ಶಿವರಾತ್ರಿ ಹಿನ್ನೆಲೆ ಅಸಂಖ್ಯ ಭಕ್ತಗಣ ಶಿವನಿಗೆ ವಿಶೇಷ ಪೂಜೆ । ದೇವರ ದರ್ಶನ, ಪ್ರಸಾದ ವಿತರಣೆ
ಕನ್ನಡ ಪ್ರಭ ವಾರ್ತೆ ಹೊನ್ನಾಳಿಪವಿತ್ರ ಶಿವರಾತ್ರಿಯ ಜಾಗರಣೆಯ ದಿನವಾದ ಬುಧವಾರ ರಾತ್ರಿ ಪಟ್ಟಣದ ಪ್ರಸಿದ್ದ ಶ್ರೀ ನೀಲಕಂಠೇಶ್ವರ ದೇವಾಲಯಕ್ಕೆ ಸಂಜೆ 5ರಿಂದ ತಡ ರಾತ್ರಿ 12 ಗಂಟೆಯವರೆಗೆ ಪಟ್ಟಣದ ಸಹಸ್ರಾರು ಭಕ್ತರು ಬೇಟಿ ನೀಡಿ ದೇವರಿಗೆ ಹಣ್ಣು -ಕಾಯಿ ನೈವೇದ್ಯ ಮಾಡಿಸಿ ದೇವರ ದರ್ಶನ ಪಡೆದು ನಂತರ ದೇವಸ್ಥಾನ ಸಮಿತಿಯವರು ಪ್ರತಿ ವರ್ಷದಂತೆ ಭಕ್ತರಿಗಾಗಿ ತಯಾರಿಸಿದ್ದ ಕೊಸಂಬರಿ, ಬೇಯಿಸಿದ ಕಡಲೆ, ಫ್ರೂಟ್ಸ್ ಸಲಾಡ್‌ಗಳನ್ನು ಸ್ವೀಕರಿಸಿ ಸಂಭ್ರಮಿಸಿದರು.
ಪಟ್ಟಣದ ಹೃದಯಭಾಗದಲ್ಲಿರುವ ಹಾಗೂ ಐತಿಹಾಸಿಕ ಶ್ರೀ ನೀಲಕಂಠೇಶ್ವರ ಇಡೀ ದೇವಸ್ಥಾನವನ್ನು ವಿವಿದ ಬಣ್ಣಗಳ ದೀಪಗಳಿಂದ ಹಾಗೂ ಹೂವು, ಬಾಳೆ, ಮಾವಿನ ಎಲೆಗಳಿಂದ ಅತ್ಯಂತ ಅದ್ಧೂರಿಯಾಗಿ ಶೃಂಗರಿಸಲಾಗಿತ್ತು.ಗರ್ಭಗುಡಿಯಲ್ಲಿನ ಶ್ರೀ ನೀಲಕಂಠೇಶ್ವರ ದೇವರಿಗೆ ಹಾಗೂ ನಂದಿ ವಿಗ್ರಹಗಳಿಗೂ ಕೂಡ ಬುಧವಾರ ಅಭಿಷೇಕ, ಮಹಾಮಂಗಳಾರತಿ ಹಾಗೂ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿತ್ತು,
ಬುಧವಾರ ಸಂಜೆಯಾಗುತ್ತಲೇ ಪಟ್ಟಣದ ಪ್ರತಿಯೊಬ್ಬರೂ ಕೂಡ ಕುಟುಂಬ ಸಮೇತರಾಗಿ ಶ್ರೀ ನೀಲಕಂಠೇಶ್ವರ ದೇವಸ್ಥಾನಕ್ಕೆ ಬಂದು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ತಮ್ಮ ಭಕ್ತಿ ಸರ್ಪಿಸಿದರು. ನಂತರ ದೇವಸ್ಥಾನ ಸಮಿತಿಯವರು ರುಚಿಯಾದ ಪ್ರಸಾದಗಳನ್ನು ವಿತರಿಸಿದರು.ಕಲಾವಿದರ ತಂಡದಿಂದ ದೇವರನಾಮಗಳ ಸಂಗೀತ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿತ್ತು, ಪೊಲೀಸರು ಮತ್ತು ಗೃಹರಕ್ಷಕ ದಳದವರು ಸ್ಥಳದಲ್ಲಿದ್ದು ಯಾವುದೇ ನೂಕುನುಗ್ಗಲಾಗದಂತೆ ವ್ಯವಸ್ಥಿತ ರೀತಿಯಲ್ಲಿ ಎಲ್ಲರಿಗೂ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು,
ಶಿವರಾತ್ರಿಯ ಮಹಾ ದಿನವಾದ ಬುಧವಾರ ಪಟ್ಟಣದ ಶ್ರೀ ವೀರಭದ್ರೇಸ್ವರ ಸ್ವಾಮಿ ದೇವಸ್ಥಾನ, ಪೇಟೆ ಹಳದಮ್ಮ ದೇವಿ ಹಾಗೂ ಶ್ರೀ ಮಾರಿಕಾಂಬ, ದೇವಸ್ಥಾನಗಳಲ್ಲಿ ಕೂಡ ದೀಪಾಲಂಕಾರ ಮಾಡಿ ವಿಶೇಷ ಪೂಜೆಗಳನ್ನು ಮಾಡಲಾಗಿತ್ತು,ಪ್ರಸಿದ್ದವಾದ ಹಿರೇಕಲ್ಮಠದ ಚನ್ನಪ್ಪ ಸ್ವಾಮಿ ಮಠದಲ್ಲಿ ಕೂಡ ಅಲ್ಲಿನ ಸ್ವಾಮೀಜಿ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯದಲ್ಲಿ ಅನೇಕ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಈಶ್ವರಿಯ ವಿ.ವಿ. ವತಿಯಿಂದ ಜ್ಯೋತಿರ್ಲಿಂಗ ದರ್ಶನ ಹಾಗೂ ಅನೇಕ ಧಾರ್ಮಿಕ, ಆಧ್ಯಾತ್ಮಿಕ,ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವ್ಯವಸ್ಥೆ ಮಾಡಲಾಗಿತ್ತು,