ಬಸವರಾಜ ಹಿರೇಮಠ
ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಗ್ರಾಮ ದೇವತೆಗಳ ಜಾತ್ರೆ ಕಳೆಗಟ್ಟಿದೆ. ಈಗಾಗಲೇ ಅಳ್ನಾವರ ಸಮೀಪದ ಬೆಣಚಿ ಜಾತ್ರೆ ಅದ್ಧೂರಿಯಾಗಿ ನಡೆದಿದ್ದು, ಸದ್ಯ ಮೇ 1 ರಿಂದ ಧಾರವಾಡ ತಾಲೂಕಿನ ಬೆನಕಟ್ಟಿ, ಯಾದವಾಡ, ಮನಗುಂಡಿ, ಕಲ್ಲೆ, ಇಟಿಗಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹತ್ತಾರು ವರ್ಷಗಳ ನಂತರ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಭಕ್ತಿ-ಭಾವದ ಜಾತ್ರೆಗಳು: ಪ್ರತಿ ಜಾತ್ರೆಗಳಲ್ಲೂ ಧಾರ್ಮಿಕ ಕಾರ್ಯಕ್ರಮಗಳು ಮಾತ್ರವಲ್ಲದೇ, ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳು ಗಮನ ಸೆಳೆಯುತ್ತಿವೆ. ದೇವಿಯನ್ನು ಗ್ರಾಮ ಪ್ರವೇಶಿಸುವಾಗ ನೂರಾರು ಜನರು ಕುಂಭ ಹೊತ್ತು, ಆರತಿ ಎತ್ತಿ, ಡೊಳ್ಳು- ಜಗ್ಗಲಗಿ ಮೂಲಕ ಸಂಭ್ರಮದಿಂದ ಬರಮಾಡಿಕೊಂಡಿದ್ದಲ್ಲದೇ, ನಿತ್ಯ ನಸುಕಿನಲ್ಲಿ ದೇವಿಗೆ ಕುಂಕುಮಾರ್ಚನೆ, ರುದ್ರಾಭಿಷೇಕ, ಚಂಡಿಕಾ ಹೋಮಗಳು ಜನರನ್ನು ಸಂಪೂರ್ಣ ಭಕ್ತಿಮಯವಾಗಿಸಿವೆ. ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಅಮ್ಮಿನಬಾವಿ, ಉಪ್ಪಿನಬೆಟಗೇರಿ, ರೋಣ ಸೇರಿದಂತೆ ಹಲವು ಮಠಾಧೀಶರಿಂದ ಪ್ರವಚನದ ಮೂಲಕ ಜನರಲ್ಲಿ ಭಕ್ತಿ-ಭಾವನೆಯ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.ಮಕ್ಕಳಿಗೆ ಖುಷಿಯೋ ಖುಷಿ: ಏಪ್ರಿಲ್ ಹಾಗೂ ಮೇ ತಿಂಗಳಲ್ಲಿಯೇ ಈ ಜಾತ್ರೆಗಳನ್ನು ಹಮ್ಮಿಕೊಂಡಿದ್ದು, ಇಡೀ ವರ್ಷಗಳ ಕಾಲ ಓದು -ಬರಹದಲ್ಲಿ ಮುಳುಗಿದ ಮಕ್ಕಳಂತೂ ಜಾತ್ರೆಯ ವಿಶೇಷತೆ ಅನುಭವಿಸುತ್ತಿವೆ. ಜಾತ್ರೆ ಅಂಗವಾಗಿ ಊರಿನ ಹೊರಗಿನ ಬಯಲಿನಲ್ಲಿ ಎಲ್ಲ ತರಹದ ಆಟಗಳು ಬಂದಿದ್ದು, ಮಕ್ಕಳು- ಮಹಿಳೆಯರು ಸಂಭ್ರಮಿಸುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುತ್ತಿರುವ ಹೊನ್ನಾಟವಂತೂ ಗ್ರಾಮದ ಯುವಕರನ್ನು ಬಡಿದೆಬ್ಬಿಸಿದೆ. ಗ್ರಾಮದ ಪ್ರತಿ ಓಣಿಗಳಲ್ಲಿ ದೇವಿ ಹೊತ್ತು ಹೋಗುವ ಯುವಕರು ಲಾರಿಗಟ್ಟಲೇ ಭಂಡಾರ ತೂರಾಡುತ್ತಿರುವ ದೃಶ್ಯ ಕಣ್ಣು ತುಂಬುತ್ತಿದೆ.
ಇಂದು ಕಡುಬಿನ ಕಾಳಗ: ನಮ್ಮೂರು ಬೆನಕಟ್ಟಿ. 30 ವರ್ಷಗಳ ನಂತರ ಗ್ರಾಮದೇವಿಯರ ಜಾತ್ರೆ ನಡೆಯುತ್ತಿದ್ದು, ನೂತನ ದೇವಸ್ಥಾನ ನಿರ್ಮಿಸಲಾಗಿದೆ. ನಮ್ಮೂರು ತುಂಬ ಚಿಕ್ಕದು. ಹೀಗಾಗಿ ಈ ಹಿಂದೆ ರಥೋತ್ಸವ ಮಾಡಿರಲಿಲ್ಲ. ಈ ಬಾರಿ ಉತ್ಸಾಹದಿಂದ ರಥೋತ್ಸವ ಮಾಡಿದ್ದು ಗ್ರಾಮದ ಜನತೆಗೆ ತುಂಬ ಸಂತಸವಾಗಿದ್ದಾರೆ. ಮೇ 1 ರಿಂದ ಅದ್ಧೂರಿಯಾಗಿ ಜಾತ್ರೆ ನಡೆದಿದ್ದು, ಸೋಮವಾರ ರಾತ್ರಿ ಸೀಮೆಗೆ ಹೋಗಲಿದ್ದು ಮಂಗಳವಾರ ಕೊನೆ ದಿನ ಕಡುಬಿನ ಕಾಳಗ ನಡೆಯಲಿದೆ ಎಂದು ಗ್ರಾಮದ ಮುಖಂಡ ಅಜ್ಯಯ್ಯ ಬೆಳ್ಳಕ್ಕಿಮಠ ಜಾತ್ರೆ ಕುರಿತು ಮಾಹಿತಿ ನೀಡಿದರು.
ಮೋಜು- ಮಸ್ತಿಯಲ್ಲ: ಜಾತ್ರೆ ಎಂದಾಕ್ಷಣ ಮೋಜು- ಮಸ್ತಿಯಲ್ಲ. ಅದೊಂದು ಧಾರ್ಮಿಕತೆಯ ಪ್ರಮುಖ ಭಾಗ. ಅದರಲ್ಲೂ ಗ್ರಾಮದೇವತೆಯರ ಜಾತ್ರೆ ಸಂದರ್ಭದಲ್ಲಿ ಮಡಿವಂತಿಕೆ ತುಂಬಾ ಬೇಕು. ನಾನು ನೋಡಿದ ಹಾಗೆ ಈ ವರ್ಷ ಧಾರವಾಡ ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ಅರ್ಥಪೂರ್ಣವಾಗಿ ಜಾತ್ರೆ ಮಾಡುತ್ತಿದ್ದು, ಅದರಲ್ಲೂ ಯಾದವಾಡ ಜಾತ್ರೆ ಖುಷಿ ನೀಡಿದೆ ಎಂದು ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.