ಅರಕಲಗೂಡು: ರಾಮನಾಥಪುರ ಹೋಬಳಿ ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ 22ನೇ ಸಂಗೀತೋತ್ಸವದಲ್ಲಿ ಪ್ರಸಿದ್ಧ ಕಲಾವಿದರು ಸಂಗೀತ ಕಚೇರಿ ಪ್ರಸ್ತುತ ಪಡಿಸಿ ರಾಗಸುಧೆ ಹರಿಸಿ ಪ್ರೇಕ್ಷಕರನ್ನು ರಂಜಿಸಿದರು.ವಿದ್ವಾನ್ ಚಂದನ್ ಕುಮಾರ್ ಎರಡು ತಾಸು ನಿರಂತರವಾಗಿ ನುಡಿಸಿದ ಕೊಳಲು ವಾದನದ ನೀನಾದ ಜನರನ್ನು ನಾದಲೋಕದಲ್ಲಿ ತೇಲಿಸಿತು. ಪುರಂದರ ದಾಸರ ಗಜವದನ ಬೇಡುವೆ, ಮುತ್ತುಸ್ವಾಮಿ ದೀಕ್ಷಿತರ ಅಖಿಲಾಂಡೇಶ್ವರಿ - ದ್ವಿಜಾವಂತಿ ಆದಿತಾಳದಲ್ಲಿ ಹಾಗೂ ಪಿಟೀಲು ಚೌಡಯ್ಯ ಅವರ ಶ್ರೀರಾಮ ಆನಂದಭೈರವಿ ಖಂಡ ಛಾಪು, ತ್ಯಾಗರಾಜರ ವರನಾರದ ವಿಜಯಶ್ರೀ ಆದಿ ತಾಳದಲ್ಲಿ ಮತ್ತು ಮಿಶ್ರ ತ್ರಿಪುಟ ಕಲ್ಯಾಣಿ ರಾಗ - ತಾನ-ಪಲ್ಲವಿ ನುಡಿಸಿ ಜನಮನಗೆದ್ದರು. ವಿದ್ವಾನ್ ಸಿಂಧು ಪಿಟೀಲು, ವಿದ್ವಾನ್ ಸಿ. ಚೆಲುವರಾಜು ಮೃದಂಗ, ವಿದ್ವಾನ್ ಜಿ.ಎಸ್. ರಾಮಾನುಜನ್ ಘಟ ನುಡಿಸಿ ಸಾಥ್ ನೀಡಿದರು.ಸಂಗೀತ ಕಚೇರಿ ನಡೆಸಿಕೊಟ್ಟ ಕಲಾವಿದರನ್ನು ವಿದ್ವಾನ್ ಆರ್.ಕೆ. ಪದ್ಮನಾಭ ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.