ಸಾಮಾಜಿಕ ನಾಯಕತ್ವದ ಬೆಳವಣಿಗೆಗೆ ವಿಕೇಂದ್ರೀಕರಣ ವ್ಯವಸ್ಥೆ ಅಗತ್ಯ

KannadaprabhaNewsNetwork |  
Published : Nov 24, 2024, 01:45 AM IST
ಪೊಟೋ೨೩ಎಸ್.ಆರ್.ಎಸ್೧ (ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಒಕ್ಕೂಟವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.) | Kannada Prabha

ಸಾರಾಂಶ

ಸಂಘಟಿತ ಪ್ರಯತ್ನದಿಂದ ಪ್ರಜಾಪ್ರಭುತ್ವ ಯಶಸ್ಸು ಸಾಧಿಸಲು ಸಾಧ್ಯವಿದೆ. ಆರ್ಥಿಕ ಸ್ವಾಯತ್ತತೆ ಸಿಗಬೇಕು ಹಾಗೂ ಮುಕ್ತವಾಗಿ ಕೆಲಸ ಮಾಡುವ ವ್ಯವಸ್ಥೆ ಬರಬೇಕು.

ಶಿರಸಿ:

ಅಭಿವೃದ್ಧಿ ಜತೆ ಸಾಮಾಜಿಕ ನಾಯಕತ್ವದ ಬೆಳವಣಿಗೆಗೆ ವಿಕೇಂದ್ರೀಕರಣ ವ್ಯವಸ್ಥೆ ಅಗತ್ಯವಿದೆ. ಆಯ್ಕೆಯಾದ ಜನಪ್ರತಿನಿಧಿಗಳು ಸಂವಿಧಾನದ ಆಶಯದಂತೆ ವ್ಯವಸ್ಥೆ ಬೆಳೆಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘಟಿತ ಪ್ರಯತ್ನದಿಂದ ಪ್ರಜಾಪ್ರಭುತ್ವ ಯಶಸ್ಸು ಸಾಧಿಸಲು ಸಾಧ್ಯವಿದೆ. ಆರ್ಥಿಕ ಸ್ವಾಯತ್ತತೆ ಸಿಗಬೇಕು ಹಾಗೂ ಮುಕ್ತವಾಗಿ ಕೆಲಸ ಮಾಡುವ ವ್ಯವಸ್ಥೆ ಬರಬೇಕು. ೧೫ನೇ ಹಣಕಾಸು ಯೋಜನೆ, ನರೇಗಾ, ಜಲ ಜೀವನ್ ಮಿಷನ್, ಪ್ರಧಾನ ಮಂತ್ರಿ ಆವಾಸ್, ಸ್ವಚ್ಛ ಭಾರತ ಯೋಜನೆ ಇನ್ನಿತರ ಯೋಜನೆಗಳನ್ನು ನೇರವಾಗಿ ಗ್ರಾಪಂ ಮೂಲಕ ಜಾರಿಗೊಳಿಸಿ, ವಿಕೇಂದ್ರೀಕರಣ ವ್ಯವಸ್ಥೆ ಬಗ್ಗೆ ನಂಬಿ ಇಟ್ಟು ಕೇಂದ್ರ ಸರ್ಕಾರ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದರು.

ದೇಶದಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಮೊದಲು ಕರ್ನಾಟಕದಲ್ಲಿ ಜಾರಿಗೊಂಡಿದೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ವಿಕೇಂದ್ರೀಕರಣ ವ್ಯವಸ್ಥೆ ಜಾರಿ ಮಾಡಿ ದೇಶಕ್ಕೆ ಮಾದರಿ ವ್ಯಕ್ತಿಯಾಗಿದ್ದರು ಎಂದರು.

ಗ್ರಾಪಂ ಮಟ್ಟದಲ್ಲಿ ಹಲವಾರು ನಿಬಂಧನೆಗಳಿರುವುದರಿಂದ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಮುಕ್ತವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವೆಲ್ಲರೂ ಒಪ್ಪುವಂಹ ವಿಷಯ. ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಜನರ ಜತೆ ನಿಕಟ ಸಂಪರ್ಕದಲ್ಲಿರುವ ಗ್ರಾಪಂ ಸದಸ್ಯರಿಗೆ ಮುಕ್ತವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅವಕಾಶ ದೊರೆಯಬೇಕಿದೆ ಎಂದು ಹೇಳಿದರು.

ಮಾಹಿತಿ ಪುಸ್ತಕವನ್ನು ಪಂಚಾಯತ್ ರಾಜ್ ವಿಕೇಂದ್ರೀಕರಣ ಉಪಾಧ್ಯಕ್ಷ ಪ್ರಮೋದ ಹೆಗಡೆ ಯಲ್ಲಾಪುರ ಬಿಡುಗಡೆಗೊಳಿಸಿದರು.

ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಒಕ್ಕೂಟದ ಅಧ್ಯಕ್ಷ ನವೀನ ಶೆಟ್ಟಿ ಚಿಪಗಿ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಚುನಾಯಿತ ಗ್ರಾಮ ಪ್ರತಿನಿಧಿಗಳ ಮಹಾ ಒಕ್ಕೂಟ ಅಧ್ಯಕ್ಷ ಕೆ.ಎಸ್. ಸತೀಶ ಕಾಡಶೆಟ್ಟಿಹಳ್ಳಿ, ಚುನಾಯಿತ ಸದಸ್ಯರ ಜಿಲ್ಲಾ ಒಕ್ಕೂಟದ ಸಂಚಾಲಕ ಎಂ.ಕೆ. ಭಟ್ಟ, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಒಕ್ಕೂಟದ ಜಿಲ್ಲಾ ಸಮಿತಿ ಸದಸ್ಯ ಪ್ರವೀಣ ಹೆಗಡೆ ಮಣ್ಮನೆ ಸ್ವಾಗತಿಸಿದರು. ತಾಲೂಕು ಉಪಾಧ್ಯಕ್ಷ ಜಯರಾಮ ಭಟ್ಟ ವಾನಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರವೀಶ ಹೆಗಡೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ