ಕೆರೆಗಳ ಸಂರಕ್ಷಣೆಗೆ ಸರ್ಕಾರ ನಿರ್ಲಕ್ಷ್ಯ ತೋರುವುದು ಬೇಡ: ಸದಾಶಿವ ಶ್ರೀಗಳು

KannadaprabhaNewsNetwork |  
Published : Jul 19, 2024, 12:51 AM IST
ಮ | Kannada Prabha

ಸಾರಾಂಶ

ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ 1500ಕ್ಕೂ ಅಧಿಕ ಕೆರೆಗಳು ಭೂಪಟದಿಂದ ಮಾಯವಾಗಿವೆ. ಪರಿಣಾಮ ಕುಡಿಯುವ ನೀರಿಗಾಗಿ ಕಿಲೋಮೀಟರ್‌ಗಟ್ಟಲೇ ತೆರಳಬೇಕಾಗಿದೆ ಎಂದು ಹಳ್ಳಿಬೈಲ್ ಶಿವಲಿಂಗೇಶ್ವರ ಮಠದ ಸದಾಶಿವ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಬ್ಯಾಡಗಿ: ಕೆರೆಗಳ ಸಂರಕ್ಷಣೆಗೆ ನಿರ್ಲಕ್ಷ್ಯ ತೋರುವ ಯಾವುದೇ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಕಳೆದುಕೊಳ್ಳಲಿವೆ ಎಂದು ಹಳ್ಳಿಬೈಲ್ ಶಿವಲಿಂಗೇಶ್ವರ ಮಠದ ಸದಾಶಿವ ಶ್ರೀಗಳು ಹೇಳಿದರು.

ತಾಲೂಕಿನ ಘಾಳಪೂಜಿಯಲ್ಲಿ ಮನುವಿಕಾಸ ಸ್ವಯಂಸೇವಾ ಸಂಸ್ಥೆ ಆಶ್ರಯದಲ್ಲಿ ಬೆಂಗಳೂರಿನ ಹಸ್ತ ಟ್ರಸ್ಟ್‌ ಸಹಯೋಗದೊಂದಿಗೆ, ಗ್ರಾಪಂ ಘಾಳಪೂಜಿ, ಆಂಜನೇಯ ದೇವಸ್ಥಾನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಅಭಿವೃದ್ಧಿಪಡಿಸಿದ ವಡ್ಡಿನಕಟ್ಟೆ ಕೆರೆ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜನರಿಗೆ ಕೆರೆಗಳು ಜೀವಜಲದ ಮೂಲವಾಗಿವೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ 1500ಕ್ಕೂ ಅಧಿಕ ಕೆರೆಗಳು ಭೂಪಟದಿಂದ ಮಾಯವಾಗಿವೆ. ಪರಿಣಾಮ ಕುಡಿಯುವ ನೀರಿಗಾಗಿ ಕಿಲೋಮೀಟರ್‌ಗಟ್ಟಲೇ ತೆರಳಬೇಕಾಗಿದೆ ಎಂದು ಹೇಳಿದರು.

ಅಂತರ್ಜಲಮಟ್ಟ ಹೆಚ್ಚಿಸಿಕೊಳ್ಳಲು ಕೆರೆಗಳು ಅವಶ್ಯಕ. ಇವುಗಳನ್ನು ರಕ್ಷಿಸಿ, ಪುನರುಜ್ಜೀವನಗೊಳಿಸಲು ಮೀನಮೇಷ ನೋಡದೇ ಅಗತ್ಯವಿರುವ ಕ್ರಮಗಳನ್ನು ಆಡಳಿತಾರೂಢ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನರಿಗೆ ಕುಡಿಯುವ ನೀರು ಪೂರೈಸಲು ಸರ್ಕಾರದಲ್ಲಿರುವ ಯಾವುದೇ ಹಣ ಸಾಕಾಗುವುದಿಲ್ಲ ಎಂದರು.

ಬಹುತೇಕ ಸರ್ಕಾರಗಳು ಆಯಾಕಾಲ ಘಟ್ಟದಲ್ಲಿ ಕೆರೆಗಳನ್ನು ನಿರ್ಮಿಸಿದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು ಎಂದು ಆರೋಪಿಸಿದ ಶ್ರೀಗಳು, ನಗರದಲ್ಲಿರುವ ಕೆರೆಗಳನ್ನು ಮುಚ್ಚಿ ವಸತಿಪ್ರದೇಶ ನಿರ್ಮಿಸಿದ್ದರೆ, ಗ್ರಾಮೀಣ ಭಾಗದಲ್ಲಿ ಒತ್ತುವರಿ ಮಾಡಿಕೊಳ್ಳುವ ಮೂಲಕ ಹೊಲಗಳನ್ನು ನಿರ್ಮಿಸಿಕೊಂಡಿದ್ದಾರೆ. ಎರಡೂ ವಿಷಯಗಳು ಭವಿಷ್ಯದಲ್ಲಿ ಬಹಳಷ್ಟು ಮಾರಕವಾಗಿದ್ದು, ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸುತ್ತಿರುವ ಮನುವಿಕಾಸ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಮನು ವಿಕಾಸ ಸಂಸ್ಥೆಯ ಮುಖ್ಯಸ್ಥ ಗಣಪತಿ ಭಟ್ ಮಾತನಾಡಿ, ಕೆರೆ-ಕಟ್ಟೆಗಳು ಸಾವಿರಾರು ವರ್ಷಗಳ ಪರಂಪರೆ ಹೊಂದಿವೆ. ಬಹು ಹಿಂದಿನಿಂದಲೂ ರೈತರು ಹಾಗೂ ಗ್ರಾಮದ ಹಿರಿಯರು ಕೆರೆ ಹಾಗೂ ಬಾವಿಗಳನ್ನು ತೋಡಿಸಿ ಜಲಸಂರಕ್ಷಣೆಗೆ ಒತ್ತು ನೀಡಿದ್ದರು. ಮಲೆನಾಡಿನಲ್ಲಿ ಕೆರೆಗಳು ನೀರಾವರಿ ಮೂಲವಾಗಿದ್ದು, ಲಕ್ಷಾಂತರ ಎಕರೆ ಕೃಷಿಭೂಮಿಗೆ ನೀರುಣಿಸುತ್ತಿವೆ. ರೈತ ಸಮುದಾಯ ಬರಗಾಲ, ಅಂತರ್ಜಲ ಕುಸಿತ, ಕುಡಿಯುವ ನೀರಿನ ಬವಣೆ ಉಂಟಾಗದಂತೆ ಮುಂಜಾಗ್ರತೆಯಾಗಿ ಊರಿನ ಎಲ್ಲ ಕೆರೆಕಟ್ಟೆಗಳ ಹೂಳೆತ್ತಿ ನೀರು ಸಂಗ್ರಹಿಸಿಕೊಳ್ಳಬೇಕು ಎಂದರು.

ಸಂಸ್ಥೆಯು ಶಿವಮೊಗ್ಗ ಹಾವೇರಿ ಧಾರವಾಡ ಉತ್ತರ ಕನ್ನಡ 4 ಜಿಲ್ಲೆಗಳಲ್ಲಿ 280ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ದಿಪಡಿಸಿದೆ. ಬ್ಯಾಡಗಿ ತಾಲೂಕಿನಲ್ಲಿ 19, ಹಾನಗಲ್ಲನಲ್ಲಿ 73, ಹಿರೇಕೆರೂರಲ್ಲಿ 3, ಶಿಗ್ಗಾಂವಿಯಲ್ಲಿ 9 ಹಾವೇರಿಯಲ್ಲಿ 1 ಸೇರಿದಂತೆ ಹಾವೇರಿ ಜಿಲ್ಲೆಯಲ್ಲಿ 105 ಅಭಿವೃದ್ಧಿಪಡಿಸಿದೆ. ರೈತನ ಬಾಳುಹಸನು ಮಾಡುವುದು, ಪರಿಸರ ಕಾಪಾಡುವುದು, ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವ ಧ್ಯೇಯ ಸಂಸ್ಥೆ ಹೊಂದಿದೆ ಎಂದರು.

ಗ್ರಾಪಂ ಅಧ್ಯಕ್ಷ ಮಂಜಪ್ಪ ಅಂಗರಗಟ್ಟಿ, ಸದಸ್ಯರಾದ ಕವಿತಾ ತಳವಾರ, ಹನುಮಂತಪ್ಪ ಕೆಪ್ಪೇರ, ಚಂದ್ರಪ್ಪ ಗೂಳೇರ, ಫಕ್ಕೀರೇಶ ಕಳ್ಳಿಮನಿ, ಕುಸುಮವ್ವ ಕೆಪ್ಪೇರ, ಮಂಗಳ ಲಂಕೇರ, ಹನುಮಂತಪ್ಪ ಹಂಚಿನ ಗೌಡ್ರ, ಚಂದ್ರಶೇಖರ ಸವದತ್ತಿ, ಹುಚ್ಚಯ್ಯ ಹಮ್ಮಿಗಿ, ಕೆ. ಮಾರುತಿ, ಪಿಡಿಒ ಗೌಸ್‌ಮೋಹಿದ್ದೀನ್‌ ತಹಶೀಲ್ದಾರ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ