ಸಮರ್ಪಕ ನೀರು ಪೂರೈಕೆಗೆ ಒತ್ತಾಯ । 31ನೇ ವಿತರಣಾ ಕಾಲುವೆ ವ್ಯಾಪ್ತಿಯ ಕೆಳಭಾಗದಲ್ಲಿ ನೀರಿನ ಕೊರತೆ
ಕನ್ನಡಪ್ರಭ ವಾರ್ತೆ ಕಾರಟಗಿ
ಸಮೃದ್ಧಿ ಮಳೆಯಿಂದ ತುಂಗಾಭದ್ರಾ ಜಲಾಶಯ ಭರ್ತಿಯಾಗಿದ್ದು, ಈ ನಡುವೆ ತುಂಗಭದ್ರಾ ಎಡದಂಡೆ ನಾಲೆಯ ೩೧ನೇ ವಿತರಣಾ ಕಾಲುವೆ ವ್ಯಾಪ್ತಿಯ ಉಪಕಾಲುವೆಗಳಿಗೆ ನೀರಿನ ಕೊರತೆ ಉಂಟಾಗಿದೆ. ಇದರಿಂದ ರೈತ ಸಮೂಹ ಆತಂಕಕ್ಕೊಳಗಾಗಿದೆ.
ನಮ್ಮ ಪಾಲಿನ ನೀರು ಪೂರೈಕೆ ಮಾಡಿ ಸಾವಿರಾರು ಎಕರೆ ಪ್ರದೇಶದಲ್ಲಿನ ಬತ್ತದ ಬೆಳೆ ಒಣಗುತ್ತಿವೆ. ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ಮತ್ತು ನೀರುಗಳ್ಳತನವನ್ನು ತಡೆಹಿಡಿಯಬೇಕು. ಎರಡು ದಿನಗಳಲ್ಲಿ ೩೧/೩ರ ೨ನೇ ಉಪಕಾಲುವೆಗೆ ಸಮರ್ಪಕ ನೀರು ಬಿಡುಗಡೆ ಮಾಡದಿದ್ದರೆ, ಸೆ. ೨೦ರಂದು ಉಪವಿಭಾಗ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಧರಣಿ ನಡೆಸುವುದಾಗಿ ಉಪಕಾಲುವೆ ವ್ಯಾಪ್ತಿಯ ಕಿಂದಿಕ್ಯಾಂಪ್, ಯರಡೋಣಾ, ಈಳಿಗನೂರು, ಉಳೇನೂರು ಗ್ರಾಮಗಳ ನೂರಾರು ರೈತರು ಎಚ್ಚರಿಕೆ ನೀಡಿದ್ದಾರೆ.
ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಿ. ಸತ್ಯನಾರಾಯಣ ಮಾತನಾಡಿ, ೩೧/೩ರ ೨ನೇ ಉಪಕಾಲುವೆಯಲಿ ಒಟ್ಟು ೯೨೦ ಅಧಿಕೃತ ನೀರಾವರಿ ಪ್ರದೇಶವಿದೆ. ಅಕ್ರಮ ಪೈಪ್‌ಲೈನ್‌ಗಳು ಜಾಸ್ತಿಯಾಗಿವೆ. ಅಧಿಕೃತ ನೀರಾವರಿಯಲ್ಲಿ ಬೆಳೆಗಳಿಗೆ ನೀರಿಲ್ಲದೆ ಒಣಗಿದರೆ ಅನಧಿಕೃತ ಹೊಲಗಳಿಗೆ ಸಮೃದ್ಧಿ ನೀರು ತಲುಪುತ್ತಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಅಸಲಿಗೆ ಏನೂ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಫಸಲು ಗಣಪತಿ, ಶರಣಯ್ಯಸ್ವಾಮಿ ಯರಡೋಣಾ, ಸೋಮಪ್ಪ, ಪಿ. ಶರಣಪ್ಪ, ಬಾಲಪ್ಪ, ವಿ. ರವಿ, ಎಸ್. ಸ್ಯಾಮವೇಲು, ದೊಡ್ಡನಗೌಡ, ವೆಂಕ ವೀರರಾಜು, ರುದ್ರಮೂರ್ತಿ ಸೇರಿದಂತೆ ಇತರ ಗ್ರಾಮಗಳ ರೈತರಿದ್ದರು.ಪಿಐ ಭರವಸೆ:
ಈ ವೇಳೆ ರೈತರಿಗೆ ಸಮಜಾಯಿಸಿ ನೀಡಿದ ಎಂಜಿನಿಯರ್ ನಾಗಪ್ಪ, ಅಕ್ರಮ ಪೈಪ್‌ಲೈನ್ ತೆಗೆದು ಹಾಕಿದರೆ ಮತ್ತೇ ಮತ್ತೇ ಹಾಕುತ್ತಾರೆ, ಕಳೆದ ವರ್ಷ ಒಟ್ಟು ೧೨ ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನು ಎರಡು ದಿನಗಳಲ್ಲಿ ನೀರು ಪೂರೈಕೆಗೆ ಕ್ರಮ ಜರುಗಿಸಲಾಗುವುದು ಎಂದರು.