ನಿರ್ದಿಗಂತ ತಂಡದಿಂದ ನಾಟಕ ಪ್ರದರ್ಶನ

KannadaprabhaNewsNetwork | Published : Aug 19, 2024 12:56 AM

ಸಾರಾಂಶ

ಮುಂದಿನ ದಿನಮಾನಗಳಲ್ಲಿ ಮಕ್ಕಳಿಗೆ ರಂಗಭೂಮಿಯ ಮಹತ್ವ ಹಾಗೂ ಸಮಾಜ ನೋಡುವ ದೃಷ್ಟಿಕೋನ ಮತ್ತು ಮಕ್ಕಳ ಪ್ರಬುದ್ಧತೆ ಹೆಚ್ಚಿಸುವುದು ನಾಟಕದ ಕಥಾ ಭಾಗವಾಗಿತ್ತು.

ಗದಗ: ನಗರದ ನಟರಂಗ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರಕಾಶ್ ರಾಜ್ ಫೌಂಡೇಶನ್ ನೇತೃತ್ವದ ನಿರ್ದಿಗಂತ ತಂಡದವರಿಂದ ಶಿಕ್ಷಣದಲ್ಲಿ ರಂಗಭೂಮಿ ಯೋಜನೆಯ ಭಾಗವಾಗಿ ಶಾಲಾರಂಗ ಎಂಬ ಶೀರ್ಷಿಕೆ ಅಡಿಯಲ್ಲಿ ನಾಟಕ, ಹಾಡು, ಪ್ರಹಸನ, ಬೊಂಬೆ ಆಟಗಳು ಪ್ರದರ್ಶನಗೊಂಡವು.

ನಿರ್ದಿಗಂತ ತಂಡದವರು ವಿಶೇಷವಾಗಿ ಬ್ಲಾಕ್ ಬಲೂನ್, ಮರ ಮತ್ತು ಮನುಷ್ಯ ಬೊಂಬೆಯಾಟ, ಆಮೆ ಕಥೆ ಅನುಸರಿಸಿ ಮೂರು ನಾಟಕಗಳ ಪ್ರದರ್ಶನ ನೀಡಿದರು. ಮುಂದಿನ ದಿನಮಾನಗಳಲ್ಲಿ ಮಕ್ಕಳಿಗೆ ರಂಗಭೂಮಿಯ ಮಹತ್ವ ಹಾಗೂ ಸಮಾಜ ನೋಡುವ ದೃಷ್ಟಿಕೋನ ಮತ್ತು ಮಕ್ಕಳ ಪ್ರಬುದ್ಧತೆ ಹೆಚ್ಚಿಸುವುದು ನಾಟಕದ ಕಥಾ ಭಾಗವಾಗಿತ್ತು.

ಈ ವೇಳೆ ಪತ್ರಕರ್ತ ಅಜಿತ್ ಘೋರ್ಪಡೆ ಮಾತನಾಡಿ, ಇಂದಿನ ದಿನಮಾನದಲ್ಲಿ ಮಕ್ಕಳು ಕ್ರೀಡೆ, ನಾಟಕ, ಸಂಗೀತ, ಸಾಹಿತ್ಯದಂತಹ ಚಟವಟಿಕೆಗಳಿಂದ ದೂರ ಉಳಿಯುತ್ತ .ಮೊಬೈಲ್ ಹಾಗೂ ಟಿವಿ ಮಾಧ್ಯಮಗಳಲ್ಲಿ ಆಕರ್ಷಿತರಾಗುತ್ತಿದ್ದಾರೆ. ಪೋಷಕರು ಮಕ್ಕಳಿಗೆ ನಾಟಕ,ಸಾಹಿತ್ಯ ಚಟವಟಿಕೆಗಳ ಅಭಿರುಚಿ ಉಣಬಡಿಸಬೇಕಿದೆ ಎಂದರು.

ನಟರಂಗ ಸಂಸ್ಥೆಯ ಅಧ್ಯಕ್ಷ ಸೋಮಶೇಖರಯ್ಯ ಚಿಕ್ಕಮಠ ಮಾತನಾಡಿ, ಕಳೆದ 10 ವರ್ಷಗಳಿಂದ ಆಸಕ್ತ ಮಕ್ಕಳಿಗೆ ರಂಗಭೂಮಿ ಚಟುವಟಿಕೆಗಳು, ಸಂಗೀತ, ನೃತ್ಯ, ಭರತನಾಟ್ಯದಂತಹ ವಿಶೇಷ ತರಗತಿ ಏರ್ಪಡಿಸುವುದರ ಜತೆಗೆ ಅವರಲ್ಲಿ ಸಂಗೀತ, ನೃತ್ಯ ಆಸಕ್ತಿ ಹೆಚ್ಚಿಸುವಲ್ಲಿ ಶ್ರಮಿಸಲಾಗುತ್ತಿದೆ. ಶಾಲಾರಂಗ ಎಂಬ ಒಂದು ಸಂಚಾರ ರಂಗಭೂಮಿಯಲ್ಲಿ ಮಹತ್ವವಾದ ಮೈಲಿಗಲ್ಲಾಗಿದೆ ಹಾಗೂ ನಾಟಕಗಳ ಮೂಲಕ ಸಮಾಜಕ್ಕೆ ವಿಶೇಷ ಕೊಡುಗೆ ನೀಡುತ್ತಿದೆ ಎಂದರು.

ಡಾ.ಜಿ.ಬಿ. ಪಾಟೀಲ ಮಾತನಾಡಿ, ಜಿಲ್ಲೆಯ ಮಕ್ಕಳಿಗೆ ತಿಂಗಳಿಗೊಮ್ಮೆಯಾದರೂ ನಾಟಕ, ಸಂಗೀತ, ಸಾಹಿತ್ಯದಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಟರಂಗ ಸಂಸ್ಥೆಯು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಹಾರೈಸಿದರು.

ಈ ವೇಳೆ ಅಂದಾನಪ್ಪ ವಿಭೂತಿ, ಆರ್.ಎನ್. ಕುಲಕರ್ಣಿ, ವಿ.ಎನ್. ಬೇಂದ್ರೆ, ಮೌನೇಶ್ ಬಡಿಗೇರ, ಗುಂಡಪ್ಪ ನಾಯಕ, ಶಿವಾಜಿ ಚವ್ಹಾಣ, ಷಣ್ಮುಖ ಹಾಗೂ ವರ್ತಕ ವಿಜಯಕುಮಾರ ಹಿರೇಮಠ ಇದ್ದರು.

Share this article