ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ವಿಚಾರದಲ್ಲಿ ಮಾತ್ರ ನುಡಿದಂತೆ ನಡೆಯುತ್ತಿದೆ. ಕೇವಲ ಅಲ್ಪಸಂಖ್ಯಾತರ ಮತಗಳನ್ನು ಪಡೆದು ಅಧಿಕಾರಕ್ಕೆ ಈ ಸರ್ಕಾರ ಬಂದಿದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದರು.ಪಟ್ಟಣದ ಕೋಟೆಯ ಮುಂಭಾಗದಲ್ಲಿ ಶನಿವಾರ ನಡೆದ ಬಿಜೆಪಿ ಪಕ್ಷದ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ₹10 ಸಾವಿರ ಕೋಟಿ ಘೋಷಣೆ ಮಾಡುತ್ತಾರೆ. ರೈತರಿಗೆ ಪರಿಹಾರ ಕಲ್ಪಿಸಲು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದರೇ ಖಜಾನೆಯಲ್ಲಿ ದುಡ್ಡಿಲ್ಲ ಎಂದು ಹೇಳುತ್ತಾರೆ. ಭಿಕ್ಷೆಯ ರೂಪದಲ್ಲಿ ಕೇವಲ ₹2 ಸಾವಿರ ನೀಡುವ ಮೂಲಕ ರೈತಾಪಿ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ. ಇದು ಏಷ್ಟು ಸರಿ ಎಂದು ಪ್ರಶ್ನಿಸಿದರು.
ಯುವತಿಯರು, ಮಹಿಳೆಯರು ಸುರಕ್ಷಿತವಾಗಿರದಂತಹ ವಾತಾವರಣ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯದಲ್ಲಿ ಬರಗಾಲ ಎದುರಾಗಿದೆ. ರೈತಾಪಿ ವರ್ಗ ಮಳೆ, ಬೆಳೆ ಇಲ್ಲದೇ ನಷ್ಟದಲ್ಲಿದೆ ಇದರಿಂದ ದಿನ ಸಾಗಿಸುವುದು ಸಹ ಕಷ್ಟವಾದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ದೂರಿದರು.ನಮ್ಮ ತಂದೆ ಯಡಿಯೂರಪ್ಪನವರು ಪಕ್ಷ ಕಟ್ಟಿ ಬೆಳೆಸಲು ಅಪಾರ ಶ್ರಮ ವಹಿಸಿದ್ದಾರೆ. ಪಣತೊಟ್ಟು ಬಿಜೆಪಿ ಬೆಳೆಸಿದ್ದಾರೆ. ಅದರಂತೆಯೇ ನಾನು ಕೂಡ ಸಂಕಲ್ಪ ಮಾಡಿದ್ದು ರಾಜ್ಯದ ಮೂಲೆ ಮೂಲೆಗೂ ತೆರಳಿ ಪಕ್ಷ ಕಟ್ಟಿ ಬೆಳೆಸಿ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಸಂಕಲ್ಪ ನನ್ನದಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಯಡಿಯೂರಪ್ಪನವರು ಹಾಗೂ ಬೊಮ್ಮಾಯಿ ಮುಖ್ಯಮಂತ್ರಿಗಳಿದ್ದಾಗ ಕಿತ್ತೂರು ಕ್ಷೇತ್ರಕ್ಕೆ ₹2,500 ಕೋಟಿ ಅನುದಾನ ನೀಡಿದ್ದರು. ನೀರಾವರಿ ಸೇರಿದಂತೆ ಶಾಲೆ, ರಸ್ತೆ, ಹೊಲಗಳಿಗೆ ಹೋಗುವ ರಸ್ತೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕಿತ್ತೂರು ಮಾರ್ಗವಾಗಿ ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕೂ ಅನುಮೋದನೆ ಬಿಜೆಪಿ ಸರ್ಕಾರವಿದ್ದಾಗ ದೊರೆತಿದೆ ಎಂದು ತಿಳಿಸಿದರು.ಬಿಜೆಪಿ ನಾಯಕಿ ಲಕ್ಷ್ಮೀ ಇನಾಮದಾರ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಮಾತನಾಡಿದರು. ಚನ್ನಮ್ಮಾಜಿಗೆ ಮಾಲಾರ್ಪಣೆ ಮಾಡಿ ಪಟ್ಟಣದ ಮುಖ್ಯ ಬೀದಿಯಲ್ಲಿ ಬೈಕ್ ರ್‍ಯಾಲಿ ಕೋಟೆಯ ಮುಂಭಾಗದವರೆಗೂ ನಡೆಯಿತು. ಮಾಜಿ ಶಾಸಕ ಸುರೇಶ ಮಾರಿಹಾಳ, ವಿಕ್ರಮ ಇನಾಮದಾರ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಮಂಡಲ ಅಧ್ಯಕ್ಷ ಬಸವರಾಜ ಪರವಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಬಿ.ಸಿ.ಪಾಟೀಲ ಸೇರಿದಂತೆ ಇತರರು ಇದ್ದರು.ಬಿಜೆಪಿ ವಿರುದ್ಧ ರಾಜ್ಯದಲ್ಲಿ ಅಪಪ್ರಚಾರ ಮಾಡಿ ಕಾಂಗ್ರೆಸ್ ಅಧಿಕಾರ ಪಡೆದುಕೊಂಡಿದೆ. ಅಧಿಕಾರ ಹಾಗೂ ಹಣದ ದರ್ಪದಿಂದ ಕಾಂಗ್ರೆಸ್ಸಿಗರು ಗೆಲವು ಸಾಧಿಸುತ್ತೇವೆಂಬ ಭ್ರಮೆಯಲ್ಲಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಬೇಕು. ಈ ಚುನಾವಣೆ ದೇಶದ ಭವಿಷ್ಯದ, ಸ್ವಾಭಿಮಾನದ ಚುನಾವಣೆಯಾಗಿದ್ದು, ಎಲ್ಲ ಮತದಾರರು ಬಿಜೆಪಿ ಮತ ನೀಡುವ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಸಂಕಲ್ಪ ತೊಟ್ಟು ಮತ ನೀಡಬೇಕು.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.----------------------------
ಈ ಚುನಾವಣೆ ಕೇವಲ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಚುನಾವಣೆಯಲ್ಲ. ಇದು ರಾಮ ಹಾಗೂ ಅಲ್ಲಾಹುವಿನ ನಡುವಿನ ಚುನಾವಣೆಯಾಗಿದೆ. ಮೇ ಸಾಥ್ ಮೋದಿಕೆ ಸಾಥ್ ಎನ್ನುವ ಮೂಲಕ ಬಿಜೆಪಿ ಮತ ನೀಡಬೇಕು.-ಮಹಾಂತೇಶ ದೊಡ್ಡಗೌಡರ,
ಮಾಜಿ ಶಾಸಕ.-------------ಮತದಾರರು ಬಿಜೆಪಿಗೆ ನೀಡುವ ಪ್ರತಿಯೊಂದು ಮತವು ಭಗವಾನ ಶ್ರೀರಾಮರ ಪಾದಗಳಿಗೆ ಕಮಲದ ಹೂವುಗಳನ್ನು ಅರ್ಪಣೆ ಮಾಡಿದಂತೆ.
-ಲಕ್ಷ್ಮೀ ಇನಾಮದಾರ, ಬಿಜೆಪಿ ನಾಯಕಿ.------------------