ಕನ್ನಡಪ್ರಭ ವಾರ್ತೆ ಹೊನ್ನಾಳಿ
ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಾಳಿ-ಶಿವಮೊಗ್ಗ ರಸ್ತೆ ಸಮೀಪದ ಶ್ರೀ ಕಲ್ಬಗಿರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಸಮೀಪ ಕೆಲವು ಅನಾಮಿಕ ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಶನಿವಾರ ನ್ಯಾಮತಿ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ನ್ಯಾಮತಿ ಸಿಪಿಐ ರವಿ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಹೆಚ್ಚುವರಿ ಅಧೀಕ್ಷರಾದ ಪರಮೇಸ್ವರ ಹೆಗಡೆ, ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಮಾಲು ಸಹಿತ ಆರೋಪಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಸಿಪಿಐ ರವಿ ಅವರ ನೇತೃತ್ವದಲ್ಲಿ ನ್ಯಾಮತಿ ಪೊಲೀಸ್ ತಂಡ ಸಾಲುಬಾಳು ಕ್ರಾಸ್ ಬಳಿಯ ಕಲ್ಬಗಿರಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಹೋಗುವ ಕಚ್ಚಾ ರಸ್ತೆಯ ಸ್ವಲ್ಪ ದೂರದಲ್ಲಿ ಆರೋಪಿಗಳು ಬೈಕ್ ನಿಲ್ಲಿಸಿಕೊಂಡು ಕುಳಿತಿದ್ದ ಜಾಗಕ್ಕೆ ಹೊಗಿ ಪೊಲೀಸ್ ತಂಡ ದಾಳಿ ನಡೆಸಿದಾಗ ಅವರ ಬಳಿ ಇದ್ದ ಕವರ್ ಗಳನ್ನು ಪರಿಸೀಲಿಸಿದಾಗ ಅವುಗಳಲ್ಲಿ ಗಾಂಜಾ ಇರುವುದು ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಾಂಜಾವನ್ನು ಶಿವಮೊಗ್ಗದಿಂದ ತಂದಿದ್ದು, ನ್ಯಾಮತಿ ಮತ್ತು ಹೊನ್ನಾಳಿಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಆರೋಪಿಗಳು ತಯಾರಿ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳಾದ ಅರ್ಬಾಜ್ ಖಾನ್ ಶಿವಮೊಗ್ಗ, ಶಂಕರನಾಯ್ಕ ನ್ಯಾಮತಿ ತಾಲೂಕಿನ ಹೋಸಜೋಗ, ಮಹಮ್ಮದ್ ಹುಸೈನ್ ರಝಾ ಯಾನೆ ಮುದಾಸೀರ್ ಶಿವಮೊಗ್ಗ, ಜಾಫರ್ ಸಾದೀಖ್ ಶಿವಮೊಗ್ಗ, ಹಾಗೂ ಮಹಮ್ಮದ್ ರೋಹಿತ್‌ರನ್ನು ವಶಕ್ಕೆ ಪಡೆದು ಅವರಿಂದ ಸುಮಾರು 3 ಕೆ.ಜಿ. 154 ಗ್ರಾಂ ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಬೆಲೆ ಸುಮಾರು 3.20 ಲಕ್ಷ ರು. ಆಗಿದೆ. ಅಲ್ಲದೆ 3 ಮೊಬೈಲ್, 2 ಬೈಕ್‌ಗಳನ್ನು ಕೂಡ ವಶಪಡಿಸಿಕೊಂಡು ನ್ಯಾಮತಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.