ಕನ್ನಡಪ್ರಭ ವಾರ್ತೆ ಲಿಂಗಸುಗೂರು (ರಾಯಚೂರು)
ಜಿಲ್ಲೆ ಲಿಂಗಸುಗೂರು ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯಲ್ಲಿನ ಮೈದಾನದಲ್ಲಿ ಮಂಗಳವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿಕಾರದ ಮದದಲ್ಲಿ ಮೆರೆಯುವ ರೈತ, ಜನ, ಪ್ರಗತಿ ಹಾಗೂ ಮಹಿಳಾ ವಿರೋಧಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರವನ್ನು ಕಿತ್ತೊಗೆಯುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಇದು ಚುನಾವಣಾ ಪ್ರಚಾರದ ಸಭೆ ಅಲ್ಲ; ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪದೊಂದಿಗೆ ಪ್ರಾರಂಭವಾಗಿರುವ ಹೋರಾಟವಾಗಿದೆ. ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಇದೆಯೇ? ಪ್ರತಿಯೊಂದಕ್ಕೂ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಕಾಲು ಹಿಡಿಯುವ ನೀವು ಮುಖ್ಯಮಂತ್ರಿಯೇ? ಇದು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದ ಅವರು, ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಜನ ಜಾಗೃತಿಗಾಗಿ ನಡೆಯುತ್ತಿರುವ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ನೀಡಬೇಕು.ಇದು ಹೋರಾಟದ ಮೊದಲ ಹೆಜ್ಜೆಯಾಗಿದ್ದು, ಭ್ರಷ್ಟ ಸರ್ಕಾರ ಮಾಡುತ್ತಿರುವ ಲೂಟಿ ವಿರುದ್ಧ ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಬರ ಘೋಷಣೆಯಲ್ಲಿ ಅನ್ಯಾಯ ಮಾಡಿರುವ ಸರ್ಕಾರವು, ಪರಿಹಾರ ಕ್ರಮವನ್ನು ಸಹ ಕೈಗೊಂಡಿಲ್ಲ. ಹೋರಾಟದ ಕಿಚ್ಚು ಆರಂಭಗೊಂಡಿದ್ದು, ಬಳ್ಳಾರಿ ತನಕ ನಡೆಯಲಿರುವ ಯಾತ್ರೆ ಯಲ್ಲಿ ಬಹಳದೊಡ್ಡ ಪ್ರಮಾಣದಲ್ಲಿ ಸಾಗಲಿದ್ದು, ಲೂಟಿ ಸರ್ಕಾರವನ್ನು ಜನ ಕ್ಷಮಿಸುವುದಿಲ್ಲ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಿಮ್ಮೆಲ್ಲರ ಬೆಂಬಲ ಇರಬೇಕು ಎಂದು ಕೋರಿದರು.
ಹಗಲು ದರೋಡೆಯಲ್ಲಿ ಕಾಂಗ್ರೆಸ್ ಸರ್ಕಾರ ಭಾಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಹಗಲು ದರೋಡೆಯಲ್ಲಿ ಭಾಗಿಯಾಗಿದೆ. ಹತ್ತು ಹಲವು ಅಜೆಂಡಾಗಳನ್ನು ಇಟ್ಟುಕೊಂಡು ಬಂದಿರುವ ಸರ್ಕಾರದ ವಿರುದ್ಧ ವಿಜಯೇಂದ್ರ ಸೇರಿ ಹಲವಾರು ನಾಯಕ ಪಾದಯಾತ್ರೆ ಕೈಗೊಂಡಿದ್ದು, ಕಾಂಗ್ರೆಸ್ ವಿರುದ್ಧ ಇರಂತರವಾಗಿ ಹೋರಾಟ ಮುಂದು ವರೆಯಲಿದೆ. ಇದು ಚುನಾವಣೆಯ ಗುರಿಯನ್ನಿಟ್ಟುಕೊಂಡು ಬಂದ ಹೋರಾಟವಲ್ಲ ಜನಾಭಿಪ್ರಾಯ ಮೂಡಿಸುವುದಕ್ಕಾಗಿ ನಡೆಸುತ್ತಿರೋ ಪಾದಯಾತ್ರೆ, ಸರ್ಕಾರದ ವೈಫಲ್ಯವನ್ನು ಜನರ ಮುಂದೆ ಇಡಲು ಹೋರಾಟ ನಡೆಸುತ್ತಿರುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.