314 ಶಾಲೆಗಳಿಗೆ ಕುಡಿವ ನೀರಿನ ಘಟಕ ನಿರ್ಮಾಣ

KannadaprabhaNewsNetwork |  
Published : Aug 16, 2025, 12:04 AM IST
ಸಿಂದಗಿ | Kannada Prabha

ಸಾರಾಂಶ

ಮತಕ್ಷೇತ್ರದಲ್ಲಿ 8 ಪ್ರೌಢಶಾಲೆಗಳು, 24 ಕನ್ನಡ ಮಾಧ್ಯಮ ಜೊತೆಗೆ ಆಂಗ್ಲ ಮಾಧ್ಯಮ ಪ್ರಾರಂಭವಾಗಿವೆ

ಕನ್ನಡಪ್ರಭ ವಾರ್ತೆ ಸಿಂದಗಿ

ಜಗತ್ತಿಗೆ ಅನೇಕ ಕೊಡುಗೆಗಳನ್ನು ನೀಡಿದ ದೇಶ ನಮ್ಮದು. ವಿಶ್ವಕ್ಕೆ ಜಗದ್ಗುರುವಾಗಿ ಮೆರೆಯುತ್ತಿರುವ ಭಾರತ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವ ದಿನವೇ ಸ್ವಾತಂತ್ರ್ಯ ದಿನ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ರಾಜ್ಯದ ಪ್ರತಿ ಕ್ಷೇತ್ರಗಳಿಗೆ ಸಾವಿರಾರು ಕೋಟಿ ಅನುದಾನ ನೀಡುತ್ತಿದೆ. ತಮ್ಮ ಮತಕ್ಷೇತ್ರದಲ್ಲಿ 8 ಪ್ರೌಢಶಾಲೆಗಳು, 24 ಕನ್ನಡ ಮಾಧ್ಯಮ ಜೊತೆಗೆ ಆಂಗ್ಲ ಮಾಧ್ಯಮ ಪ್ರಾರಂಭವಾಗಿವೆ. ದಿ.ಎಂ.ಸಿ. ಮನಗೂಳಿ ಪ್ರತಿಷ್ಠಾನದಿಂದ ಕ್ಷೇತ್ರದ 314 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶುದ್ಧ ಕುಡಿವ ನೀರಿನ ಘಟಕಗಳನ್ನು ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಈ ತಿಂಗಳ ಕೊನೆಯಲ್ಲಿ ಮೊದಲ ಹಂತವಾಗಿ 50 ನೀರಿನ ಘಟಕ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಪುರಸಭೆಯಿಂದ ಹತ್ತಾರು ಯೋಜನೆಗಳನ್ನು ರೂಪಿಸುತ್ತಿದೆ. ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ₹11 ಸಾವಿರ ಪುರಸ್ಕಾರ, ಸಿಂದಗಿ ಪ್ರಮುಖ ರಸ್ತೆಗಳಿಗೆ ಸಿಂದಗಿ ಸಾಧಕರ ಹೆಸರು, ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಲು ₹2 ಲಕ್ಷ ಹಣ ವಿತರಣೆ ಸೇರಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ನೃತ್ಯ ಮಾಡಿ ರಂಜಿಸಿದರು. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಸೇರಿದಂತೆ ಜಯಶ್ರೀ ಕೂಚಬಾಳ ಹಾಗೂ ಗಣ್ಯರಿಗೆ ಸನ್ಮಾನ ನಡೆಯಿತು. ಪಟ್ಟಣದ ವಿವಿಧ ಶಾಲಾ ಮಕ್ಕಳ ಪಥ ಸಂಚಲನ, ಸಾಮೂಹಿಕ ಕವಾಯರ್‌, ದೇಶ ಭಕ್ತಿಗೀತೆಗಳು, ಧ್ವಜವಂದನೆ ಸೇರಿ ವಿವಿಧ ಕಾರ್ಯಕ್ರಮ ನಡೆದವು.

ವೇದಿಕೆ ಮೇಲೆ ತಹಸೀಲ್ದಾರ್‌ ಕರೆಪ್ಪ ಬೆಳ್ಳಿ, ಸಿಪಿಆಯ್ ನಾನಾಗೌಡ ಪೊಲೀಸ್‌ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ, ತಾಪಂ ಅಧಿಕಾರಿ ರಾಮು ಅಗ್ನಿ, ಬಿಇಒ ಮಹಾಂತೇಶ ಯಡ್ರಾಮಿ, ನಾಕರ ಸಂಘದ ತಾಲೂಕು ಅಧ್ಯಕ್ಷ ಅಶೋಕ ತೆಲ್ಲೂರ, ಡಾ.ರವಿ ಗೋಲಾ ಸೇರಿ ಇತರರು ಇದ್ದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌