ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಶಿವಕುಮಾರ ಸಂಬರಗಿಮಠ ಸಭಾಭವನದಲ್ಲಿ ಲಿಂಗೈಕ್ಯ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಮಹಾಂತ ಶಿವಯೋಗಿಗಳು ಮನೆ ಮನೆಗೆ ತೆರಳಿ ಮದ್ಯ, ತಂಬಾಕು, ಬೀಡಿ, ಸಿಗರೇಟ್ ಸೇರಿದಂತೆ ಎಲ್ಲ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಸಿಕೊಳ್ಳುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣದ ಅಪರೂಪದ ಜಾಗೃತಿ ಅಭಿಯಾನ ನಡೆಸಿದ್ದರು. ಇಂದಿನ ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು ಆರೋಗ್ಯಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ಹಿರೇಮಠ ಮಾತನಾಡಿ, ಆಧುನಿಕ ಜೀವನಶೈಲಿಯಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ದುಶ್ಚಟಗಳಿಂದ ದೂರವಿಡುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಪ್ರಾಧ್ಯಾಪಕ ಎ.ಕೆ.ಪಾಟೀಲ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಠಗಳು ಸಮಾಜದ ಸಂಸ್ಕಾರ ನಿರ್ಮಾಣದ ಶಕ್ತಿ ಕೇಂದ್ರಗಳಾಗಿವೆ. ಡಾ.ಮಹಾಂತ ಶಿವಯೋಗಿಗಳು ಮಹಾಂತ ಜೋಳಿಗೆ ಮೂಲಕ ದುಶ್ಚಟಗಳ ಭಿಕ್ಷೆ ಬೇಡಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿದ್ದರು ಎಂದು ಹೇಳಿದರು.
ವಾರ್ತಾ ಇಲಾಖೆ ಸಹಾಯಕ ವಿಜಯಕುಮಾರ ಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಮಹಾಂತ ಶಿವಯೋಗಿಗಳ ಅಪೂರ್ವ ಸೇವೆಯನ್ನು ಗೌರವಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆಗಸ್ಟ್ 1ನ್ನು ವ್ಯಸನಮುಕ್ತ ದಿನಾಚರಣೆಯಾಗಿ ಆಚರಿಸುತ್ತಿದೆ. ಯುವಜನತೆ ದುಶ್ಚಟಗಳಿಂದ ದೂರವಿದ್ದು ಇತರರಲ್ಲಿಯೂ ಜಾಗೃತಿ ಮೂಡಿಸಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.