ಕನ್ನಡಪ್ರಭ ವಾರ್ತೆ ಮಂಡ್ಯ
ಶಿಷ್ಠ ಸಂಗೀತ ವೈಭವಿಸುತ್ತಿರುವ ಕಾಲಘಟ್ಟದಲ್ಲಿ ಶ್ರಮ ಸಂಸ್ಕೃತಿಯ ಪ್ರತೀಕವಾದ ತತ್ವಪದಗಳ ಗಾಯನ ಸಮಾವೇಶವು ಗಮನ ಸೆಳೆಯಿತು. ಶಿಶು ಮಕ್ಕಳು, ತತ್ವಪದಗಾರರ ಕಂಠಸಿರಿಯಿಂದ ಹೊರಹೊಮ್ಮಿದ ತತ್ವಪದಗಳು ನೆರೆದಿದ್ದ ಜನರ ಆತ್ಮ ಮತ್ತು ಪರಮಾತ್ಮನ ನಡುವೆ ಸಮನ್ವಯಕ್ಕೆ ಸಾಧಿಸುವಂತೆ ಮಾಡಿದ್ದವು. ತತ್ವಪದಗಳ ರಾಗಕ್ಕೆ ತಕ್ಕಂತೆ ಏಕತಾರಿ, ದಮ್ಮಡಿ, ಚಿಟಕ ತಾಳ, ಕಂಚಿನ ತಾಳದ ಸದ್ದು ಮೇಳೈಸಿತ್ತು.
ಎರಡು ದಿನಗಳ ಕಾಲ ಆಯೋಜನೆಗೊಂಡಿರುವ ಕರ್ನಾಟಕ ತತ್ವಪದ ಗಾಯನ ಸಮಾವೇಶಕ್ಕೆ ಮಂಡ್ಯ, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ಕಲಬುರಗಿ, ಚಿತ್ರದುರ್ಗ, ಬೆಂಗಳೂರು ದಕ್ಷಿಣ, ಬಾಗಲಕೋಟೆ, ಚಿಕ್ಕಮಗಳೂರು ಸೇರಿದಂತೆ ನಾನಾ ಭಾಗಗಳಿಂದ ನೂರಾರು ತತ್ವಪದಗಾರರು ಆಗಮಿಸಿದ್ದರು. ಎಲ್ಲರಿಗೂ ಶ್ರೀಮಠದ ವಿಶ್ವಮಾನವ ಕ್ಷೇತ್ರದಲ್ಲಿ ವಸತಿ, ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.ವೇದಿಕೆ ಸಮಾರಂಭಕ್ಕೆ ಮುನ್ನವೇ ಆರಂಭಗೊಡ ತತ್ವಪದಗಳ ಗಾಯನವು, ಉದ್ಘಾಟನಾ ಸಮಾರಂಭದ ಬಳಿಕವೂ ಮುಂದುವರೆದಿದ್ದವು. ಚಿಂತಕಿ ಡಾ.ಮೀನಾಕ್ಷಿ ಬಾಳಿ, ಡಾ.ಚಕ್ಕೆರೆ ಶಿವಶಂಕರ ಅವರು ತತ್ವಪದಗಳ ಗೂಢಾರ್ಥವನ್ನು ಬಿಡಿಸಿ ಹೇಳುವ ಮೂಲಕ ಅವುಗಳಲ್ಲಿನ ಬದುಕಿನ ಸಾರ, ಜೀವನ ತತ್ವ ಮತ್ತು ಮೌಲ್ಯಗಳನ್ನು ಅನಾವರಣಗೊಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಮಂಡ್ಯದ ಕರ್ನಾಟಕ ಸಂಘ, ಕರ್ನಾಟಕ ಜಾನಪದ ಪರಿಷತ್ತು ಈ ಸಮಾವೇಶ ಸಂಘಟಿಸಿತ್ತು.
ಬದುಕಿನ ರೀತಿ-ನೀತಿಯನ್ನು ಸಾರಿದ ತತ್ವಪದಗಳ ಗಾಯನ
ಶೀಘ್ರ ಬುಡಕಟ್ಟು ತತ್ವಪದಗಳ ಗಾಯನ ಸಮಾವೇಶ: ಕಾ.ತ.ಚಿಕ್ಕಣ್ಣ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮದ ಮೂಲಕ ಪ್ರೇಮ, ಸಹಬಾಳ್ವೆ, ಸಮತೆ, ಕಾಯಕವನ್ನು ಸಾರುವ ಧ್ಯೇಯವನ್ನು ತತ್ವಗಳು ಹೊಂದಿವೆ. ತತ್ವಪದಗಳನ್ನು ಸಂಗ್ರಹಿಸಿ ೫೦ ಬೃಹತ್ ಸಂಪುಟಗಳನ್ನು ಹೊರತರಲಾಗಿದೆ. ಅದೇ ರೀತಿ ಬಿಟ್ಟುಹೋಗಿರುವ ತತ್ವಪದಗಳು ಸಾಕಷ್ಟಿದ್ದು ಅವುಗಳನ್ನು ಸಂಗ್ರಹಿಸಿ ಸಂಪುಟ ತಯಾರಿಸುವ ಕೆಲಸ ನಡೆದಿದೆ. ಶೀಘ್ರದಲ್ಲೇ ಬುಡುಕಟ್ಟು ತತ್ವಪದಗಳ ಗಾಯನ ಸಮಾವೇಶವನ್ನು ನಡೆಸಲಾಗುವುದು ಎಂದರು.
ಲಿಂಗ, ವರ್ಣ, ಜಾತಿ, ಧರ್ಮಗಳ ನಡುವಿನ ತಿಕ್ಕಾಟ ಮತ್ತು ರಾಜಕೀಯ ವಿಪ್ಲವದಿಂದ ಮನುಷ್ಯರ ಮನಸುಗಳು ಒಡೆದ ಸಂದರ್ಭದಲ್ಲಿ ತತ್ವಪದಗಳು ಬೆಳಕು ಕೊಟ್ಟಿವೆ. ಹೊರಗೆಲ್ಲ ಕತ್ತಲು ಆವರಿಸಿದಾಗ, ಅಂತರಂಗದಲ್ಲಿ ಬೆಳಕು ಹೊತ್ತಿಸಿವೆ. ಹೀಗಾಗಿ ತತ್ವಪದಕಾರರನ್ನು ಕತ್ತಲೆ ಲೋಕದ ಅನುಸಂಧಾನಿಗಳು’ ಎನ್ನಬಹುದು ಎಂದು ಸಾಮಾಜಿಕ ಹೋರಾಟಗಾರ್ತಿ ಲೇಖಕಿ ಮೀನಾಕ್ಷಿ ಬಾಳಿ ಅಭಿಪ್ರಾಯಪಟ್ಟರು.
ವಚನ ಸಾಹಿತ್ಯ, ದಾಸ ಸಾಹಿತ್ಯ ಬಂದ ನಂತರ ೧೬ರಿಂದ ೧೯ನೇ ಶತಮಾನದಲ್ಲಿ ಯಾವುದೇ ಸಾಹಿತ್ಯ ಪ್ರಕಾರ ಮೇಳೈಸಲಿಲ್ಲ ಎಂಬ ಕಾರಣದಿಂದ ಇದನ್ನು ‘ಕತ್ತಲ ಯುಗ’ ಎಂದು ಸಾಹಿತ್ಯ ಚರಿತ್ರೆಕಾರರು ಕರೆದರು. ಆದರೆ, ಈ ಯುಗದಲ್ಲಿ ಮಂಟೆಸ್ವಾಮಿ, ಮಲೆ ಮಹದೇಶ್ವರ, ಮೈಲಾರಲಿಂಗ, ಯಲ್ಲಮ್ಮನ ಕುರಿತು ಕಾವ್ಯ ಸೃಷ್ಟಿಯಾಗಿವೆ. ಒಟ್ಟಾರೆ ೨೧ ಜನಪದ ಮಹಾಕಾವ್ಯಗಳು ಸಿಕ್ಕಿವೆ. ಇವು ಜನಸಾಮಾನ್ಯರ ಚರಿತ್ರೆಯನ್ನು ಕಟ್ಟಿಕೊಟ್ಟಿವೆ’ ಎಂದು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಹೇಳಿದರು.
ತತ್ವಪದಗಳು ನೀತಿ ಹೇಳುತ್ತವೆ. ಆತ್ಮ-ಪರಮಾತ್ಮ ನಡುವಿನ ಸಂಬಂಧ ತಿಳಿಸುತ್ತವೆ. ಗುರು ಮುಖೇನ ಭಗವಂತನನ್ನು ಕಾಣುವ ಪರಂಪರೆಯಾಗಿವೆ. ಶ್ರಮಿಕ ವರ್ಗಕ್ಕೆ ಸೇರಿದ ಈ ತತ್ವಪದಕಾರರಿಗೆ ತರಬೇತಿ ನೀಡಿ, ವೇದಿಕೆ ಕಲ್ಪಿಸುವ ಕೆಲಸವನ್ನು ಕರ್ನಾಟಕ ಸಂಘ ಮಾಡುತ್ತಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ತಿಳಿಸಿದರು.
ಪ್ರತಿ ಜಿಲ್ಲೆಯಲ್ಲೂ ರಂಗಮಂದಿರ ಮತ್ತು ಕಲಾವಿದರ ವಾಸ್ತವ್ಯಕ್ಕೆ ಕೊಠಡಿ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ವೇದಿಕೆಯಲ್ಲಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರಲ್ಲಿ ಮನವಿ ಮಾಡಿದರು.