ಶಿಥಿಲಗೊಂಡ ತಂಗುದಾಣ, ಅಪಾಯಕ್ಕೆ ಆಹ್ವಾನ

KannadaprabhaNewsNetwork |  
Published : Jul 22, 2024, 01:16 AM IST
ಲೋಕಾಪುರ | Kannada Prabha

ಸಾರಾಂಶ

ಪ್ರಯಾಣಿಕರಿಗೆ ಆಸರೆಯಾಗಬೇಕಿದ್ದ ಬಸ್ ತಂಗುದಾಣ ಶಿಥಿಲಗೊಂಡು ಯಾವುದೇ ಕ್ಷಣದಲ್ಲಾದರೂ ಕುಸಿದು ಬಿದ್ದು, ಅನಾಹುತಕ್ಕೆ ಎಡೆ ಮಾಡಿಕೊಡುವ ಹಂತ ತಲುಪಿದೆ. ಈಗಾಗಲೇ ಮಳೆಗಾಲ ಆರಂಭಗೊಂಡಿರುವ ಕಾರಣ ಯಾವುದೇ ಸಮಯದಲ್ಲಾದರೂ ಬಸ್ ತಂಗುದಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ, ಸದ್ಯದ ಪರಿಸ್ಥಿತಿಯ ತಂಗುದಾಣವನ್ನು ನೋಡಿ ಪ್ರಯಾಣಿಕರು ಕೂಡ ಆತಂಕಪಡುವಂತಾಗಿದೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಪ್ರಯಾಣಿಕರಿಗೆ ಆಸರೆಯಾಗಬೇಕಿದ್ದ ಬಸ್ ತಂಗುದಾಣ ಶಿಥಿಲಗೊಂಡು ಯಾವುದೇ ಕ್ಷಣದಲ್ಲಾದರೂ ಕುಸಿದು ಬಿದ್ದು, ಅನಾಹುತಕ್ಕೆ ಎಡೆ ಮಾಡಿಕೊಡುವ ಹಂತ ತಲುಪಿದೆ. ಈಗಾಗಲೇ ಮಳೆಗಾಲ ಆರಂಭಗೊಂಡಿರುವ ಕಾರಣ ಯಾವುದೇ ಸಮಯದಲ್ಲಾದರೂ ಬಸ್‌ ತಂಗುದಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ, ಸದ್ಯದ ಪರಿಸ್ಥಿತಿಯ ತಂಗುದಾಣವನ್ನು ನೋಡಿ ಪ್ರಯಾಣಿಕರು ಕೂಡ ಆತಂಕಪಡುವಂತಾಗಿದೆ.

ಲೋಕಾಪುರ ಹೋಬಳಿ ವ್ಯಾಪ್ತಿಗೆ ಬರುವ ಹೆಬ್ಬಾಳ ಬಸ್ ನಿಲ್ದಾಣ ಛಾವಣಿ ಗೋಡೆಗಳು ಸಂಪೂರ್ಣ ಹಾಳಾಗಿವೆ. ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿವೆ. ಬಸ್ ತಂಗುದಾಣದ ಚಾವಣಿ ಶಿಥಿಲಗೊಂಡಿದೆ. ಅದನ್ನು ರಿಪೇರಿ ಮಾಡುವ ಗೋಜಿಗೆ ಅಧಿಕಾರಿಗಳು ಕೂಡ ಹೋಗಿಲ್ಲ. ಒಂದು ವೇಳೆ ದುರಾದೃಷ್ಟವಶಾತ್‌ ಯಾವುದಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ. ಲೋಕಾಪುರ ವ್ಯಾಪ್ತಿಯ ಬಸ್ ತಂಗುದಾಣ ಶಿಥಿಲಾವಸ್ಥೆಗೆ ತಲುಪಿದರೂ ಯಾವ ಸಂಘಟನೆಗಳು ಕೂಡ ರಿಪೇರಿ ಮಾಡುವಂತೆ ಮನವಿಯನ್ನೂ ಸಲ್ಲಿಸಿಲ್ಲ. ವಿಚಿತ್ರವೆಂದರೆ ಜಿಲ್ಲಾ ಉಸ್ತುವಾರಿ ಸಚಿವ ಸ್ವಕ್ಷೇತ್ರದಲ್ಲಿಯೇ ಪರಿಸ್ಥಿತಿ ಈ ರೀತಿ ದುರ್ಲಭವಾಗಿದೆ.ಪ್ರಯಾಣಿಕರಲ್ಲಿದೆ ಜೀವ ಭಯ:

ಪ್ರತಿನಿತ್ಯ ಲೋಕಾಪುರ ಮುಧೋಳಕ್ಕೆ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಬಸ್ ತಂಗುದಾಣ ಶಿಥಿಲಗೊಂಡರೂ ಅದನ್ನು ಸರಿಪಡಿಸುವ ಗೋಜಿಗೆ ಸಾರಿಗೆ ಇಲಾಖೆಯಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಇತ್ತ ಕಣ್ಣು ಹಾಯಿಸದಿರುವುದು ತೀವ್ರ ಮುಜುಗರವಾಗಿದೆ. ಇದೇ ಕಾರಣದಿಂದಾಗಿ ಪ್ರಯಾಣಿಕರು ರಸ್ತೆಯ ಪಕ್ಕದಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಅದರಡಿ ನಿಲ್ಲುವುದಕ್ಕೂ ಭಯ ಪಡುವಂತಾಗಿದೆ. ಹೊರಗಡೆ ನಿಂತರೆ ಮಳೆ, ಬಿಸಿಲು ವಾಹನ ಸವಾರರ ಕಿರಿಕಿರಿ ಒಳಗಡೆ ನಿಂತರೆ ಜೀವ ಭಯ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ದುರಸ್ತಿಗೆ ಆಗ್ರಹ:

ಯಾವಾಗ ಗೋಡೆ ಕುಸಿದು ಬೀಳುತ್ತದೆಯೋ ಗೊತ್ತಿಲ್ಲ. ಜೀವ ಕೈಯಲ್ಲಿ ಇಟ್ಟುಕೊಂಡು ಈ ತಂಗುದಾಣದಲ್ಲಿ ನಿಲ್ಲುವಂತಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸುಮಾರು ವರ್ಷಗಳ ಹಿಂದೆ ನಿರ್ಮಾಣಗೊಂಡು ಬಸ್ ತಂಗುದಾಣ ಸೂಕ್ತ ನಿರ್ವಹಣೆ ಕೊರತೆಯಿಂದ ಹಾಳಾಗಿ ಉಪಯೋಗಕ್ಕೆ ಬಾರದಂತಾಗಿದೆ. ಬಸ್ ತಂಗುದಾಣ ದುರಸ್ತಿಗೊಳಿಸಬೇಕು. ನಿಲ್ದಾಣ ಸುತ್ತಮುತ್ತ ಸ್ವಚ್ಛತೆ ಹಾಗೂ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂಬುದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಬಸ್ ನಿಲ್ದಾಣ ಶಿಥಿಲಗೊಂಡು ತುಂಬಾ ವರ್ಷಗಳೇ ಗತಿಸಿವೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿಲ್ಲ. ಬಸ್‌ ತಂಗುದಾಣ ಶಿಥಿಲಗೊಂಡು ಪಾಳು ಬಿದ್ದಿರುವ ಕಾರಣ ಇದು ಪುಂಡಪೋಕರಿಗಳ ನೆಚ್ಚಿನ ತಾಣವಾಗಿಯೂ ಮಾರ್ಪಟ್ಟಿದೆ. ಹೀಗಾಗಿ ಈ ರಾತ್ರಿ ವೇಳೆ ಈ ತಂಗುದಾಣದತ್ತ ಜನರು ಹೆಜ್ಜೆ ಹಾಕಲು ಹಿಂದೇಟು ಹಾಕುವಂತಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಬಸ್‌ ತಂಗುದಾಣಗಳನ್ನು ದುರಸ್ತಿ ಮಾಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಜನರ ಆಗ್ರಹವಾಗಿದೆ.

--

ಕೋಟ್‌ಹೆಬ್ಬಾಳ ಕ್ರಾಸ್‌ನ ಬಸ್‌ ತಂಗುದಾಣ ಶಿಥಿಲಾವಸ್ಥೆ ತಲುಪಿರುವ ಬಗ್ಗೆ ಈಗಾಗಲೇ ಪಿಡಬ್ಲ್ಯುಡಿ ಇಲಾಖೆಗೆ ಪತ್ರ ಬರೆದು ತಿಳಿಸಲಾಗಿದೆ. ಆದಷ್ಟು ಬೇಗ ತಂಗುದಾಣ ಮರುನಿರ್ಮಾಣಕ್ಕೆ ನಾವು ಪ್ರಯತ್ನ ಮಾಡುತ್ತೇವೆ.

-ಶ್ರೀನಿವಾಸ ಚಿಗರಡ್ಡಿ ಪಿಡಿಒ ಹೆಬ್ಬಾಳ

---

ಹೆಬ್ಬಾಳ ಗ್ರಾಮದ ಸಾರ್ವಜನಿಕರಿಗೆ ರಸ್ತೆ ಮೇಲೆ ನಿಂತು ವಾಹನಗಳಿಗೆ ಹತ್ತುವ ಪರಿಸ್ಥಿತಿ ಇದೆ. ಮಳೆ, ಬಿಸಿಲು ಲೆಕ್ಕಿಸದೇ ನಿಲ್ಲುವ ಪರಿಸ್ಥಿತಿ ಇದೆ. ಆದಷ್ಟು ಬೇಗನೆ ಬಸ್ ನಿಲ್ದಾಣ ನಿರ್ಮಿಸಿ ಸಾರ್ವಜನಿಕರಿಗೆ ಆಗುವ ತೊಂದರೆ ನಿವಾರಣೆ ಮಾಡಬೇಕು.

-ಗಡ್ಡೆಪ್ಪ ಬಾರಕೇರ, ಹೆಬ್ಬಾಳ ನಿವಾಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧೂಮಪಾನಕ್ಕಿಂತಲೂ ಇದು ಡೇಂಜರ್ : ಸಾವನ್ನಪ್ಪಿದವರು ಅಧಿಕ
ಶ್ರೀಮಠದಲ್ಲಿ ಗುರುಶಾಂತವೀರ ಶ್ರೀಗಳ ಅಂತ್ಯಕ್ರಿಯೆ