ಶಿರಾಡಿ ಅವ್ಯವಸ್ಥೆಗೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ

KannadaprabhaNewsNetwork |  
Published : Jul 22, 2024, 01:16 AM IST
21ಎಚ್ಎಸ್ಎನ್7 : ಮಳೆಯಿಂದಾಗಿ ಭೂ ಕುಡಿತ ಉಂಟಾದ ಪ್ರದೇಶಕ್ಕೆ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಿದ್ದರು. | Kannada Prabha

ಸಾರಾಂಶ

ಸಕಲೇಶಪುರ ತಾಲೂಕಿನ ವಿವಿಧ ಪ್ರದೇಶದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶವನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ವೀಕ್ಷಿಸಿದರು.ಶಿರೂರಿನಲ್ಲಿ ಮಳೆ ಮುಂದುವರೆದರೆ ಇನ್ನೂ ಭೂಕುಸಿತವಾಗುತ್ತದೆ. ಸಕಲೇಶಪುರದಿಂದ ಉದ್ದಕ್ಕೂ ಭೂಕುಸಿತವಾಗುತ್ತಲೇ ಇದೆ. ಎಂಟು ವರ್ಷದ ಹಿಂದಿನಿಂದ ಗುತ್ತಿಗೆದಾರ ಕೆಲಸ ಮಾಡುತ್ತಿದ್ದಾನೆ. ಕಳಪೆ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ವೈಜ್ಞಾನಿಕವಾಗಿ ಕಾಮಗಾರಿ ಮಾಡಲು ಚರ್ಚೆ ಮಾಡುತ್ತೇನೆ. ಸ್ಥಳಕ್ಕೆ ಒಮ್ಮೆ ಭೇಟಿ ನೀಡಲು ಮನವಿ ಮಾಡುತ್ತೇನೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಕರ್ತವ್ಯ ಲೋಪ, ಬೇಜವಾಬ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಶಿರಾಡಿಯಲ್ಲಿ ಹೆದ್ದಾರಿ ಹದಗೆಟ್ಟಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ತಾಲೂಕಿನ ವಿವಿಧ ಪ್ರದೇಶದಲ್ಲಿ ಮಳೆಯಿಂದ ಹಾನಿಗೀಡಾದ ರಾಷ್ಟ್ರೀಯ ಹೆದ್ದಾರಿ 75 ಅನ್ನು ಭಾನುವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಐದಾರು ದಿನಗಳಿಂದ ರಾಜ್ಯದಲ್ಲಿ ದೊಡ್ಡಮಟ್ಟದ ಮಳೆ ಆರಂಭವಾಗಿದೆ. ೨೦೧೮ರಲ್ಲಿ ನಾನು ಸಿಎಂ ಆಗಿದ್ದಾಗ ಇದೇ ರೀತಿ ಮಳೆಯಾಗಿತ್ತು. ೨೦೧೮ರ ನಂತರ ಈ ರೀತಿ ಮಳೆಯಾಗಿದೆ. ಒಂದೆಡೆ ಜಲಾಶಯಗಳು ತುಂಬಿದ್ದು ಪಕ್ಕದ ರಾಜ್ಯಗಳ ಜೊತೆ ಸಂಘರ್ಷಕ್ಕೆ ಒಂದು ವರ್ಷ ವಿರಾಮ ಸಿಕ್ಕಿದೆ. ಮಳೆಯಿಂದ ಆಗಿರುವ ಅನಾಹುತಗಳು, ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಶಿರೂರಿನಲ್ಲಿ ಮಳೆ ಮುಂದುವರೆದರೆ ಇನ್ನೂ ಭೂಕುಸಿತವಾಗುತ್ತದೆ. ಸಕಲೇಶಪುರದಿಂದ ಉದ್ದಕ್ಕೂ ಭೂಕುಸಿತವಾಗುತ್ತಲೇ ಇದೆ. ಎಂಟು ವರ್ಷದ ಹಿಂದಿನಿಂದ ಗುತ್ತಿಗೆದಾರ ಕೆಲಸ ಮಾಡುತ್ತಿದ್ದಾನೆ. ಕಳಪೆ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗುತ್ತಿದೆ. ಕೇಂದ್ರದ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಈ ಮಾಹಿತಿ ಕೊಡುತ್ತೇನೆ. ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ವೈಜ್ಞಾನಿಕವಾಗಿ ಕಾಮಗಾರಿ ಮಾಡಲು ಚರ್ಚೆ ಮಾಡುತ್ತೇನೆ. ಸ್ಥಳಕ್ಕೆ ಒಮ್ಮೆ ಭೇಟಿ ನೀಡಲು ಮನವಿ ಮಾಡುತ್ತೇನೆ ಎಂದರು.

ಧೈರ್ಯ ತುಂಬಬೇಕು: ರಾಜ್ಯ ಸರ್ಕಾರದ ಮಂತ್ರಿಗಳು ಭೇಟಿ ನೀಡಿ ಜನಗಳಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಆದ್ದರಿಂದ ನಾನು ನಿನ್ನೆಯಿಂದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಹೆದ್ದಾರಿಯನ್ನು ಪರಿಶೀಲಿಸಿದ್ದೇನೆ. ಸ್ಥಳ ಪರಿಶೀಲನೆ ಮಾಡುವುದು ಜನಪ್ರತಿನಿಧಿಯಾಗಿ ನನ್ನ ಧರ್ಮ, ಯಾವ ಸರ್ಕಾರವೂ ಹತ್ತು ಲಕ್ಷ ಪರಿಹಾರ ನೀಡಲು ಸಾಧ್ಯವೇ ಇಲ್ಲ ಎಂಬ ಸಚಿವರೊಬ್ಬರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಅವರಿಗೆ ಸಮಯ ಸಿಕ್ಕಿದರೆ ಕೊಡಗಿಗೆ ಭೇಟಿ ನೀಡಲಿ. ನನ್ನ ಕಾಲದಲ್ಲಿ ಹತ್ತು ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ್ದೇವೆ. ಒಂದು ಲಕ್ಷ ಪರಿಹಾರ ಕೊಟ್ಟಿದ್ದೇವೆ, ಐವತ್ತು ಸಾವಿರ ರು.ಗಳನ್ನು ಮನೆ ಪದಾರ್ಥ ಕೊಳ್ಳಲು ಕೊಟ್ಟಿದ್ದೇವೆ ಎಂದರು.

ಪರಸ್ಪರ ವಿಶ್ವಾಸದಲ್ಲಿ ಕೆಲಸ ಮಾಡಬೇಕು: ನಾನು, ಅಶೋಕ್ ಒಟ್ಟಿಗೆ ಬಂದಿದ್ದೇವೆ. ಇಲ್ಲಿ ಜಿಲ್ಲಾಡಳಿತ ಮಳೆಹಾನಿಯನ್ನು ವೀಕ್ಷಿಸಲು ಸಹಕಾರ ಕೊಟ್ಟಿದ್ದಾರೆ. ನಿನ್ನೆ ಐದು ಕಿಲೋಮೀಟರ್ ಹಿಂದೆಯೇ ತಡೆಗೋಡೆ ಇಟ್ಟು ಏನೂ ಚಿತ್ರೀಕರಣ ಮಾಡದ ರೀತಿ ಆದೇಶ ಮಾಡಿದ್ದರು. ನಾನು ಯಾರನ್ನೂ ಟೀಕೆ ಮಾಡಲು ಹೋಗಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಸ್ಪರ ವಿಶ್ವಾಸದಲ್ಲಿ ಕೆಲಸ ಮಾಡಬೇಕು ಎಂದರು.

ದರೋಡೆ: ಪಾಪ ಡಿ.ಕೆ.ಶಿವಕುಮಾರ್ ಅವರು ಮಿಲಿಟರಿ ತರಬೇಕು ಎಂದು ಹೇಳಿದ್ದಾರೆ. ಈ ರಾಜ್ಯದಲ್ಲಿ ದರೋಡೆ ನಡೆಯುತ್ತಿದೆ. ಟೆರರಿಸ್ಟ್ ಆಕ್ಟಿವಿಟಿಗಿಂತಲೂ ದರೋಡೆ ಚೆನ್ನಾಗಿ ನಡೆಯುತ್ತಿದೆ. ದರೋಡೆ ಹೊಡೆಯುವುದನ್ನು ನಿಲ್ಲಿಸಲು ಮಿಲಿಟರಿ ಕರೆ ತರಲು ಹೇಳಿದ್ದಾರೆ. ಅಂತಹ ಸಂದರ್ಭ ಬಂದಾಗ ಅದನ್ನೂ ಕರೆತರಲಾಗುವುದು ಎಂದು ಟಾಂಗ್‌ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಒಕ್ಕಲಿಗ ಸಂಘದಿಂದ ನಿರ್ಮಾಣವಾಗುತ್ತಿರುವ ಕೆಂಪೇಗೌಡ ಪ್ರತಿಮೆಯ ಕಾಮಗಾರಿಯನ್ನು ವೀಕ್ಷಿಸಿ ತಾಲೂಕು ಒಕ್ಕಲಿಗ ಸಂಘದಿಂದ ಸನ್ಮಾನ ಸ್ವೀಕರಿಸಿ ನಂತರ ಬೆಳೆಗಾರರ ಸಂಘದಿಂದ ಮನವಿ ಸ್ವೀಕರಿಸಿದರು. ಈ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕ ಸಿಮೆಂಟ್ ಮಂಜು, ಬೇಲೂರು ಶಾಸಕ ಎಚ್ ಕೆ ಸುರೇಶ್, ಹಾಸನ ಶಾಸಕ ಸ್ವರೂಪ್, ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಜಿಲ್ಲಾಧಿಕಾರಿ ಸತ್ಯಭಾಮ, ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಫೋಟೋ ಶೀರ್ಷಿಕೆ...... ೨೧ಎಸ್.ಕೆ.ಪಿ.ಪಿ ೧ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಸಮೀಪ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಳೆಯಿಂದ ಹಾನಿಗೊಳಗಾದ ರಾಷ್ಟ್ರೀಯ ಹೆದ್ದಾರಿ ೭೫ರ ಕಾಮಗಾರಿಯನ್ನು ವೀಕ್ಷಿಸಿದರು. ಶಾಸಕ ಸಿಮೆಂಟ್ ಮಂಜು, ಬೇಲೂರು ಶಾಸಕ ಸುರೇಶ್ ಸೇರಿದಂತೆ ಇತರರು ಹಾಜರಿದ್ದರು.

* ಬಾಕ್ಸ್‌: ಸಿದ್ದು, ಡಿಕೆಶಿಗೆ ಕೈಕಾಲು ನಡುಕ ನಾನು ಕರ್ನಾಟಕಕ್ಕೆ ಬರುತ್ತಿದ್ದೇನೆ ಎಂದರೆ ಅವರಿಗೆ (ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌) ಕೈಕಾಲು ನಡುಗುತ್ತದೆ. ಕರ್ನಾಟಕಕ್ಕೆ ನಾನು ಬರುವುದನ್ನೇ ಕಾಂಗ್ರೆಸ್ ಸಹಿಸಲ್ಲ ಅಂದರೆ ನನ್ನಿಂದ ಏನು ನಿರೀಕ್ಷೆ ಮಾಡ್ತಾರೆ? ನಾನು ಬರಲೇಬಾರದು ಎನ್ನುವ ರೀತಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಮಂಡ್ಯಗೆ ಹೋದರೂ ಬೇಡ ಅಂತಾರೆ, ಉತ್ತರ ಕರ್ನಾಟಕ ಹೋಗ್ತಿನಿ ಅಂದರೆ ಅಲ್ಲಿಗೂ ಬೇಡ ಅಂತಾರೆ. ಸದ್ಯ ಹಾಸನಕ್ಕೆ ಬರಬೇಡಿ ಅನ್ನಲಿಲ್ಲ ಎಂದು ಗೇಲಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?