ಜಾತಿ, ಅಂಗವೈಕಲ್ಯ ಮೀರಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ!

KannadaprabhaNewsNetwork |  
Published : Feb 19, 2026, 02:45 AM IST
ಲಕ್ಷ್ಮೇಶ್ವರ ಸಮೀಪದ ಗೊಜನೂರ ಗ್ರಾಮದಲ್ಲಿ ನಡೆದ ಅಪರೂಪದ ಮದುವೆಯ ಜೋಡಿಗಳು ಹಾಗೂ ಹಿರಿಯರು. | Kannada Prabha

ಸಾರಾಂಶ

ಗೊಜನೂರು ಗ್ರಾಮದ 32 ವರ್ಷದ ವರ ನಿಂಗಪ್ಪ ಮೋಡಿ, ಸೀತಾಲಹರಿ ಗ್ರಾಮದ ವಧು 25 ವರ್ಷದ ಹೊನ್ನವ್ವ ವಡ್ಡರ ಇಬ್ಬರೂ ವಿಕಲಾಂಗರು. ಪರಸ್ಪರ ಎರಡು ಕುಟುಂಬದವರು ಒಪ್ಪಿಗೆ ನೀಡಿ ಫೆ. 18ರಂದು ಗೊಜನೂರು ಗ್ರಾಮದ ಶರೀಫ್ ಸಾಹೇಬರ ಜಾತ್ರಾ ಮಹೋತ್ಸವದಲ್ಲಿ ಸಂತೋಷದಿಂದ ಮದುವೆ ನಡೆಯಿತು.

ಲಕ್ಷ್ಮೇಶ್ವರ: ಮದುವೆಗೆ ಜಾತಿ, ಅಂಗವೈಕಲ್ಯ ಅಡ್ಡಿಯಾಗದು ಎಂಬುದಕ್ಕೆ ತಾಲೂಕಿನ ಗೊಜನೂರು ಗ್ರಾಮ ಬುಧವಾರ ಸಾಕ್ಷಿಯಾಗಿದ್ದು, ವಿಕಲಾಂಗ ಹಾಗೂ ಅಂತರ್ಜಾತಿ ಜೋಡಿಯೊಂದು ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಈ ಅಪರೂಪದ ಕಲ್ಯಾಣ ಶರೀಫ್ ಸಾಹೇಬರ ಜಾತ್ರೆಯಲ್ಲಿ ನಡೆದದ್ದು ಎಂಬುದು ಮತ್ತೊಂದು ವಿಶೇಷ.

ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ಮದುವೆ ಮಾಡಿಕೊಳ್ಳಲು ಯುವಕರಿಗೆ ಕನ್ಯೆ ಸಿಗುತ್ತಿಲ್ಲ ಎಂಬ ಕೂಗು ಜೋರಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಈ ಜೋಡಿ ಮದುವೆ ನೆರವೇರಿದ್ದು ಮಾದರಿ ಎಂಬ ಮಾತು ಗ್ರಾಮದಲ್ಲಿ ಕೇಳಿಬಂತು.

ಗೊಜನೂರು ಗ್ರಾಮದ 32 ವರ್ಷದ ವರ ನಿಂಗಪ್ಪ ಮೋಡಿ, ಸೀತಾಲಹರಿ ಗ್ರಾಮದ ವಧು 25 ವರ್ಷದ ಹೊನ್ನವ್ವ ವಡ್ಡರ ಇಬ್ಬರೂ ವಿಕಲಾಂಗರು. ಪರಸ್ಪರ ಎರಡು ಕುಟುಂಬದವರು ಒಪ್ಪಿಗೆ ನೀಡಿ ಫೆ. 18ರಂದು ಗೊಜನೂರು ಗ್ರಾಮದ ಶರೀಫ್ ಸಾಹೇಬರ ಜಾತ್ರಾ ಮಹೋತ್ಸವದಲ್ಲಿ ಸಂತೋಷದಿಂದ ಮದುವೆ ನಡೆಯಿತು.

ಗ್ರಾಮದ ವರನ ಮನೆಯಲ್ಲಿ ಬುಧವಾರ ಸಡಗರವೋ ಸಡಗರ. ಮಂದಬುದ್ಧಿಯ ಮಗನಿಗೆ ಮದುವೆ ಯಾವಾಗ ಎನ್ನುವ ಚಿಂತೆಯಲ್ಲಿದ್ದ ತಂದೆ- ತಾಯಿಗಳಿಗೆ ವಧು ಸಿಕ್ಕಿ ಮದುವೆಯಾಯಿತಲ್ಲ ಎನ್ನುವ ಖುಷಿ ಕಂಡುಬಂದರೆ, ವಿಕಲಾಂಗ ಮಗಳಿಗೆ ಮದುವೆಯಾದ ಸಂತೋಷ ಹೆಣ್ಣುಮಗಳ ಪಾಲಕರಲ್ಲಿ ಕಾಣಿಸಿತು.

ಎರಡು ಕುಟುಂಬಗಳು ಜಾತಿ, ಅಂಗವೈಕಲ್ಯ ಬದಿಗಿಟ್ಟು ಸತಿಪತಿಗಳೊಂದಾಗಿರುವುದೆ ಶಿವನಿಗೆ ಅಚ್ಚುಮೆಚ್ಚು ಎನ್ನುವ ರೀತಿಯಲ್ಲಿ ಸಂಪ್ರದಾಯಬದ್ಧವಾಗಿ ಮದುವೆ ನೆರವೇರಿತು.

ಮದುವೆಗೆ ಗ್ರಾಮದ ಹಿರಿಯರಾದ ಶಂಕ್ರಪ್ಪ ಸೊರಟೂರ, ಮುತ್ತಪ್ಪ ಬಾಲೆಹೊಸೂರ, ನಿಂಗಪ್ಪ ಬಡಿಗೇರ, ಶಾಸಪ್ಪ ಜಾಲಮ್ಮನವರ, ಮಹಾದೇವಪ್ಪ ಗುಡ್ಡಣ್ಣವರ, ಚನ್ನಪ್ಪ ಷಣ್ಮುಖಿ, ಭೀಮಪ್ಪ ದುರಗಣ್ಣವರ, ಹುಸೇನಸಾಬ ಆನಿ, ನಿಜಲಿಂಗಪ್ಪ ಸೊರಟೂರ, ಹೊನ್ನಪ್ಪ ವಡ್ಡರ, ಹನುಮಂತಪ್ಪ ಜೋಗಿ, ದೇವಪ್ಪ ಪೂಜಾರ, ಲಕ್ಷ್ಮಪ್ಪ ವಡ್ಡರ, ಉಡಚಪ್ಪ ವಡ್ಡರ ಸೇರಿದಂತೆ ಅನೇಕರು ಸಾಕ್ಷಿಯಾಗಿ ಮದುವೆ ಔತಣ ಸವಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಸಾವಿರ ಅಸಂಘಟಿತ ಕಾರ್ಮಿಕ ಫಲಾನುಭವಿಗಳ ನೋಂದಣಿಗೆ ಗುರಿ: ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ
ಎಂಡೋಸಲ್ಫಾನ್ ಬಾಧಿತರ ಪುನಶ್ಚೇತನ ಪುಣ್ಯದ ಕೆಲಸ: ಡಾ. ಶಂಕರ ರಾವ್