ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮಾತೃ ಶಕ್ತಿ ಜಗತ್ತಿನ ಅಪೂರ್ವ ಶಕ್ತಿ. ವ್ಯಕ್ತಿಯ ಬದುಕಿನ ಬೇಕು ಬೇಡಗಳನ್ನು ತನ್ನ ಉಸಿರಿತ್ತು ಕಾಪಿಡುವ ತಾಯಿ ದೇವರು ಎಂದು ವೇದಗಳೇ ಹೇಳಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಂದೆ, ತಾಯಿ, ಗುರುವಿನಿಂದ ಜ್ಞಾನ ಪಡೆದುಕೊಂಡು ಸಮಾಜ ಮುಖಿಗಳಾಗಿ, ದೇಶದ ಸಂಪತ್ತಾಗಬೇಕು ಎಂದು ಮಂಗಳೂರು ಶಕ್ತಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೊಡಿಪ್ಪಾಡಿ ಚಂದ್ರಶೇಖರ ನಾಯಕ್ ಹೇಳಿದರು.ಅವರು ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ನಮಗೆ ಜ್ಞಾನದ ದಾರಿ ತೋರಿಕೊಡುವ ಗುರುವಿಗೆ ಗೌರವ ಕೊಡುವುದು ಶಿಷ್ಯನ ಕರ್ತವ್ಯ. ಆಕರ್ಷಣೆಗಳಿಗೆ ಬಲಿಬೀಳದೆ ಅವಶ್ಯಕತೆಗಳನ್ನು ಅರ್ಥೈಸಿಕೊಂಡು ಬಲ್ಲವರಿಂದ ಸಂಸ್ಕೃತಿ, ಸಂಸ್ಕಾರ ಪರಂಪರೆಗಳ ಒಳ ಹೊರಗನ್ನು ತಿಳಿದುಕೊಂಡು ಮುನ್ನಡೆಯುವ ಕುಶಲಿಗರಾಗಬೇಕು ಎಂದರು.ಜರ್ಮನಿಯಲ್ಲಿ ಮರ್ಸಿಡಿಸ್ ಬೆಂಜ್ ಐಟಿ ಪ್ರಾಡಕ್ಟ್ ಮ್ಯಾನೇಜರ್ ಆಗಿರುವ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಮ್ಮೇದ್ ಜೈನ್ ಮಾತನಾಡಿ, ಉದ್ದೇಶ ಮತ್ತು ಗುರಿ ವಿದ್ಯಾರ್ಥಿಯ ನಡೆಗಳಿಗೆ ಅನಿವಾರ್ಯ ಹಾಗೂ ಅಗತ್ಯ. ಉದ್ದೇಶ ಇಲ್ಲದ ಕಲಿಕೆ ವ್ಯರ್ಥ. ಕಲಿಕೆ ಇಲ್ಲದ ಚಿಂತನೆ ಅಪಾಯಕಾರಿ. ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡರೂ ಆ ಕ್ಷೇತ್ರಕ್ಕೆ ಸಂಬಂಧಪಟ್ಟು ಆಳವಾದ ಅಧ್ಯಯನ ಹಾಗೂ ಬದ್ಧತೆ ಪ್ರತಿಯೋರ್ವ ವಿದ್ಯಾರ್ಥಿಗೂ ಅನಿವಾರ್ಯ. ಪಠ್ಯ ಪುಸ್ತಕದ ಚಿಂತನೆಯೊಂದಿಗೆ ಕೌಶಲ ಭರಿತ ಚಿಂತನೆಯೊಂದಿಗೆ ನಾವು ಮುನ್ನಡೆಯಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿ, ಹೃದಯ ಶ್ರೀಮಂತಿಕೆ ಎಲ್ಲ ಸಂಪತ್ತುಗಳಿಗಿಂತಲೂ ಮೇಲು ಎಂದರು.ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಬಿ.ಪಿ ಸಂಪತ್ ಕುಮಾರ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಪ್ರಾಂಶುಪಾಲ ಪ್ರದೀಪ್ ಶೆಟ್ಟಿ ವಂದಿಸಿದರು. ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ನಿರೂಪಿಸಿದರು.