ಹಾನಗಲ್ಲ: ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, ಸಹೋದರನನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಹನುಮಸಾಗರದಲ್ಲಿ ನಡೆದಿದೆ.
ಮೃತನ ಸಹೋದರ ಕುಮಾರ ಮುರಿಗೆಪ್ಪ ಸವಣೂರ ಕೊಲೆ ಮಾಡಿದ ಆರೋಪಿ ಎಂದು ತಿಳಿದುಬಂದಿದೆ. ಆ. ೭ರಂದು ರಾತ್ರಿ ಸುಮಾರು ೧೦-೩೦ರ ವೇಳೆಗೆ ಸಂತೋಷ ಹಾಗೂ ಕುಟುಂಬಸ್ಥರು ಮನೆಯ ಹೊರಗೆ ಕುಳಿತು ಮಾತನಾಡುತ್ತಿದ್ದರು.
ಈ ವೇಳೆ ಅಲ್ಲಿಗೆ ಬಂದ ಮೃತನ ಸಹೋದರ ಕುಮಾರ, ಪಿತ್ರಾರ್ಜಿತ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ತಾಯಿಯೊಂದಿಗೆ ಜಗಳವಾಡತೊಡಗಿದ್ದಾನೆ. ಈ ವೇಳೆ ಸಂತೋಷ ಮಧ್ಯ ಪ್ರವೇಶಿಸಿ ಆಕ್ಷೇಪ ವ್ಯಕ್ತಪಡಿಸಿದಾಗ ಕುಮಾರ್ ಆಕ್ರೋಶಗೊಂಡು ಸಂತೋಷನಿಗೆ ಬೆದರಿಕೆ ಹಾಕಿ ಕಾಲಿನಿಂದ ಒದ್ದಿದ್ದಾನೆ. ಇದರಿಂದ ಸಂತೋಷ ಕೆಳಗೆ ಬಿದ್ದ ಬಳಿಕ, ಅಲ್ಲೇ ಇದ್ದ ಕಲ್ಲಿನಿಂದ ಆತನ ತಲೆಗೆ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ತಲೆಗೆ ಬಿದ್ದ ಏಟಿನಿಂದ ಗಂಭೀರವಾಗಿ ಗಾಯಗೊಂಡ ಸಂತೋಷ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಮೃತನ ತಾಯಿ ಅಕ್ಕಮ್ಮ ಹಾನಗಲ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹಾನಗಲ್ಲ ಠಾಣೆ ಪಿಎಸ್‌ಐ ಸಂಪತ್‌ಕುಮಾರ ಅನಿಕಿವಿ ಆರೋಪಿ ಕುಮಾರನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಆರಂಭವಾದ ಜಗಳ ಸಹೋದರನ ಸಾವಿನಲ್ಲಿ ಅಂತ್ಯವಾಗಿದ್ದು, ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.