲಿ ಸೇರಿ ಕೇಕ್ , ಮದ್ಯದ ಪಾರ್ಟಿ ಮಾಡಿದರು. 12 ಗಂಟೆಯಾಗುತ್ತಿದ್ದಂತೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು 2025ನೇ ವರ್ಷವನ್ನು ಸಂಭ್ರಮದಿಂದ ಸ್ವಾಗತ ಮಾಡಿಕೊಂಡರು.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ತಮ್ಮ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಹಳ್ಳಿಗಳಲ್ಲಿ ಯುವಕ ತಂಡ ಜಮೀನುಗಳ ಬಳಿ ಪಾರ್ಟಿ ಮಾಡಿದ್ದು ಗಮನ ಸೆಳೆಯಿತು.

ಬಹುತೇಕ ಬೇಕರಿಗಳಲ್ಲಿ ವಿವಿಧ ಆಕರ್ಷಣೆಯ ಕೇಕ್ ಗಳನ್ನು ತಯಾರಿಸಿ ಹೊಸ ವರ್ಷಕ್ಕೆ ಜನರನ್ನು ಆಕರ್ಷಿಸಲು ಮುಂದಾಗಿದ್ದವು. ಹಲವೆಡೆಗಳಲ್ಲಿ ಮಾಂಸಹಾರದ ಅಂಗಡಿಗಳಿಗೆ ಜನರು ಮುಗಿಬಿದ್ದರು. ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಿಗೆ ನಿಷೇಧ ಹೇರಿದ್ದರಿಂದ ಸ್ವತಂತ್ರವಾಗಿ ಮೋಜು ಮಸ್ತಿ ಮಾಡಲು ಅವಕಾಶ ಸಿಗದಿರುವುದರಿಂದ ಕೆಲವರು ನಿರಾಸೆ ಅನುಭವಿಸಬೇಕಾಯಿತು.

ದೇಗುಲಗಳಿಗೆ ಭೇಟಿ, ಪೂಜೆ ಸಲ್ಲಿಕೆ:

2025ನೇ ಹೊಸ ವರ್ಷವನ್ನು ಸ್ವಾಗತಿಸಿದ ಜನರು ಬುಧವಾರ ಬೆಳಗ್ಗೆ ಜಿಲ್ಲೆಯ ವಿವಿಧ ದೇಗುಲಗಳಿಗೆ ಭೇಟಿ ನೀಡಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು. ಮಂಡ್ಯ ಗುತ್ತಲಿನ ಅರಕೇಶ್ವರ ದೇಗುಲ, ವಿದ್ಯಾನಗರದ ವಿದ್ಯಾಗಣಪತಿ ದೇವಾಲಯ, ಪೊಲೀಸ್ ಕಾಲೋನಿಯ ಚಾಮುಂಡೇಶ್ವರಿ ದೇಗುಲ, ಪೇಟೆ ಬೀದಿಯ ಕಾಳಿಕಾಂಬ ದೇವಾಲಯ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿರುವ ದೇಗುಲಗಳಿಗೆ ಸಾರ್ವಜನಿಕರು, ಮಹಿಳೆಯರು, ಮಕ್ಕಳು, ಯುವಕರು, ಯುವತಿಯರು ಕುಟುಂಬಸ್ಥರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು.

ಜಿಲ್ಲೆಯ ಸರ್ಕಾರಿ ಇಲಾಖೆಗಳಲ್ಲಿ ನೌಕರರು, ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಬ್ಯಾಂಕ್ ನೌಕರರು, ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳು ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿ 2025ನೇ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು