ರಸ್ತೆ ಮಧ್ಯೆ ಕುಸಿದ ಸೇತುವೆ, ಅಪಾಯಕ್ಕೆ ಅಹ್ವಾನ

KannadaprabhaNewsNetwork | Published : Jul 19, 2024 12:51 AM

ಸಾರಾಂಶ

ಮಳೆಗಾಲದಲ್ಲಿ ರಸ್ತೆಯಲ್ಲಿ ಗುಂಡಿ ಯಾವುದು ರಸ್ತೆ ಯಾವುದು ಎನ್ನುವದನ್ನು ಗುರುತಿಸಲು ಆಗದೆ ಬೈಕ್ ಸವಾರರು

ಲಕ್ಷ್ಮೇಶ್ವರ: ಸೂರಣಗಿ ಗ್ರಾಮದಿಂದ ಬಾಲೆಹೊಸೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿ ಸೇತುವೆಯು ಕುಸಿದು ಹೋಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.

ಸೂರಣಗಿ ಗ್ರಾಮದಿಂದ ಬಾಲೆಹೊಸೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯು ಕಳೆದ 7-8 ವರ್ಷಗಳಿಂದ ಸಂಪೂರ್ಣ ಕಿತ್ತು ಹೋಗಿದ್ದರೂ ಅಧಿಕಾರಿಗಳು ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಈಗ ಈ ರಸ್ತೆಯ ಮಧ್ಯದಲ್ಲಿ ಕಳೆದ ಎರಡು ದಿನಗಳ ಹಿಂದೆ ಅತಿಯಾದ ಮಳೆಗೆ ಸೇತುವೆಯು ಕುಸಿದು ಹೋಗಿದ್ದು, ರಸ್ತೆಯ ಮೇಲೆ ಸಂಚಾರ ಮಾಡುವುದು ಪ್ರಾಣಕ್ಕೆ ಸಂಚಕಾರ ತಂದು ಕೊಂಡಂತಾಗಿದೆ. ಈ ರಸ್ತೆಯ ಮೇಲೆ ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿದ್ದರೂ ಅಧಿಕಾರಿಗಳಿಗೆ ಇದರ ಬಗ್ಗೆ ಕಾಳಜಿ ಇಲ್ಲದಂತಾಗಿರುವುದು ನೋವಿನ ಸಂಗತಿಯಾಗಿದೆ.

ಸೂರಣಗಿಯಿಂದ ಬಾಲೆಹೊಸೂರಗೆ ಹೋಗುವ ರಸ್ತೆಯಲ್ಲಿ ಲಕ್ಷಾಂತರ ಖರ್ಚು ಮಾಡಿ ಹಲವಾರು ಬಾರಿ ಪಾರ್ಟ ಹೋಲ್ ತುಂಬುವ ಕಾರ್ಯವಾಗಿದ್ದರೂ ಅದು ರಾವಣ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಲಕ್ಷ್ಮೇಶ್ವರ ಪಟ್ಟಣಕ್ಕೆ ನೀರು ಪೂರೈಸುವ ಶುದ್ದ ಘಟಕದ ಹತ್ತಿರ ಗುಂಡಿಗಳು ಬಿದ್ದು ಹಲವು ವರ್ಷಗಳು ಕಳೆದರೂ ಅದನ್ನು ಮುಚ್ಚುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ, ಖಡಿ ಮತ್ತು ಮಣ್ಣು ಹಾಕಿ ಪಾರ್ಟ ಹೋಲ್ ತುಂಬಿದ್ದು ಮಳೆಗಾಲದಲ್ಲಿ ರಸ್ತೆಯಲ್ಲಿ ಗುಂಡಿ ಯಾವುದು ರಸ್ತೆ ಯಾವುದು ಎನ್ನುವದನ್ನು ಗುರುತಿಸಲು ಆಗದೆ ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿರುವ ಹಾಗೂ ಪ್ರಾಣಕ್ಕೆ ಅಪಾಯ ತಂದಿರುವ ಘಟನೆ ನಡೆದಿವೆ.

ಇಷ್ಟಾದರೂ ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದಾರೆ ಎಂಬುದು ಬಾಲೆಹೊಸೂರ ಗ್ರಾಮದ ಸುರೇಶ ಹಾವನೂರ, ಜುಂಜಪ್ಪ ಮುದಿಯಮ್ಮನವರ ಆರೋಪಿಸಿದ್ದಾರೆ. ಇದೆ ರಸ್ತೆಯ ಮೇಲೆ ಸೇತುವೆ ಕುಸಿದು ಅಪಾಯಕ್ಕೆ ಅಹ್ವಾನ ನೀಡುತ್ತಿದ್ದರೂ ಅಧಿಕಾರಿಗಳು ಮಾತ್ರ ಈ ರಸ್ತೆಯ ಗೋಜಿಗೆ ಹೋಗುತ್ತಿಲ್ಲ ಎಂಬುದು ನೋವಿನ ಸಂಗತಿಯಾಗಿದೆ.

ಸೂರಣಗಿ-ಬಾಲೆಹೊಸೂರ ರಸ್ತೆಯನ್ನು ಶೀಘ್ರದಲ್ಲಿ ದುರಸ್ತಿಗೊಳಿಸದೆ ಹೋದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಫಕ್ಕೀರೇಶ ಮ್ಯಾಟಣ್ಣವರ ತಿಳಿಸಿದ್ದಾರೆ.

Share this article