ಉಳಿದ ಆಶ್ರಯ ಮನೆಗಳನ್ನು ಯಾವಾಗ ಕೊಡುತ್ತೀರಿ ?

KannadaprabhaNewsNetwork |  
Published : Feb 28, 2025, 12:47 AM IST
ಪೊಟೋ: 27ಎಸ್‌ಎಂಜಿಕೆಪಿ06ಶಿವಮೊಗ್ಗದ ಪತ್ರಿಕಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಶಿವಮೊಗ್ಗ: ಗೋವಿಂದಾಪುರದಲ್ಲಿ ನಿರ್ಮಾಣವಾಗಿರುವ 652 ಆಶ್ರಯ ಮನೆಗಳನ್ನು ಸಚಿವರು ಹಂಚಿಕೆ ಮಾಡಿದ್ದಾರೆ. ಆದರೆ, ಇನ್ನುಳಿದ 1728 ಮನೆಗಳನ್ನು ಯಾವಾಗ ನಿರ್ಮಾಣ ಮಾಡುತ್ತೀರಿ ? , ಈಗಾಗಲೇ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಬಾಕಿ ಇರುವ ಹಣವನ್ನು ಯಾವಾಗ ಕೊಡುತ್ತೀರಿ ? , ಈಗಾಗಲೇ ಹಂಚಿರುವ ಮನೆಗಳಿಗೆ ಶಾಶ್ವತ ವಿದ್ಯುತ್‌ ಯಾವಾಗ ಕೊಡುತ್ತೀರಿ ? ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಪ್ರಶ್ನೆ ಮಾಡಿದರು.

ಶಿವಮೊಗ್ಗ: ಗೋವಿಂದಾಪುರದಲ್ಲಿ ನಿರ್ಮಾಣವಾಗಿರುವ 652 ಆಶ್ರಯ ಮನೆಗಳನ್ನು ಸಚಿವರು ಹಂಚಿಕೆ ಮಾಡಿದ್ದಾರೆ. ಆದರೆ, ಇನ್ನುಳಿದ 1728 ಮನೆಗಳನ್ನು ಯಾವಾಗ ನಿರ್ಮಾಣ ಮಾಡುತ್ತೀರಿ ? , ಈಗಾಗಲೇ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಬಾಕಿ ಇರುವ ಹಣವನ್ನು ಯಾವಾಗ ಕೊಡುತ್ತೀರಿ ? , ಈಗಾಗಲೇ ಹಂಚಿರುವ ಮನೆಗಳಿಗೆ ಶಾಶ್ವತ ವಿದ್ಯುತ್‌ ಯಾವಾಗ ಕೊಡುತ್ತೀರಿ ? ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಪ್ರಶ್ನೆ ಮಾಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಅಧಿಕಾರಾವಧಿಯಲ್ಲಿ ನಿರ್ಮಾಣವಾಗಿದ್ದ ಮನೆಗಳಿಗೆ ಕಾಂಗ್ರೆಸ್‌ ಸರ್ಕಾರದ ಸಚಿವರು ಬಂದು ಹಕ್ಕುಪತ್ರ ನೀಡಿ ಹೋಗಿದ್ದಾರೆ. ಆದರೆ, ಅಲ್ಲಿ ಯಾವುದೇ ಸೌಲಭ್ಯವನ್ನು ನೀಡದೇ ಹಂಚಿಕೆ ಮಾಡಿರುವುದು ಸರಿಯಲ್ಲ. ಮನೆ ಹಂಚಿಕೆ ಮಾಡುವ ಉದ್ದೇಶದಿಂದ ಮಹಾನಗರ ಪಾಲಿಕೆಯಿಂದ ತಾತ್ಕಾಲಿಕ ವಿದ್ಯುತ್‌ ವ್ಯವಸ್ಥೆ ಮಾಡಲಾಗಿದೆ. ಈ ಸ್ಥಿತಿಯಲ್ಲೇ ಮನೆಗಳನ್ನು ಹಂಚಿಕೆ ಮಾಡುವುದಾಗಿದ್ದರೆ ಮೂರು ತಿಂಗಳ ಹಿಂದೆಯೇ ಮಾಡಬೇಕಿತ್ತು ಎಂದು ಹರಿಹಾಯ್ದರು.

ಇಲ್ಲಿ ಶಾಶ್ವತ ವಿದ್ಯುತ್‌ ನೀಡಲು ಸರ್ಕಾರ 12 ಕೋಟಿ ರು. ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕಿತ್ತು. ಜೊತೆಗೆ ಈಗಾಗಲೇ ಕೆಲಸ ಮಾಡಿರುವ ಗುತ್ತಿಗೆದಾರನಿಗೆ 27 ಕೋಟಿ ರು. ಹಣವನ್ನು ಬಾಕಿ ಉಳಿಸಿಕೊಂಡಿದೆ. ಅದನ್ನೂ ಇನ್ನೂ ಕೊಟ್ಟಿಲ್ಲ. ಇದ್ಯಾವುದೂ ಇಲ್ಲದೆ ಸಚಿವರು ಬರಿಕೈಯಲ್ಲಿ ಬಂದು ಮನೆಗಳನ್ನು ಹಂಚಿ ಹೋಗಿದ್ದಾರೆ. ಉಳಿದ ಮನೆಗಳನ್ನು ಯಾವಾಗ ಕೊಡುತ್ತಾರೆ ಎಂಬುದಕ್ಕೆ ಉತ್ತರವಿಲ್ಲ. ಇನ್ನು 652 ಮನೆಗಳನ್ನು ಹಂಚಿದ್ದೆ ನಮ್ಮ ಶಾಸಕರಿಗೆ ಖುಷಿಯಾಗಿದೆ ಎಂದು ಲೇವಡಿ ಮಾಡಿದರು.

ಗೋವಿಂದಾಪುರದಲ್ಲಿ ಮನೆ ಕಟ್ಟಿದ ಗುತ್ತಿಗೆದಾರನಿಗೆ 24 ಕೋಟಿ ರು. ಬಾಕಿ ಬರಬೇಕಾಗಿದೆ. ಇದನ್ನು ಕೊಡದ ಹೊರತೂ ಆತ ಉಳಿದ ಮನೆಗಳನ್ನು ಹೇಗೆ ಕಟ್ಟಲು ಸಾಧ್ಯ?. ನಾನು ಶಾಸಕನಾಗಿದ್ದಾಗ ಪ್ರಯತ್ನಪಟ್ಟು 3 ಸಾವಿರ ಮನೆಗಳ ನಿರ್ಮಾಣಕ್ಕೆ ನಾಂದಿ ಹಾಡಿದ್ದೆ. ಉಳಿದವರು ಕೂಡ ಈಗಾಗಲೇ ಹಣ ಕಟ್ಟಿದ್ದಾರೆ. ಅವರಿಗೆ ಸೂರು ಯಾವಾಗ ಸಿಗುತ್ತದೋ ಬಡವರಿಗೆ ಯಾವಾಗ ಮನೆ ಕೊಡುತ್ತಾರೋ ಗೊತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಬಡವರ ಮಲೆ ಏಕೆ ಇಷ್ಟು ತಾತ್ಸಾರವೋ ಗೊತ್ತಿಲ್ಲ ಎಂದರು.

ಇನ್ನು ಗೋಪಿಶೆಟ್ಟಿಕೊಪ್ಪದ್ದು ಮತ್ತೊಂದು ಕತೆ. ಇಲ್ಲಿ 1836 ಮನೆಗಳು ನಿರ್ಮಾಣವಾಗಬೇಕಾಗಿದೆ. ಸುಮಾರು 500ಕ್ಕೂ ಹೆಚ್ಚು ಮಂದಿ ಪೂರ್ಣ ಹಣ ಪಾವತಿಸಿದ್ದಾರೆ. ಗುತ್ತಿಗೆದಾರ ಸುಮಾರು 3 ಕೋಟಿ ರು. ಕೆಲಸ ಮಾಡಿ ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದಾರೆ. ಈಗ ಸೂರಿಗಾಗಿ ಹಣ ಕಟ್ಟಿದವರ ಗತಿಯೇನು ? ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇದ್ದರೆ ಮನೆ ಕಟ್ಟಿಕೊಡಲಿ. ಇಲ್ಲದಿದ್ದರೆ ಬಡವರ ಹಣವನ್ನು ವಾಪಸ್ ಕೊಡಲಿ ಎಂದು ಕಿಡಿಕಾರಿದರು.ಸಚಿವ ಜಮೀರ್ ಅಹಮ್ಮದ್ ಗುಮಾಸ್ತರ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಆ ಮನೆಗಳನ್ನು ವಿತರಿಸಲು ಅವರು ಇಲ್ಲಿಗೆ ಬರಬೇಕಿತ್ತಾ ? ಯಾವ ಸೌಲಭ್ಯವೂ ಈಗಲೂ ಅಲ್ಲಿ ಇಲ್ಲ. ವಸತಿ ಸಚಿವರ ಕೈಲಿ ಏನೂ ಆಗುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಮಾತು ನಡೆಯುವುದೂ ಇಲ್ಲ. ಆದ್ದರಿಂದ ಮುಖ್ಯಮಂತ್ರಿಗಳೇ ಈ ಸಮಸ್ಯೆಗೆ ಉತ್ತರ ಕೊಡಬೇಕು. ಅವರೇ ಶಿವಮೊಗ್ಗಕ್ಕೆ ಬಂದು ಆಶ್ರಯ ಮನೆಗಳ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇ.ವಿಶ್ವಾಸ್, ಮೋಹನ್ ಜಾಧವ್, ರಾಜು, ಶಿವಾಜಿ, ಶಿವು, ಮೋಹನ್ ಮುಂತಾದವರಿದ್ದರು.

ಡಿ.ಕೆ.ಶಿವಕುಮಾರ್ ನಿಜವಾದ ಹಿಂದೂಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾನು ಹಿಂದುವಾಗಿ ಹುಟ್ಟಿದ್ದೇನೆ, ಹಿಂದುವಾಗಿ ಸಾಯುತ್ತೇನೆ ಎಂದು ಹೇಳಿರುವುದು ಖುಷಿಯಾಗಿದೆ. ಸ್ವತಂತ್ರ್ಯ ಪೂರ್ವ ಕಾಂಗ್ರೆಸ್‌ನ ಸಿದ್ಧಾಂತವನ್ನು ಅವರು ಎತ್ತಿ ಹಿಡಿದಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಅವರು ಡಿ.ಕೆ.ಶಿವಕುಮಾರ್‌ ಅವರನ್ನು ಮುಕ್ತಕಂಠದಿಂದ ಹೊಗಳಿದರು.ಡಿ.ಕೆ.ಶಿವಕುಮಾರ್ ಯಾರಿಗೂ ಅಂಜದೇ ನಾನು ಹಿಂದೂವಾಗಿಯೇ ಹುಟ್ಟಿರುವೆ. ಹಿಂದೂ ಆಗಿಯೇ ಸಾಯುವೆ. ಎಂದು ಹೇಳುವ ಮೂಲಕ ನಿಜವಾದ ಹಿಂದೂ ಆಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲಾ ಕಾಂಗ್ರೆಸಿಗರು ನಿಜವಾದ ಹಿಂದೂಗಳೇ ಆಗಿದ್ದರು. ಗಾಂಧೀಜಿಯವರು ಕೂಡ ತಮ್ಮ ಮರಣದ ಸಂದರ್ಭದಲ್ಲೂ ಹೇ ರಾಮ್ ಎಂದು ಉದ್ಘಾರ ಮಾಡಿಯೇ ನಿಧನರಾಗಿದ್ದರು. ಆ ಲಿಸ್ಟ್‌ನಲ್ಲಿ ನಮ್ಮ ಡಿ.ಕೆ.ಶಿವಕುಮಾರ್‌ ಅವರೂ ಇರುತ್ತಾರೆ ಎಂದರು.ಎಲ್ಲ ಕಾಂಗ್ರೆಸ್ಸಿಗರಲ್ಲೂ ಹಿಂದು ಧರ್ಮದ ಬಗ್ಗೆ ಗೌರವವಿದೆ. ಆದರೆ, ಹೇಳಿಕೊಳ್ಳುವ ಧೈರ್ಯ ಇಲ್ಲ ಅಷ್ಟೇ. ರಾಜಕಾರಣಕ್ಕಾಗಿ ಓಲೈಕೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗಿಯಾದ ಮಾತ್ರಕ್ಕೆ ಡಿ.ಕೆ.ಶಿವಕುಮಾರ್‌ ಅವರನ್ನು ಕಾಂಗ್ರೆಸ್ಸಿಗರೇ ಟೀಕೆ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಎಂದೂ ಕೂಡ ಕಾಂಗ್ರೆಸ್ ಅನ್ನು ಬಿಡುವುದಿಲ್ಲ. ಅವರು ಆರ್‌ಎಸ್‌ಎಸ್ ಅನ್ನು ಅವರು ಹೊಗಳಿಯೂ ಇಲ್ಲ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಖರ್ಗೆಯವರಂತೆ ವಿರೋಧಭಾಸದ ಹೇಳಿಕೆ ನೀಡಿಲ್ಲ. ಇವರದು ನಿಜವಾದ ಹಿಂದುತ್ವ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಯಡಿಯೂರಪ್ಪ ಅವರಿಗೆ ನಾನು ವಿಶ್‌ ಮಾಡ್ಬೇಕಾ

ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ವಿಷ್ ಮಾಡಿದ್ರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೆ.ಎಸ್‌.ಈಶ್ವರಪ್ಪ, ಯಡಿಯೂರಪ್ಪ ನಮ್ಮ ಗುರುಗಳು, ಅವರಿಗೆ ನಾನು ವಿಶ್‌ ಮಾಡ್ಬೇಕಾ, ನಾವು ಮನೆಯಲ್ಲಿ ಹೋಗಿ ಅಪ್ಪನಿಗೆ ನಿಮಗೆ ಒಳ್ಳೆದಾಗ್ಲಿ ಅಂತಾ ಹೇಳ್ತಿವಾ , ನೀವು ಹೋಗಿ ಯಾರಾದ್ರೂ ಹೇಳ್ತಿರಾ ? ಎಂದು ಪ್ರಶ್ನಿಸಿದ ಅವರು, ನಾನು ಈ ಸ್ಥಿತಿಯಲ್ಲಿದ್ದೆನೆ ಎಂಬುದಕ್ಕೆ ಯಡಿಯೂರಪ್ಪ ಹಾಗೂ ಆರ್‌ಎಸ್‌ಎಸ್ ಕಾರಣ. ನಾನ್ಯಾಕೆ ಯಡಿಯೂರಪ್ಪ ಅವರ ಹುಟ್ಟುಹಬ್ಬ ಮರೆಯಲಿ. ಪ್ರತಿಯೊಂದರಲ್ಲೂ ರಾಜಕಾರಣ ನೋಡುವುದು ಬಿಡುವುದು ಒಳ್ಳೆಯದು ಎಂದು ಪ್ರತಿಕ್ರಿಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''