ದೇವರ ಸನ್ನಿಧಿಯಲ್ಲಿ ಭಕ್ತ ಮಗುವಾಗಿರಬೇಕು: ಡಾ.ಭೀಮೇಶ್ವರ ಜೋಷಿ

KannadaprabhaNewsNetwork |  
Published : Jul 04, 2026, 01:45 AM IST
ಪೊಟೋ: 03ಎಸ್‌ಎಂಜಿಕೆಪಿ01ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಿಗೆ ಸ್ವರ್ಣಮುಖ ಹಾಗೂ ಗರ್ಭಗುಡಿಗೆ ರಜತದ್ವಾರ ಸಮರ್ಪಿಸಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ಭೀಮೇಶ್ವರ ಜೋಷಿ ಆರ್ಶೀವಚನ ನೀಡಿದರು.   | Kannada Prabha

ಸಾರಾಂಶ

ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಿಗೆ ಸ್ವರ್ಣಮುಖ ಹಾಗೂ ಗರ್ಭಗುಡಿಗೆ ರಜತದ್ವಾರ ಸಮರ್ಪಿಸಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ಭೀಮೇಶ್ವರ ಜೋಷಿ ಆರ್ಶೀವಚನ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭಕ್ತರಾದವರು ದೇವರ ಸನ್ನಿಧಿಯಲ್ಲಿ ಮಗುವಾಗಿರಬೇಕು. ದೇವರ ಮುಂದೆ ನಾವೆಲ್ಲರೂ ಮಗುವಿನಂತೆ ವರ್ತಿಸಬೇಕು. ಆಗ ಮಾತ್ರ ದೇವಿ ತಾಯಿ ಹೃದಯದಿಂದ ನಮ್ಮನ್ನೆಲ್ಲಾ ಹರಸುತ್ತಾಳೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ಭೀಮೇಶ್ವರ ಜೋಷಿ ಹೇಳಿದರು.

ನಗರದಲ್ಲಿ ಶುಕ್ರವಾರ ಕೋಟೆ ಶ್ರೀ ಮಾರಿಕಾಂಬ ದೇವಿಗೆ ಸ್ವರ್ಣಮುಖ ಹಾಗೂ ಗರ್ಭಗುಡಿಗೆ ರಜತದ್ವಾರ ಸಮರ್ಪಿಸಿ ಅವರು ಆರ್ಶೀವಚನ ನೀಡಿದರು.

ಮಾರಿಕಾಂಬೆ ದೇವಿಯ ಕಣ್ಣು ಉಗ್ರ ಸ್ವರೂಪವಾಗಿರುತ್ತದೆ. ಅಂದರೆ ನಾವು ತಪ್ಪಾಗಿ ವರ್ತಿಸಿದಾಗ ಮಾತ್ರ ಅವಳು ಉಗ್ರದೃಷ್ಟಿ ಬೀರುತ್ತಾಳೆ. ನಾವು ಸರಿದಾರಿಯಲ್ಲಿದ್ದರೆ ಮಾತೃಹೃದಯದಿಂದ ನಮ್ಮೆಲ್ಲರನ್ನು ಆಶೀರ್ವದಿಸುತ್ತಾಳೆ. ದೇವರ ಬಳಿ ನಾವು ಏನನ್ನೂ ಕೇಳಬಾರದು, ಬದಲಾಗಿ ನಾನು ಯಾವುದಕ್ಕೆ ಅರ್ಹನಿದ್ದೇನೋ ಅದೆಲ್ಲವನ್ನು ಅನುಗ್ರಹಿಸು ಎಂದು ಬೇಡಿಕೊಂಡರೆ ದೇವಿ ಸಂತುಷ್ಟಳಾಗಿ ಎಲ್ಲವನ್ನೂ ದಯಪಾಲಿಸುತ್ತಾಳೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಜಗಳಗಳಾದಾಗ ಅಥವಾ ವೈಮನಸ್ಸು ಉಂಟಾದಾಗ ಒಬ್ಬರಿಗೊಬ್ಬರು ನಿನಗೆ ಮುಂದೆ ಇದೆ ಮಾರಿಹಬ್ಬ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಅಂದರೆ ಮಾರಿಹಬ್ಬದಲ್ಲಿ ನಾವು ಬಲಿಯನ್ನು ಕೊಡುತ್ತೇವೆ. ಅದೇ ರೀತಿ ನಮ್ಮಲ್ಲಿರುವ ಅಧರ್ಮ, ದ್ವೇಷ, ಅಸೂಯೆಗಳನ್ನು ತೆಗೆದುಹಾಕುವುದಕ್ಕೆ ಮಾರಿಹಬ್ಬದ ಉಲ್ಳೇಖವನ್ನು ಮಾಡುತ್ತಾರೆ ಎಂದು ಹೇಳಿದರು.

ಈ ವರ್ಷ ಅನಾವೃಷ್ಟಿಯ ಮುನ್ಸೂಚನೆ ತೋರುತ್ತಿದೆ. ಈ ವೇಳೆಗೆ ತುಂಗಾನದಿ ೨ ಬಾರಿ ತುಂಬಬೇಕಿತ್ತು. ಆದರೆ ಇಂದು ನದಿಯ ತಳಭಾಗ ಕಾಣುತ್ತಿದೆ. ಆದ್ದರಿಂದ ಈ ಬಾರಿ ಉತ್ತಮ ಮಳೆಯನ್ನು ದಯಪಾಲಿಸಿ ಜಲಸಮೃದ್ಧಿಯನ್ನು ನೀಡಿ ಸುಭೀಕ್ಷತೆಯನ್ನು ಎಲ್ಲೆಡೆ ತಾಯಿ ದಯ ಪಾಲಿಸಲಿ ಎಂದು ನಾವುಗಳು ದೇವಿಯಲ್ಲಿ ಮೊರೆ ಇಟ್ಟಿದ್ದೇವೆ. ಆ ತಾಯಿ ನಮ್ಮೆಲ್ಲಾ ಕಷ್ಟಗಳನ್ನು ಪರಿಹರಿಸುತ್ತಾಳೆ ಎಂಬ ನಂಬಿಕೆಯಿದೆ ಎಂದು ಡಾ.ಭೀಮೇಶ್ವರ ಜೋಷಿ ಹೇಳಿದರು.

ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ದೇವಸ್ಥಾನದ ಆಡಳಿತ ಮಂಡಳಿ ಕೇವಲ ಮಾರಿಹಬ್ಬಕ್ಕೆ ಮಾತ್ರ ಸೀಮಿತವಾಗಿಲ್ಲ. ವರ್ಷಪೂರ್ತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಲೇ ಇರುತ್ತಾರೆ. ಜೊತೆಗೆ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ನಿಜಕ್ಕೂ ಆಡಳಿತ ಮಂಡಳಿಯ ಕಾರ್ಯವೈಖರಿ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಸಮಿತಿ ಮುಖಂಡರಾದ ಉಮಾಪತಿ, ಎಸ್.ಸಿ. ಲೋಕೇಶ್, ಸುನಿಲ್, ಚಂದ್ರಶೇಖರ್, ಜಯಲಕ್ಷ್ಮೀ ಈಶ್ವರಪ್ಪ, ಇತರರು ಉಪಸ್ಥಿತರಿದ್ದರು.

ಮೊದಲು ಈ ಸ್ಥಳದಲ್ಲಿ ಮಾರಿಗದ್ದುಗೆ ಮಾತ್ರ ಇತ್ತು. ಇದೀಗ ಆಡಳಿತ ಮಂಡಳಿಯವರ ಪರಿಶ್ರಮ, ಕಾರ್‍ಯವೈಖರಿಯಿಂದ ಸುಂದರವಾದ ದೇವಸ್ಥಾನವಾಗಿದೆ. ಪ್ರತಿನಿತ್ಯ ಶ್ರದ್ಧಾ-ಭಕ್ತಿಯ ಕೇಂದ್ರವಾಗಿ ರೂಪುಗೊಂಡಿದೆ.

- ಎಸ್.ಎನ್.ಚನ್ನಬಸಪ್ಪ, ಶಾಸಕ, ಶಿವಮೊಗ್ಗ ಕ್ಷೇತ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಲಾಖೆಗಳ ಸಮನ್ವಯತೆಗೆ ಡ್ಯಾಶ್‌ಬೋರ್ಡ್‌ ರಚಿಸಿ
ಸ್ಪಿನ್ ಮಾಂತ್ರಿಕರಂತೆ ಮಾತುತಿರುಗಿಸುತ್ತಿರಾ: ಕೃಷ್ಣ ತರಾಟೆ