ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸ್ವಾತಂತ್ರ್ಯಕ್ಕಾಗಿ ಅದೇಷ್ಟೋ ಜನ ಹೋರಾಟಗಾರರು ತಮ್ಮ ತ್ಯಾಗ, ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ ಅವರ ಹೋರಾಟವನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾವೆಲ್ಲ ಒಂದೇ, ನಾವು ಭಾರತೀಯರು ಎಂಬ ಮನೋಭಾವದೊಂದಿಗೆ ಸಹೋದರತೆಯಿಂದ ಬದುಕಿದಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ತಾಲೂಕು ಆಡಳಿತದಿಂದ ನಡೆದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸುಸಂಸ್ಕೃತ ಹಾಗೂ ಧರ್ಮ, ಸಂಪ್ರದಾಯ, ಪರಂಪರೆ ಹೊಂದಿದ ದೇಶ. ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದ ಮಾತ್ರಕ್ಕೆ ಸಿಕ್ಕ ಸಿಕ್ಕವರಿಗೇ ಮನಸೋ ಇಚ್ಛೆ ನಿಂದಿಸುವುದು, ಅವಮಾನಿಸುವುದು ಎಂದಲ್ಲ. ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದ ಕಾನೂನಿನ ಚೌಕಟ್ಟಿನಡಿ ನಡೆಯಬೇಕಿದೆ. ದೇಶಪ್ರೇಮ ಮೈಗೂಡಿಸಿಕೊಂಡು ಮುನ್ನಡೆಯಬೇಕಿದೆ ಎಂದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಅತ್ಯಂತ ರೋಚಕವಾಗಿದೆ. ಸತ್ಯ, ಶಾಂತಿ, ಅಹಿಂಸೆಯ ಸಾತ್ವಿಕ ಹೋರಾಟದಿಂದ ಸ್ವಾತಂತ್ರ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.ರಾಜ್ಯದಲ್ಲಿ ನಮ್ಮ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಜಾರಿ ಮಾಡುವ ಮೂಲಕ ಜನಪರ ಆಡಳಿತ ನೀಡುವುದರೊಂದಿಗೆ ದೇಶಕ್ಕೆ ಮಾದರಿಯಾಗಿವೆ. ಗ್ಯಾರಂಟಿಗಳು ಜನರ ಜೀವನ ಮಟ್ಟ ಸುಧಾರಿಸುತ್ತಿವೆ ಮತ್ತು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿವೆ ಎಂದರು.
ಈ ವೇಳೆ ತಹಸೀಲ್ದಾರ್ ಕೀರ್ತಿ ಚಾಲಕ ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಎಸೈ ಸಂಜುಕುಮಾರ ತಿಪ್ಪಾರೆಡ್ಡಿ ಪೊಲೀಸ್ ಪರೇಡ್ ಮೂಲಕ ರಾಷ್ಟ್ರಧ್ವಜಕ್ಕೆ ಹಾಗೂ ಗಣ್ಯರಿಗೆ ಗೌರವ ಸಲ್ಲಿಸಿದರು. ಎನ್ಎಸ್ಎಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಗೃಹ ರಕ್ಷಕ ದಳ, ವಿವಿಧ ಶಾಲಾ ಮಕ್ಕಳು ಪಂಥಸಂಚಲದಲ್ಲಿ ಭಾಗವಹಿಸಿದ್ದರು. ಪಥಸಂಚಲನದಲ್ಲಿ ಜೆಸಿ ಶಾಲೆ ಪ್ರಥಮ, ಅಂಜುಮನ್ ಪ್ರೌಢ ಶಾಲೆ ದ್ವೀತಿಯ, ಅಭ್ಯೂದಯ ಇಂಟರ್‌ನ್ಯಾಷನಲ್ಲ ಶಾಲೆ ತೃತೀಯ ಸ್ಥಾನ ಪಡೆದುಕೊಂಡವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಸರ್ಕಾರಿ ಹಿರಿಯ ಮಾದರಿಯ ಶಾಲೆ ಪ್ರಥಮ, ಎಂಜಿಎಂಕೆ ಶಾಲೆ ದ್ವೀತಿಯ, ವಿದ್ಯಾ ಚೇತನ ಶಾಲೆ ತೃತೀಯ ಸ್ಥಾನ ಪಡೆದುಕೊಂಡವು.ತಾಪಂ ಇಒ ಎನ್.ಎಸ್.ಮಸಳಿ, ಸಿಪಿಐ ಮಹಮ್ಮದ್‌ಫಸಿವುದ್ದೀನ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ತಾಲೂಕು ಕ್ಷೇತ್ರ ಸಮನ್ವಾಧಿಕಾರಿ ಯು.ಬಿ.ಧರಿಕಾರ, ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ತಾಲೂಕು ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಶಾಯಕಮಕ್ಕಳ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಸೇರಿ ಹಲವರಿದ್ದರು. ಶಿಕ್ಷಕ ಟಿ.ಡಿ.ಲಮಾಣಿ ನಿರೂಪಿಸಿ, ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು.