ಕನ್ನಡಪ್ರಭ ವಾರ್ತೆ ಹುಮನಾಬಾದ್
ನಾನು ಶಾಸಕನಾಗಿ ಅಧಿಕಾರ ವಹಿಸಿದ ಬಳಿಕ ಹುಕುಂಶಾಹಿಗೆ ಇತಿಶ್ರೀ ಹಾಡುತ್ತಿರುವುದನ್ನು ಸಹಿಸದೆ ಹಾಗೂ ಕ್ಷೇತ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಸಹಿಸಲಾಗದೆ ಇಲ್ಲಸಲ್ಲದ ಆರೋಪವನ್ನು ಇಲ್ಲಿಯ ಕಾಂಗ್ರೆಸ್ ಮಾಡುತ್ತಿದೆ ಎಂದು ಶಾಸಕ ಡಾ.ಸಿದ್ದು ಪಾಟೀಲ್ ಆರೋಪಿಸಿದರು.ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಕಠಳ್ಳಿ ಪ್ರಕರಣಕ್ಕೆ ಬಣ್ಣ ಬಳೆಯುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ ಎಂದು ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಅಡೆ ತಡೆ ತರುತ್ತಿದ್ದಾರೆ ಎಂದು ಆರೋಪಿಸಿದರು.
ಸಂಚಾರ ನಿಯಮ ಉಲ್ಲಂಘನೆ ಹೆಸರಲ್ಲಿ ರೈತರಿಂದ ಪೊಲೀಸರ ವಸೂಲಿ:ಹುಮನಾಬಾದ್ ಪಟ್ಟಣದಲ್ಲಿ ಸಂಚಾರ ಠಾಣೆಯಿಂದ ಎಲ್ಲಿ ಜನಸಾಮಾನ್ಯರಿಗೆ ಸುಲಭ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅಲ್ಲಿ ಅನುಕೂಲ ಮಾಡಿಕೊಡುವುದನ್ನು ಬಿಟ್ಟು, ಕೇವಲ ಸಂಚಾರ ನಿಯಮ ಉಲ್ಲಂಘನೆ ಹೆಸರಿನಲ್ಲಿ ರೈತರಿಗೆ ಹಾಗೂ ಬಡ ಜನರಿಗೆ ದಂಡ ಹಾಕಲಾಗುತ್ತಿದೆ. ಇದರಿಂದ ರೈತರ ಮೇಲೆ ಬಿತ್ತನೆಯ ಜೊತೆಗೆ ಇದರ ಹೊರೆ ಬೀಳುತ್ತಿದೆ. ಸಂಚಾರ ನಿಯಮ ಪಾಲನೆ ಕುರಿತು ಕೆಲಸ ಮಾಡಲಿ, ಆದರೆ ಹೊಲಕ್ಕೆ ತೆರಳುವ ರೈತರಿಗೆ ದಂಡ ವಿಧಿಸುವುದು ಸರಿಯಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ 5 ಉಚಿತ ಯೋಜನೆಯ ಅಡಿಯಲ್ಲಿ ವಿದ್ಯುತ್ ದರ, ಅಬಕಾರಿ, ಮುದ್ರಾಂಕ ಶುಲ್ಕ ಸೇರಿದಂತೆ ವಿವಿಧ ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಮಾಡುತ್ತಿದೆ. ಈ ನಿಟ್ಟಿನಲ್ಲಿ ಗುರುವಾರ ಜೂ.20ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಈಗ ಉತ್ತಮ ಮಳೆಯಾಗುತ್ತಿದೆ. ರೈತರು ಟ್ರ‍್ಯಾಕ್ಟರ್, ಟಿಲ್ಲರ್, ಪಂಪ್‌ಸೆಟ್‌ಗಳನ್ನು ಉಪಯೋಗಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಅದರ ಹೊರೆ ರೈತರ ಮೇಲೆ ಬೀಳಲಿದೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಇದನ್ನೂ ವಿರೋಧಿಸಿ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಿಂದ ತಾಲೂಕು ಆಡಳಿತ ಸೌಧವರೆಗೆ ಗುರುವಾರ ಬೆಳಗ್ಗೆ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹುಮನಾಬಾದ್ ಮಂಡಲ ಅಧ್ಯಕ್ಷ ಪ್ರಭಾಕರ ನಾಗರಾಳೆ, ಬಸವರಾಜ ಆರ್ಯ, ಅನೀಲ್ ಪಸರ್ಗಿ, ಗಜೇಂದ್ರ ಕನಕಟ್ಟಕರ್, ನಾಗಭೂಷಣ ಸಂಗಮಕರ್, ರಾಜು (ನರಸಿಂಗ) ಭಂಡಾರಿ, ಅನೀಲ್ ಜೋಶಿ ಸೇರಿದಂತೆ ಅನೇಕರಿದ್ದರು.