ಹದಿಹರೆಯದ ಸಮಸ್ಯೆಗಳ ಅರಿತುಕೊಳ್ಳಲು ವೈದ್ಯರ ಸಲಹೆ

KannadaprabhaNewsNetwork | Published : Jan 23, 2025 12:45 AM

ಸಾರಾಂಶ

A doctor's advice for dealing with adolescent problems

-ಹದಿ ಹರೆಯದ ಸಮಸ್ಯೆಗಳ ಮಾಹಿತಿ ಶಿಬಿರ ಉದ್ಘಾಟಿಸಿದ ವೈದ್ಯೆ ಅನುಷ್ಕಾ ಸುಧಾಕರ್

-----

ಕನ್ನಡಪ್ರಭವಾರ್ತೆ ಬಾಳೆಹೊನ್ನೂರು:

ಶಾಲಾ ದಿನಗಳಲ್ಲಿ ಹೆಣ್ಣು ಮಕ್ಕಳು ಹದಿ ಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ಅರಿತುಕೊಂಡಿರಬೇಕು ಎಂದು ಆಯುರ್ವೇದ ವೈದ್ಯೆ ಅನುಷ್ಕಾ ಸುಧಾಕರ್ ಹೇಳಿದರು.

ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯ ವತಿಯಿಂದ ಸರ್ಕಾರಿ ಸುವರ್ಣ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಹದಿ ಹರೆಯದ ಸಮಸ್ಯೆಗಳ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳು ವಯಸ್ಸಿಗೆ ಬಂದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಈ ಬಗ್ಗೆ ಹೆಣ್ಣು ಮಕ್ಕಳು ತಮ್ಮ ತಾಯಂದಿರು, ವೈದ್ಯರು ಹಾಗೂ ಶಿಕ್ಷಕಿಯರ ಬಳಿ ಕೇಳಿ ತಿಳಿದುಕೊಂಡಿರಬೇಕು. ದೈನಂದಿನ ಜೀವನದಲ್ಲಿ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು.

ಹದಿಹರೆಯದ ವಯಸ್ಸಿನಲ್ಲಿ ಯಾವುದೇ ರೀತಿ ದಾರಿ ತಪ್ಪದೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ಕಿರಿಯ ವಯಸ್ಸಿನಲ್ಲಿ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮವಾದ ಆರೋಗ್ಯವನ್ನು ಪಡೆಯಲು ಸಾಧ್ಯವಿದೆ ಎಂದರು.

ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಹೆಣ್ಣು ಮಕ್ಕಳು ಕಿರಿಯ ವಯಸ್ಸಿನಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೆ ವೈದ್ಯರು, ತಾಯಂದಿರ ಬಳಿ ಹೇಳಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು.

ವೈಯುಕ್ತಿಕ ಸಮಸ್ಯೆಗಳ ಬಗ್ಗೆ ಅಂಜಿಕೆ ಹೊಂದಿದ್ದರೆ ಭವಿಷ್ಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜೇಸಿಐ ಸಂಸ್ಥೆಯು ಹದಿ ಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಸುಲಭೋಪಾಯದಲ್ಲಿ ಪರಿಹರಿಸಬೇಕು ಎಂಬ ಉದ್ದೇಶದಿಂದ ಮಹಿಳಾ ವೈದ್ಯರಿಂದ ಮಾಹಿತಿ ಶಿಬಿರವನ್ನು ವಿವಿಧೆಡೆ ನೀಡುತ್ತಿದೆ ಎಂದರು.

ಮುಖ್ಯಶಿಕ್ಷಕ ಸೋಮಶೇಖರ್, ಜೇಸಿಐ ಕಾರ್ಯದರ್ಶಿ ವಿ.ಅಶೋಕ್, ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಪೂರ್ವಾಧ್ಯಕ್ಷ ಸುಧಾಕರ್, ಎಸ್.ಎಲ್.ಚೇತನ್, ಸದಸ್ಯರಾದ ಶಾಹಿದ್, ರಂಜಿತ್ ಇದ್ದರು.

------

ಫೋಟೊ: ಬಾಳೆಹೊನ್ನೂರಿನ ಸರ್ಕಾರಿ ಸುರ್ವಣ ಮಾದರಿ ಶಾಲೆಯಲ್ಲಿ ಆಯೋಜಿಸಿದ್ದ ಹದಿಹರೆಯದ ಮಾಹಿತಿ ಶಿಬಿರವನ್ನು ಆಯುರ್ವೇದ ವೈದ್ಯೆ ಅನುಷ್ಕಾ ಸುಧಾಕರ್ ಉದ್ಘಾಟಿಸಿದರು. ಇಬ್ರಾಹಿಂ ಶಾಫಿ, ಸೋಮಶೇಖರ್, ಅಶೋಕ್, ಶಶಿಧರ್ ಇದ್ದರು.

೨೨ಬಿಹೆಚ್‌ಆರ್ ೧

Share this article