ಆದಾಪುರ ಶಾಲೆಗೆ 1 ಎಕರೆ ಭೂಮಿ ದಾನ: ಸಚಿವ ತಂಗಡಗಿ

KannadaprabhaNewsNetwork |  
Published : Feb 28, 2025, 12:47 AM IST
ಪೋಟೋಸಂಕನಾಳದಿಂದ ಈಚನಾಳದವರೆಗಿನ ರಸ್ತೆ ಅಭಿವೃದ್ಧಿಗೆ ಸಚಿವ ಶಿವರಾಜ ತಂಗಡಗಿ ಭೂಮಿಪೂಜೆ ನೆರವೇರಿಸಿದರು.  | Kannada Prabha

ಸಾರಾಂಶ

ನವಲಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ₹ ೨೨ ಕೋಟಿ ಅನುದಾನ ಮಂಜೂರಾಗಿದ್ದು, ಮಾರ್ಚ್ ತಿಂಗಳಲ್ಲಿ ಭೂಮಿಪೂಜೆ ಸಲ್ಲಿಸಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ನವಲಿಯಿಂದ ಕಲಮಂಗಿ ರಸ್ತೆ ಅಭಿವೃದ್ಧಿಗೆ ₹ ೧.೭೦ ಕೋಟಿ, ಸಂಕನಾಳದಿಂದ ಈಚನಾಳದ ವರೆಗಿನ ರಸ್ತೆ ಅಭಿವೃದ್ಧಿಗೆ ₹ ೩ ಕೋಟಿ ಬಿಡುಗಡೆಯಾಗಿದೆ.

ಕನಕಗಿರಿ:

ತಾಲೂಕಿನ ಆದಾಪುರ ಸರ್ಕಾರಿ ಶಾಲೆಗೆ ನಮ್ಮ ಕುಟುಂಬದಿಂದ ೧ ಎಕರೆ ಭೂಮಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಅವರು ತಾಲೂಕಿನ ನವಲಿ ಗ್ರಾಪಂ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಗುರುವಾರ ಮಾತನಾಡಿದರು.

ಆದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭೂಮಿ ಸಮಸ್ಯೆಯಾದ ಹಿನ್ನೆಲೆಯಲ್ಲಿ ನಮ್ಮ ಕುಟುಂಬವು ಸ್ವಂತ ಹಣದಲ್ಲಿ ಭೂಮಿ ಖರೀದಿಸಿದ್ದು, ಸರ್ಕಾರದ ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಿಸುವ ಮೂಲಕ ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು.

ನವಲಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ₹ ೨೨ ಕೋಟಿ ಅನುದಾನ ಮಂಜೂರಾಗಿದ್ದು, ಮಾರ್ಚ್ ತಿಂಗಳಲ್ಲಿ ಭೂಮಿಪೂಜೆ ಸಲ್ಲಿಸಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ನವಲಿಯಿಂದ ಕಲಮಂಗಿ ರಸ್ತೆ ಅಭಿವೃದ್ಧಿಗೆ ₹ ೧.೭೦ ಕೋಟಿ, ಸಂಕನಾಳದಿಂದ ಈಚನಾಳದ ವರೆಗಿನ ರಸ್ತೆ ಅಭಿವೃದ್ಧಿಗೆ ₹ ೩ ಕೋಟಿ ಬಿಡುಗಡೆಯಾಗಿದ್ದು, ಗುಣಮಟ್ಟದ ಕಾಮಗಾರಿ ಮಾಡಲಾಗುವುದು. ಈ ರಸ್ತೆ ಮೇಲೆ ಅಕ್ರಮ ಮರುಳು ತುಂಬಿಕೊಂಡು ಟಿಪ್ಪರ್‌ಗಳ ಸಂಚರಿಸಲು ಬಿಡುವುದಿಲ್ಲ. ರಸ್ತೆ ಅಭಿವೃದ್ಧಿಯ ನಂತರ ಭಾರಿ ವಾಹನಗಳ ಸಂಚಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ತಿಳಿಸಿದರು.

ಉದ್ದಿಹಾಳ ಗ್ರಾಮದ ಸರ್ಕಾರಿ ಶಾಲಾ ಕೊಠಡಿ ನಿರ್ಮಾಣಕ್ಕೆ ₹ ೧೫.೬೦ ಲಕ್ಷ ಹಾಗೂ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ₹ ೪೦ ಲಕ್ಷ ಸೇರಿ ಒಟ್ಟು ₹ ೫.೨೫ ಕೋಟಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರದ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ₹ ೨೦೦ ಕೋಟಿ ಅನುದಾನ ತರುತ್ತೇನೆ ಎಂದು ಭರವಸೆ ನೀಡಿದರು.

ಜೆಸ್ಕಾಂ ಅಧಿಕಾರಿಗೆ ನೋಟಿಸ್:

ಈಚನಾಳ ಗ್ರಾಮದಲ್ಲಿ ನಡೆಯುತ್ತಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಸಚಿವ ತಂಗಡಗಿ ಅವರಿಗೆ ಬಾಗಿದ ವಿದ್ಯುತ್ ಕಂಬ, ಅನೇಕ ವರ್ಷಗಳ ಹಿಂದೆ ಎಳೆಯಲಾದ ವಿದ್ಯುತ್ ತಂತಿ ಬದಲಾಯಿಸಲು ಮಾಡಿದ ಮನವಿಗೆ ಸಹಾಯಕ ಅಭಿಯಂತರ ನಾಗಪ್ಪ ಸ್ಪಷ್ಟವಾಗಿ ಉತ್ತರಿಸದೆ ಬೇಜವ್ದಾರಿತನ ತೋರಿದರು. ಅಭಿಂತರರ ಕಾರ್ಯ ವೈಖರಿಗೆ ಸಾರ್ವಜನಿಕರು ಸಚಿವರಿಗೆ ದೂರು ನೀಡಿ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ತಹಸೀಲ್ದಾರ್‌ ವಿಶ್ವನಾಥ ಮುರುಡಿ ೨೪ ಗಂಟೆಯೊಳಗೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಕುಡುಕರ ಕಾಟಕ್ಕೆ ತಲೆಜಜ್ಜಿಕೊಂಡ ಸಚಿವ:

ಮೊದಲು ಈಚನಾಳ ಗ್ರಾಮದಲ್ಲಿ ಆರಂಭಗೊಂಡ ಜನ ಸಂಪರ್ಕ ಸಭೆಗೆ ಕೆಲವರು ಮದ್ಯ ಸೇವಿಸಿ ಆಗಮಿಸಿದ್ದರು. ಸಚಿವ ತಂಗಡಗಿ ಹಾಗೂ ಕುಡುಕರ ಮದ್ಯ ಕೆಲ ಕಾಲ ವಾಗ್ವಾದ ನಡೆಯಿತು. ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ವಾಗ್ವಾದ ತಿಳಿಗೊಳಿಸಿ ಲಿಖಿತವಾಗಿ ದೂರು ಸಲ್ಲಿಸಲು ಸೂಚಿಸಿದರು. ಇದರಿಂದ ಸಭೆ ಶಾಂತಿಯುತವಾಗಿ ನಡೆಯಿತು. ಸಚಿವ ತಂಗಡಗಿ, ಪಿಐ ಫೈಜುಲ್ಲಾ ಸೇರಿದಂತೆ ಹಲವು ಅಧಿಕಾರಿಗಳಿಗೆ ಕುಡುಕರು ಏಕವಚನ ಪ್ರಯೋಗಿಸಿ ಮಾತನಾಡಿರುವುದು ಚರ್ಚೆಗೆ ಗ್ರಾಸವಾಯಿತು.

ತಹಸೀಲ್ದಾರ್‌ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ಲು, ಪಿಡಿಒ ವೀರಣ್ಣ ನಕ್ರಳ್ಳಿ, ಗ್ರಾಪಂ ಉಪಾಧ್ಯಕ್ಷ ನಾಗರಾಜ ತಳವಾರ, ಪ್ರಮುಖರಾದ ಸಿದ್ದಪ್ಪ ನಿರ್ಲೂಟಿ, ಗಂಗಾಧರಸ್ವಾಮಿ, ರಮೇಶ ನಾಯಕ, ಬಸವಂತಗೌಡ ಚಿಕ್ಕಮಾದಿನಾಳ, ಶಿವರೆಡ್ಡಿ ಖ್ಯಾಡೇದ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''