ಕಾರ್ಯಾಚರಣೆಯಲ್ಲಿ ನರಹಂತಕ ಕಾಡಾನೆ ಸೆರೆ

KannadaprabhaNewsNetwork |  
Published : Nov 03, 2025, 01:15 AM IST
್ಿಿ | Kannada Prabha

ಸಾರಾಂಶ

ಶೃಂಗೇರಿ ಶೃಂಗೇರಿ: ಕೆರೆಕಟ್ಟೆ ಸಮೀಪ ಕೆರೆಗೆದ್ದೆಯಲ್ಲಿ ಇಬ್ಬರನ್ನು ಬಲಿಪಡೆದಿದ್ದ ಕಾಡಾನೆಯನ್ನು ಭಾನುವಾರ ಸಂಜೆ ವೇಳೆಗೆ ಸೆರೆ ಹಿಡಿದು ಮೊದಲ ದಿನದ ಕಾರ್ಯಾಚರಣೆಯಲ್ಲೆ ಯಶಸ್ವಿಯಾಗಿದೆ.

- ಶೃಂಗೇರಿ ಕೆರೆಕಟ್ಟೆಯಲ್ಲಿ ಸೋಮವಾರದಿಂದ ಕಾರ್ಯಾಚರಣೆ ಶುರು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಶೃಂಗೇರಿ: ಕೆರೆಕಟ್ಟೆ ಸಮೀಪ ಕೆರೆಗೆದ್ದೆಯಲ್ಲಿ ಇಬ್ಬರನ್ನು ಬಲಿಪಡೆದಿದ್ದ ಕಾಡಾನೆಯನ್ನು ಭಾನುವಾರ ಸಂಜೆ ವೇಳೆಗೆ ಸೆರೆ ಹಿಡಿದು ಮೊದಲ ದಿನದ ಕಾರ್ಯಾಚರಣೆಯಲ್ಲೆ ಯಶಸ್ವಿಯಾಗಿದೆ.ಸಮೀಪದ ಭಗವತಿ ಅರಣ್ಯದಲ್ಲಿ ಬೀಡು ಬಿಟ್ಟಿದ್ದ ಆನೆಯನ್ನು ಸಂಜೆಯ ವೇಳೆ ದುಬಾರೆ ಆನೆ ಶಿಬಿರದ 3 ಕುಮ್ಕಿ ಆನೆಗಳನ್ನು ಬಳಸಿ ಸೆರೆ ಹಿಡಿಯುವಲ್ಲಿ ತಂಡ ಯಶಸ್ವಿಯಾಗಿದೆ. ಭಾನುವಾರ ಬೆಳಿಗ್ಗೆಯಷ್ಟೇ ದುಬಾರೆ ಆನೆ ಶಿಬಿರ ಹಾಗೂ ಹಾರಂಗಿ ಆನೆ ಶಿಬಿರಗಳಿಂದ ಐದು ಕುಮ್ಕಿ ಆನೆಗಳನ್ನು ಕೆರೆಕಟ್ಟೆಗೆ ಕರೆತರಲಾಗಿತ್ತು.

ಕೆರೆಕಟ್ಟೆಯಲ್ಲಿ ಆನೆಗಳಿಗೆ ವಿಶ್ರಾಂತಿ ನೀಡಲಾಗಿತ್ತು, ಕಾಡಾನೆಯ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ಸೋಮವಾರ ಕಾರ್ಯಾಚರಣೆ ಎಂದು ಹೇಳಲಾಗಿತ್ತಾದರೂ ಕಾಡಾನೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬೀಡು ಬಿಟ್ಟು ಶೀರ್ಲು ಬಳಿ ರೈತರ ಜಮೀನಿನ ಮೇಲೆ ದಾಳಿ ಮಾಡಿ ಬೆಳೆ, ತೋಟ ನಾಶಗೊಳಿಸಿತ್ತು.ಇದನ್ನು ಗಮನಿಸಿದ್ದ ಅರಣ್ಯ ಇಲಾಖೆ ಭಾನುವಾರ ಸಂಜೆಯ ವೇಳೆ ಆನೆ ಶಿಬಿರದ ಮೂರು ಆನೆಗಳನ್ನು ಬಳಸಿ ಸೆರೆ ಹಿಡಿಯಲಾಗಿದೆ. ಒಂದೇ ದಿನದಲ್ಲಿ ಆನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇಬ್ಬರನ್ನು ಬಲಿ ಪಡೆದು, ಸುತ್ತಮುತ್ತಲ ಪ್ರದೇಶಗ‍ಳಲ್ಲಿ ಭಯ ಭೀತಿ ಹುಟ್ಟಿಸಿದ್ದ ಆನೆ ಸೇರೆಯಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ತಾಲೂಕಿನ ಕೆರೆ ಪಂಚಾಯಿತಿ ಕೆರೆಕಟ್ಟೆ ಬ‍ಳಿ ಕೆರೆಗೆದ್ದೆಯಲ್ಲಿ ಶುಕ್ರವಾರ ಇಬ್ಬರನ್ನು ಬಲಿಪಡೆದ ನರಹಂತಕ ಕಾಡಾನೆ ಸೆರೆಹಿಡಿಯಲು ಕೊಡಗಿನ ದುಬಾರೆ ಆನೆ ಬಿಡಾರದಿಂದ ಐದು ಆನೆಗಳು ಭಾನುವಾರ ಮಧ್ಯಾಹ್ನ ಕೆರೆಕಟ್ಟೆಗೆ ಬಂದವು

ಐದು ಆನೆಗಳನ್ನು ಲಾರಿಗಳಲ್ಲಿ ಕರೆತಂದು ಒಂದೊಂದಾಗಿ ಅವುಗಳನ್ನು ಇಳಿಸುತ್ತಿದ್ದಂತೆ ಕುತೂಹಲದಿಂದ ಸುತ್ತಮುತ್ತಲ ಜನರು ಜಮಾಯಿಸಿದ್ದರು.

ಕಾರ್ಯಾಚರಣೆ ಹಿನ್ನಲೆಯಲ್ಲಿ ದುಬಾರೆ ಆನೆ ಬಿಡಾರದ ಪ್ರಶಾಂತ, ಧನಂಜಯ, ಅಜಯ, ಹರ್ಷ, ಏಕಲವ್ಯ ಎಂಬ ಐದು ಆನೆಗಳ ತಂಡ ಕೆರೆಕಟ್ಟೆಯಲ್ಲಿ ಬೀಡು ಬಿಟ್ಟಿದ್ದವು. ಇಟಿಎಫ್ ಸಿಬ್ಬಂದಿ, ಅರವಳಿಕೆ ತಜ್ಞರ ತಂಡವೂ ಜತೆಗೂಡಿದೆ.

ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿ ಎರಡು ದಿನಗಳೇ ಕಳೆದರೂ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಘಟನೆ ಇನ್ನೂ ಮಾಸಿಲ್ಲ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಆಗಾಗ ಭೇಟಿ ನೀಡುತ್ತಲೇ ಇದ್ದಾರೆ. ಅಂದು ಈ ಭಾಗದಲ್ಲಿ ತೀವ್ರ ಆಕ್ರೋಶ, ಪ್ರತಿಭಟನೆ ನಡೆದು ಉನ್ನತ ಅಧಿಕಾರಿಗಳು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಜನರ ಮನವೊಲಿಸಿ ಸರ್ಕಾರದ ಮೇಲೆ ತೀವ್ರ ಒತ್ತಡ ಉಂಟಾದ ಪರಿಣಾಮ ಕೊನೆಗೂ ಸರ್ಕಾರ ಆನೆ ಸೆರೆಹಿಡಿಯಲು ಆದೇಶ ಮಾಡಿತ್ತು

ಅರಣ್ಯ ಇಲಾಖೆಯಿಂದ ಮೃತರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ಚೆಕ್ ನೀಡಿ. ಆನೆ ಸೆರೆ ಹಿಡಿದು ಸ್ಥಳಾಂತರಿಸುವ ಭರವಸೆ ನೀಡಲಾಗಿತ್ತು.

ಕಳೆದೆರೆಡು ವರ್ಷಗಳಿಂದ ಕೆರೆ ಪಂಚಾಯಿತಿ ಮುಡುಬ, ತಲ್ಸಾರ್, ಕಲ್ಚಾರ್,ಕೆರೆಗೆದ್ದೆ, ಗಣಪತಿ ಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳು ಓಡಾಡುತ್ತಾ ಬೆಳೆ, ಜಮೀನುಗಳನ್ನು ಹಾನಿಗೊಳಿಸಿ ನಾಶಪಡಿಸುತ್ತಲೇ ಇತ್ತು. ಜೀವಭಯದಲ್ಲಿ ದೂರದೂರದ ಒಂಟಿಮನೆಗಳ ಪ್ರದೇಶದಲ್ಲಿ ಕಾಲು ದಾರಿಯಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳು ಓಡಾಡುತ್ತಲೇ ಇದ್ದರು. ತೋಟ, ಜಮೀನುಗಳನ್ನು ನಾಶಪಡಿಸುತ್ತಿದ್ದ ಕಾಡಾನೆಗಳು ಕೆರೆಕಟ್ಟೆ ಗಣಪತಿಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಕಾಣಿಸತೊಡಗಿತು. ಆದರೂ ಎಚ್ಚೆತ್ತುಕೊಳ್ಳಲೇ ಇಲ್ಲ. ಎರಡು ವರ್ಷಗಳ ಹಿಂದೆ ಕೃಷ್ಣಪ್ಪ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು. ಇಂತಹ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಕಳೆದ ಶುಕ್ರವಾರ ಬೆಳಿಗ್ಗೆ ತಮ್ಮ ಮನೆಗಳ ಸಮೀಪದಲ್ಲೆ ಹರೀಶ್ ಶೆಟ್ಟಿ ಹಾಗೂ ಉಮೇಶ್ ಗೌಡರನ್ನು ಬಲಿ ಪಡೆದಿದೆ ಇದರಿಂದ ಒಟ್ಟು ಮೂರು ಜೀವಗಳ ಹಾನಿಗೆ ಕಾಡಾನೆ ಕಾರಣವಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅನೇಕ ಕುಟುಂಬಗಳು ತಲೆ ತಲಾಂತರದಿಂದ ವಾಸಿಸುತ್ತಿವೆ. ಬಹುತೇಕ ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಬಡತನ ರೇಖೆಗಿಂದ ಕಡಿಮೆ ಆದಾಯ ಹೊಂದಿರುವ ಕುಟುಂಬಗಳೇ ಆಗಿವೆ. ಅನುಕೂಲಸ್ಥ ಕುಟುಂಬಗಳು ಪರಿಹಾರ ಪಡೆದು ಹೊರಹೋದರೆ ಬಡ ಕುಟುಂಬಗಳು ಮಾತ್ರ ಉಳಿದಿವೆ. ಇತ್ತ ಪರಿಹಾರವೂ ಸಿಗುತ್ತಿಲ್ಲ. ಅತ್ತ ಪುನರ್ ವಸತಿಯೂ ಇಲ್ಲ. ಬದುಕು ಮೂರಾಬಟ್ಟೆಯಾಗಿದೆ.ಕಾಡು ಪ್ರಾಣಿಗಳ ಭಯದ ನೆರಳಲ್ಲಿ ಬದುಕುವಂತಾಗಿದೆ.

2 ಶ್ರೀ ಚಿತ್ರ 1-

ಶೃಂಗೇರಿ ಕೆರೆಕಟ್ಟೆಯಲ್ಲಿ ಇಬ್ಬರ ಬಲಿ ಬಡಿದ ಕಾಡಾನೆ ಸೆರೆಗಾಗಿ ಕೊಡಗಿನ ದುಬಾರೆ ಆನೆ ಬಿಡರಾದಿಂದ ಲಾರಿಗಳನ್ನು ಕೆರೆಕಟ್ಟೆಗೆ ತರುತ್ತಿರುವುದು.

2 ಶ್ರೀ ಚಿತ್ರ 2-

ಶೃಂಗೇರಿ ಕೆರೆಕಟ್ಟೆಯಲ್ಲಿ ಆನೆಗಳು ಲಾರಿಯಲ್ಲಿ ಬಂದಿಳಿಯುವಾಗ ಜನರು ಗಂಪುಗೂಡಿ ನೋಡುತ್ತಿರುವುದು.

2 ಶ್ರೀ ಚಿತ್ರ 3-

ಶೃಂಗೇರಿ ಕೆರೆಪಂಚಾಯಿತಿ ಶೀರ್ಲು ಗ್ರಾಮದಲ್ಲಿ ಶನಿವಾರ ಕಾಡಾನೆ ಮತ್ತೆ ದಾಳಿ ನಡೆಸಿ ಜಮೀನು ಹಾನಿಗೊಳಿಸಿರುವುದು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ