ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ತಟ್ಟೆಕೆರೆ ಗ್ರಾಮದ ಸರ್ವೇ ನಂಬರ್ 5/3, 5/8,72, 73ರಲ್ಲಿ ಸರ್ವೇ ನಡೆಸಿ ನಕಾಶೆ ರಸ್ತೆ ಒತ್ತುವರಿ ತೆರವಿಗೆ ನೆಲಮಂಗಲ ತಹಸೀಲ್ದಾರ್ ಆದೇಶ ಮಾಡಿದ್ದರು. ಅದರಂತೆ ಮಂಗಳವಾರ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಸರ್ವೇ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಮುಂದಾದರು.
ಆಗ ಗ್ರಾಮಸ್ಥರು ನಾವು ಇದರ ಮುಂದುವರಿದ ಸರ್ವೇ ನಂಬರ್‍ಗಳಲ್ಲೂ ಒತ್ತುವರಿ ತೆರವಿಗೆ ತಹಸೀಲ್ದಾರರಿಗೆ ಮನವಿ ಮಾಡಿದ್ದು ಅದನ್ನು ಒಟ್ಟಿಗೆ ಸರ್ವೇ ನಡೆಸಿ ತೆರವು ಕಾರ್ಯ ಮಾಡಬೇಕು. ಇದಕ್ಕೆ ಯಾರ ವಿರೋಧವೂ ಇಲ್ಲ, ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಯಾರೋ ಕೆಲವರು ವೈಯಕ್ತಿಕ ಉದ್ದೇಶದಿಂದ ಆಯ್ದ ಕೆಲವು ಸರ್ವೇ ನಂಬರ್‍ಗಳನ್ನಷ್ಟೇ ಸರ್ವೇ ಮಾಡುವಂತೆ ತಿಳಿಸಿರುವುದು ಸರಿಯಲ್ಲ, ಮುಂದಿನ ಕೆಲದಿನಗಳಲ್ಲಿಯೇ ಎಲ್ಲಾ ಸರ್ವೇ ನಂಬರ್‍ಗಳಲ್ಲಿನ ನಕಾಶೆ ತೆರವು ಮಾಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರು.ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಕೆಆರ್‍ಎಸ್ ಪಕ್ಷದ ಟೀಶರ್ಟ್ ಧರಿಸಿದ್ದ ಕೆಲವರು ಏಕಾಏಕಿ ಅಧಿಕಾರಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾ ವಿಡಿಯೋ ಮಾಡಲು ಮುಂದಾದಾಗ ಕೆರಳಿದ ಗ್ರಾಮಸ್ಥರು ಇದು ನಮ್ಮ ಗ್ರಾಮಸ್ಥರ ಸಮಸ್ಯೆ, ನಿಮಗೂ ಇದಕ್ಕೂ ಏನು ಸಂಬಂಧ? ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು? ನೀವು ಸಮಸ್ಯೆಯನ್ನು ಇನ್ನಷ್ಟು ದೊಡ್ಡದು ಮಾಡಲು ಬಂದಿದ್ದೀರಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಗಲಾಟೆ ಜಾಸ್ತಿಯಾಗುತ್ತಿದ್ದಂತೆ ಕೆಆರ್ ಎಸ್ ಪಕ್ಷದವರು ಘಟನಾ ಸ್ಥಳದಿಂದ ನಿರ್ಗಮಿಸಿದರು.