ಕನ್ನಡಪ್ರಭ ವಾರ್ತೆ ಕುಶಾಲನಗರ ಸಾರ್ವಜನಿಕರು, ಸಂಘ ಸಂಸ್ಥೆಗಳು ಪುರಸಭೆಯೊಂದಿಗೆ ಕೈಜೋಡಿಸಿದಲ್ಲಿ ಕುಶಾಲನಗರದಲ್ಲಿ ಸ್ವಚ್ಛ ಪಟ್ಟಣ ಹಾಗೂ ಸ್ವಚ್ಛ ಕಾವೇರಿ ನಿರ್ಮಾಣ ಸಾಧ್ಯ ಎಂದು ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್ ಹೇಳಿದರು. ಅವರು ಕುಶಾಲನಗರದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕಾವೇರಿ ರಿವರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪುರಸಭೆ, ಕುಶಾಲನಗರ ಮಾಜಿ ಸೈನಿಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಲಯನ್ಸ್ ಕುಶಾಲನಗರ ಸಹಯೋಗದೊಂದಿಗೆ ನಡೆದ ಸರಳ ಗಾಂಧಿ ಜಯಂತಿ ಕಾರ್ಯಕ್ರಮ ಮತ್ತು ಕುಶಾಲನಗರ ಕೊಪ್ಪ ಕಾವೇರಿ ಸೇತುವೆಗಳ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕುಶಾಲನಗರ ಪುರಸಭೆಯಿಂದ ನಿರಂತರವಾಗಿ ಸ್ವಚ್ಛತಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿರ್ಬಂಧ ನಿರ್ಣಯ ಕೈಗೊಳ್ಳಲಾಗಿದೆ. ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸ್ಥಳೀಯ ಯೋಜನೆಗಳು ಯಶಸ್ಸು ಕಾಣಲು ಸಾಧ್ಯ ಎಂದು ತಿಳಿಸಿ ಪ್ರತಿಯೊಬ್ಬರೂ ಕೈಜೋಡಿಸುವಂತೆ ಮನವಿ ಮಾಡಿದರು. ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಬಿ ಎಸ್ ದಿನೇಶ್ ಕುಮಾರ್ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಕುಶಾಲನಗರ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಹಾನರರಿ ಕ್ಯಾಪ್ಟನ್ ಸುರೇಶ್, ಖಜಾಂಚಿ ನರೇಶ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರಾದ ಜ್ಯೋತಿ ಕುದುಪಜೆ, ದಿವ್ಯ ದೇವಾಂಗ, ರೂಪ ಗಣೇಶ್, ಲಯನ್ಸ್ ಕ್ಲಬ್ ಪ್ರಮುಖರಾದ ಕೆ ಬಿ ಗಣೇಶ್, ಎಂ ಎಸ್ ಗಣೇಶ, ಪುರಸಭೆ ದಪೇಧಾರ್ ಮೋಹನ್ ಕುಮಾರ್, ಪೌರ ಸಿಬ್ಬಂದಿಗಳು ಮತ್ತು ಸಂಘ ಸಂಸ್ಥೆಗಳ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.