ಕನ್ನಡಪ್ರಭ ವಾರ್ತೆ ಸಕಲೇಶಪುರ
ಎಲ್ಲಾ ಸಮಾಜಗಳು ಒಂದುಗೂಡಿದರೆ ಮಾತ್ರವೇ ಡ್ರಗ್ಸ್ ಮುಕ್ತ ಸಕಲೇಶಪುರ ನಿರ್ಮಾಣ ಸಾಧ್ಯ ಎಂದು ಮಾಜಿ ಶಾಸಕ ಹಾಗೂ ಡ್ರಗ್ಸ್ ಮುಕ್ತ ಭಾರತ ಆಂದೋಲನದ ಪ್ರಮುಖರಲ್ಲಿ ಒಬ್ಬರಾದ ಮಾಜಿ ಶಾಸಕ ಎಚ್. ಎಂ. ವಿಶ್ವನಾಥ್ ಹೇಳಿದರು.ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಡ್ರಗ್ಸ್ ಮುಕ್ತ ಅಭಿಯಾನದ ಸಭೆಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಉತ್ಸಾಹಕರಾಗಿದ್ದಾರೆ. ಇವರಿಗೆ ಶಕ್ತಿ ತುಂಬುವ ಕೆಲಸ ನಾವು ಮಾಡಬೇಕಾಗಿದೆ ಎಂದರು. ತಾಲೂಕಿನ ಎಲ್ಲಾ ಇಲಾಖೆಯ ಸಹಕಾರ ಮತ್ತು ಸಹಯೋಗದೊಂದಿಗೆ, ಕಲೆ, ಸಾಹಿತ್ಯ, ಕ್ರೀಡೆ, ಸಂಗೀತ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದರು.
ನಗರ ಆರಕ್ಷಕ ವೃತ್ತ ನಿರೀಕ್ಷಕ ವನರಾಜು ಮಾತನಾಡಿ, ಡ್ರಗ್ಸ್ ಎಂಬುದು ಅತಿ ದೊಡ್ಡ ಸಾಮಾಜಿಕ ಪಿಡುಗಾಗಿದೆ. ಡ್ರಗ್ಸ್ ಸೇವನೆಯಿಂದ ಅನೇಕ ಯುವಕರು ಮಾತ್ರವಲ್ಲದೆ ಯುವತಿಯರು ಸಹ ದೈಹಿಕ ಅನಾರೋಗ್ಯಕ್ಕೆ ಮಾತ್ರವಲ್ಲದೆ ಮಾನಸಿಕ ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ. ಊರಿನ ಗಣ್ಯರು, ವಿವಿಧ ಸಂಘಟನೆಗಳು, ನಾಗರಿಕರು ಸೇರಿ ಡ್ರಗ್ಸ್ ನಿರ್ಮೂಲನಕ್ಕೆ ಮುಂದಾಗಿರುವುದು ಈ ಊರಿನ ಶ್ರೀಮಂತಿಕೆಯನ್ನು ಮತ್ತಷ್ಟು ಉನ್ನತಕ್ಕೆ ಏರಿಸಿದೆ. ಸಾಮಾಜಿಕ ಪಿಡುಗಾದ ಡ್ರಗ್ಸ್ ನಿರ್ಮೂಲನೆಗೆ ಪೊಲೀಸ್ ಇಲಾಖೆ ದಿನನಿತ್ಯ ಶ್ರಮಿಸುತ್ತಿದೆ. ಜನರು ಸಹಕಾರ ನೀಡಿದರೆ ಡ್ರಗ್ಸ್ ನಿರ್ಮೂಲನೆ ಸಾಧ್ಯ ಎಂದರು.ಸಭೆಯಲ್ಲಿ ಚನ್ನವೇಣಿ ಎಂ ಶೆಟ್ಟಿ, ಶಾರದಾ ಗುರುಮೂರ್ತಿ, ಶಿಕ್ಷಕರ ಸಂಘದ ಸಲೀಂ, ಮಂಜುನಾಥ ಸಂಘಿ, ಸುರೇಶ್, ರುದ್ರಶೆಟ್ಟಿ, ಕೌಸಲ್ಯ ಲಕ್ಷ್ಮಣ್ ಗೌಡ, ನಿರ್ಮಲಾ ಪವಿತ್ರನ್, ಜೈ ಭೀಮ್ ಮಂಜು, ಮಲ್ನಾಡ್ ಮೆಹಬೂಬ್, ಬೆಳಗೋಡು ಬಸವರಾಜು, ಸಂದೇಶ್, ಎಸ್. ಬಿ. ಭಾಸ್ಕರ್, ಮಾಜಿ ಪುರಸಭಾ ಸದಸ್ಯ ಮೋಹನ್ ಮುಂತಾದವರು ಇದ್ದರು.