ಶಿವಮೊಗ್ಗ: ಬಡವರ ಕೈಯಲ್ಲಿ ಹಣ ಬಂದಾಗ ಮಾತ್ರ ದೇಶದ ಪ್ರಗತಿಯಾಗಲಿದ್ದು, ಬಡವರಿಗಾಗಿ ರೂಪಿಸಿರುವ ಯೋಜನೆಗಳನ್ನು ಅವರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕರೆ ನೀಡಿದರು.
ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಸೋಮವಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಪಂ ಸಹಯೋಗದಲ್ಲಿ ಆಯೋಜಿಸಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯ ಭವನ ಲೋಕಾರ್ಪಣೆ ಹಾಗೂ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವಪೂರ್ಣವಾದ ಬಿಲ್‌ಗಳನ್ನು ಪಾಸ್ ಮಾಡಿದೆ. ಅಮೇಜಾನ್, ಸ್ವಿಗ್ಗಿ, ಝೊಮ್ಯಾಟೊ ಬ್ಲಿಂಕ್‌ಇಟ್‌ಗಳಲ್ಲಿ ಕೆಲಸ ಮಾಡುವ 5 ಲಕ್ಷಕ್ಕೂ ಹೆಚ್ಚು ಗಿಗ್ ಕಾರ್ಮಿಕರು ರಾಜ್ಯದಲ್ಲಿದ್ದಾರೆ. ಅವರಿಗಾಗಿಯೇ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಸಮರ್ಪಕವಾದ ಗಿಗ್ ಬಿಲ್ ಪಾಸ್ ಆಗಿದೆ. 20 ಜನರಿಗಿಂತ ಹೆಚ್ಚು ಕಾರ್ಮಿಕರು ಕೆಲಸ ಮಾಡುವೆಡೆ ಮಾಲೀಕರು 5 ವರ್ಷ ಕೆಲಸ ಮಾಡಿದ ಕಾರ್ಮಿಕರಿಗೆ ಕಡ್ಡಾಯವಾಗಿ ಗ್ರ್ಯಾಚುಟಿ ಪಾವತಿಸಬೇಕು. ಈ ರೀತಿಯ 6 ಸಾವಿರ ಕಂಪೆನಿಗಳು ಇಲಾಖೆಯಡಿ ನೋಂದಣಿಯಾಗಿದ್ದು, ಅಧಿಕಾರಿಗಳು ಗ್ರ್ಯಾಚುಟಿ ಪಾವತಿ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದರು.ಎಸ್‌ಸಿ, ಎಸ್‌ಟಿಯವರಿಗೆ ಕೆಲಸ ನೀಡುವ ಖಾಸಗಿ ಸಂಸ್ಥೆ-ಕಂಪೆನಿಗೆ ಕಾರ್ಮಿಕ ಇಲಾಖೆಯಿಂದ ಅವರಿಗೆ ಪಾವತಿಸಲು ಶೇ.50 ಹಣ ನೀಡುವ ದೇಶದಲ್ಲೇ ಪ್ರಪ್ರಥಮ ಯೋಜನೆ ‘ಆಶಾದೀಪ’ ಕಾರ್ಮಿಕರ ಪಾಲಿಗೆ ಆಶಾದೀಪವಾಗಿದೆ. ಇದೇ ಮೊದಲ ಬಾರಿಗೆ ಇಲಾಖೆಯು 91 ಸಣ್ಣ ಸಣ್ಣ ಕೆಲಸ ಮಾಡುವ ಸಮುದಾಯಗಳನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ನೀಡುತ್ತಿದೆ ಎಂದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾರ್ಮಿಕರು ದೇಶದ ಆಸ್ತಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ತಲುಪಿಸುತ್ತಿದೆ. ವಲಸೆ ಕಾರ್ಮಿಕರಿಗೆ ಅನುಕೂಲವಾಗಲೆಂದು ಸಿದ್ಲಿಪುರದಲ್ಲಿ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳು ಹಾಗೂ ಸಮುದಾಯ ಭವನ ಲೋಕಾರ್ಪಣೆ ಮಾಡುತ್ತಿರುವುದು ಅತ್ಯಂತ ಸಂತಸದ ವಿಷಯ. ಅದೇ ರೀತಿಯಲ್ಲಿ ಕಾರ್ಮಿಕರಿಗೆ ಅನುಕೂಲವಾಗಲು ಶಿಕಾರಿಪುರ ಮತ್ತು ಸಾಗರದಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸಚಿವರು ಸಹಕರಿಸಬೇಕು ಎಂದರು.ಭದ್ರಾವತಿ ಉಕ್ಕಿನ ಕಾರ್ಖಾನೆಗೆ ಮರು ಜೀವ ನೀಡಲು ಚರ್ಚೆ ನಡೆಯುತ್ತಿದೆ. ಬಂಡವಾಳ ಹೂಡಲು ಕೇಂದ್ರ ಸರ್ಕಾರ ಮುಂದೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರದಲ್ಲಿ 2 ಕಡತ ಬಾಕಿ ಇದ್ದು, ಅದು ವಿಲೇ ಆದ ನಂತರ 8-10 ಕೋಟಿ ರು. ಅನುದಾನ ತಂದು ಮರುಜೀವ ಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಎಂಪಿಎಂ ಮತ್ತು ವಿಐಎಸ್ಎಲ್ ಕಾರ್ಖಾನೆಗಳಿಗೆ ಜೀವ ಬಂದಲ್ಲಿ 20 ರಿಂದ 25 ಸಾವಿರ ಕಾರ್ಮಿಕರಿಗೆ ಶಕ್ತಿ ಬರಲಿದೆ ಈ ನಿಟ್ಟಿನಲ್ಲಿ ಕಾರ್ಮಿಕರು ಸಚಿವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಶಾಸಕ ಎಸ್. ಎನ್. ಚನ್ನಬಸಪ್ಪ ಮಾತನಾಡಿ, ಕಾರ್ಮಿಕ ಸಚಿವರು ಜಿಲ್ಲೆಯಲ್ಲಿ ಕಾರ್ಮಿಕರ ಭವನ ನಿರ್ಮಿಸಲು ಸಹಕರಿಬೇಕು. ಅಡುಗೆ ಬಡಿಸುವವರನ್ನೂ ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಬೇಕು ಹಾಗೂ ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹೆಚ್ಚಿಸಬೇಕೆಂದು ಮನವಿ ಮಾಡಿದರು. ಇದೇ ವೇಳೆ ಸಚಿವರು ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ಮತ್ತು ಮೃತಪಟ್ಟವರ ಅವಲಂಬಿತರಿಗೆ ಚೆಕ್ ವಿತರಿಸಿದರು.ಸಮಾರಂಭದಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಸೂಡಾ ಅಧ್ಯಕ್ಷ ಸುಂದರೇಶ್, ಕಾರ್ಮಿಕ ಆಯುಕ್ತ ಡಾ.ಗೋಪಾಲಕೃಷ್ಣ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಭಾರತಿ, ಜಿ.ಪಂ.ಸಿಇಒ ಹೇಮಂತ್ ಮತ್ತಿತರರಿದ್ದದರು.ಕಾರ್ಮಿಕ ಇಲಾಖೆ ಜಂಟಿ ನಿರ್ದೇಶಕ ಡಾ.ಎಸ್.ಬಿ.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.