ಕನ್ನಡಪ್ರಭ ವಾರ್ತೆ, ಶಿಕಾರಿಪುರ
ದೇಶಾದ್ಯಂತ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠಾಪನೆ ಸಡಗರ ಸಂಭ್ರಮ. ಇತ್ತ ತಾಲೂಕಿನ ಈಸೂರಿನಲ್ಲಿ 20 ವರ್ಷಗಳ ಹಿಂದೆಯೇ ಶ್ರೀರಾಮ ಮಂದಿರವನ್ನು ಮನೆಯ ಬಾಗಿಲಿನಲ್ಲಿ ಅಂದವಾಗಿ ಕೆತ್ತಿಸಿ, ಭಕ್ತಿಯಿಂದ ನಿತ್ಯ ಪೂಜಿಸಿ ಸಂಭ್ರಮಿಸುತ್ತಿದ್ದರುವ ಸಂಗತಿಯೊಂದು ಬೆಳಕಿಗೆ ಬಂದಿದೆ.ಈಸೂರು ಗ್ರಾಮಸ್ಥ ಮಹಾದೇವಪ್ಪ ಅನಕ್ಷರಸ್ಥ. ಆದರೂ, ರಾತ್ರಿ ಶಾಲೆಗೆ ತೆರಳುತ್ತಿದ್ದಾರೆ. ಇವರು ಅಪಾರ ದೈವಭಕ್ತರಾಗಿದ್ದು, ಶ್ರೀ ರಾಮಚಂದ್ರನ ಪರಮಭಕ್ತರು ಕೂಡ. ಇದಕ್ಕೆ ಸಾಕ್ಷಿಯೆಂದರೆ, ಅವರ ಮನೆ ಬಾಗಿಲಲ್ಲಿ ಕೆತ್ತನೆ ಕಂಡಿರುವ ಅಯೋಧ್ಯೆ ಶ್ರೀರಾಮ ಮಂದಿರ.
ಮಹಾದೇವಪ್ಪ ಶಾಲೆಗೆ ತೆರಳುತ್ತಿದ್ದ ವೇಳೆ ಅಯೋಧ್ಯೆಗೂ ತೆರಳಿ ರಾಮಮಂದಿರ ಕಣ್ಣಾರೆ ಕಾಣುವ ಅಪಾರ ಹಂಬಲ ಹೊಂದಿದ್ದರು. ಆದರೆ, ಈ ಅವಕಾಶ ದೊರೆಯುತ್ತಿರಲಿಲ್ಲ. ನಿತ್ಯ ರಾಮಾಯಣ, ಮಹಾಭಾರತ, ಪುರಾಣ ಪಠಿಸಿ ಭಜನೆ ಮತ್ತಿತರ ಧಾರ್ಮಿಕ ಕಾರ್ಯದಲ್ಲಿ ತೊಡಗುತ್ತಿದ್ದರು. ಮಹಾದೇವಪ್ಪ ಅವರ ಸ್ವಪ್ನದಲ್ಲಿ ಭಗವಂತ ಶ್ರೀ ರಾಮನು ಆಗಾಗ ಕಾಣಿಸಿಕೊಳ್ಳುತ್ತಿದ್ದನಂತೆ. ಇದರಿಂದ ಅಯೋಧ್ಯೆ ರಾಮಮಂದಿರದ ಮಾದರಿಯನ್ನು ಪರಿಚಯಸ್ಥರ ಬಳಿ, ತರಿಸಿಕೊಂಡು, ಅದೇ ಮಾದರಿಯಲ್ಲಿಯೇ ಮನೆ ಒಳಬಾಗಿಲಿಗೆ 2004 ರಲ್ಲಿಯೇ ಕೆತ್ತಿನೆ ಮಾಡಿಸಿ, ತಮ್ಮ ಭಕ್ತಿ ಮೆರೆದಿದ್ದಾರೆ.ಅಂದಾಜು 60-65 ವರ್ಷಗಳ ಹಿಂದೆ ಗ್ರಾಮದ ಮಾಯತಮ್ಮನ ಬೀದಿಯಲ್ಲಿ ನಿರ್ಮಾಣವಾದ ಈ ಮನೆಗೆ 20 ವರ್ಷದ ಹಿಂದೆ ಅಯೋಧ್ಯೆ ರಾಮಮಂದಿರದ ಮಾದರಿಯಲ್ಲಿ ಬಾಗಿಲು ಕೆತ್ತಿಸಿರುವುದು ವಿಶೇಷ. ಈ ಬಾಗಿಲಿಗೆ ಇಡೀ ಕುಟುಂಬ ನಿತ್ಯ ಪೂಜಿಸುತ್ತಿದೆ. ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣೆ, ಉದ್ಘಾಟನೆ ಹವಾ ಎದ್ದಿದೆ. ಇಂಥ ಸಂದರ್ಭದಲ್ಲಿ ದೇಗುಲ ರೀತಿಯಲ್ಲಿ ಹಲವಾರು ವರ್ಷಗಳ ಹಿಂದೆ ಬಾಗಿಲು ಕೆತ್ತಿನೆ ಮಾಡಿಸಿರುವ ವಿಷಯ ಗ್ರಾಮಸ್ಥರು ಅರಿತು ಬೆರಗುಗೊಂಡಿದ್ದಾರೆ. ಭಕ್ತಿಯ ಪರಾಕಾಷ್ಟೆ ಎಂಬಂತೆ ಅಕ್ಕಪಕ್ಕದ ಗ್ರಾಮದ ಜನತೆ ಮಹಾದೇವಪ್ಪ ಅವರ ಮನೆಗೆ ಭೇಟಿ ನೀಡಿ, ವೀಕ್ಷಿಸಿ, ಬಾಗಿಲಿಗೆ ಪೂಜೆ ಸಲ್ಲಿಸಿ, ಗೌರವ ಸಮರ್ಪಿಸುತ್ತಿದ್ದಾರೆ.
ಯಡಿಯೂರಪ್ಪ ವಿಸ್ಮಯ:18 ವರ್ಷದ ಹಿಂದೆ ಆಕಸ್ಮಿಕವಾಗಿ ಚುನಾವಣೆ ಸಂದರ್ಭ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗ್ರಾಮಕ್ಕೆ ಮತಯಾಚನೆಗೆಂದು ಈ ಮನೆಗೆ ಆಗಮಿಸಿದ್ದರು. ಅವರು ಅಯೋಧ್ಯೆ ಮಂದಿರ ಮಾದರಿಯ ಬಾಗಿಲನ್ನು ಕಂಡು ಆಶ್ಚರ್ಯ ಚಕಿತರಾಗಿದ್ದರು. ಅಲ್ಲದೇ, ಮಹಾದೇವಪ್ಪನವರ ಬಳಿ ಈ ಬಾಗಿಲನ್ನು ನೀಡುವಂತೆ ಕೇಳಿದ್ದರು ಎಂಬುದನ್ನು ಪತ್ನಿ ಸಾವಿತ್ರಮ್ಮ ಜ್ಞಾಪಿಸಿಕೊಳ್ಳುತ್ತಾರೆ.
2014 ವಿಧಿವಶರಾದ ಪತಿ ಮಹಾದೇವಪ್ಪ ಇಂದು ಬದುಕಿದ್ದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದಿಂದ ಹೆಚ್ಚು ಖುಷಿಪಡುತ್ತಿದ್ದರು. ಅವರ ಮನೆಯ ಈ ಬಾಗಿಲು ವೀಕ್ಷಿಸಲು ಹಲವು ವರ್ಷದಿಂದ ಜನತೆ ಹೆಚ್ಚು ಉತ್ಸುಕರಾಗಿ ಆಗಮಿಸುತ್ತಿದ್ದಾರೆ. ಇತ್ತೀಚಿನ ದಿನದಲ್ಲಿ ಈ ರಾಮಭಕ್ತರ ಸಂಖ್ಯೆ ವಿಪರೀತವಾಗಿದೆ ಎನ್ನುತ್ತಾರೆ ಸಾವಿತ್ರಮ್ಮ ಮಹಾದೇವಪ್ಪ ಅವರು.ಸಾವಿತ್ರಮ್ಮ ಅವರ ಹಿರಿಯ ಮಗ ಕುಂಸಿಯಲ್ಲಿ ಪಶು ವೈದ್ಯಾಧಿಕಾರಿ. ಕಿರಿಯ ಮಗ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಇಬ್ಬರು ಪುತ್ರಿಯರು ವಿವಾಹವಾಗಿ ಪರಸ್ಥಳದಲ್ಲಿದ್ದಾರೆ. ಮಹಾದೇಪ್ಪ ಅವರ ಕುಟುಂಬದ ರಾಮಪ್ರೀತಿಗೆ ಇಡೀ ಗ್ರಾಮಸ್ಥರು ಖುಷಿಯಾಗಿರುವುದು ವಿಶೇಷ.
- - - -20ಕೆಎಸ್.ಕೆ.ಪಿ4:ಈಸೂರಿನ ದಿ.ಮಹಾದೇವಪ್ಪ ಸಾವಿತ್ರಮ್ಮ ದಂಪತಿ ಮನೆಯಲ್ಲಿ 20 ವರ್ಷಗಳ ಹಿಂದೆಯೇ ಕೆತ್ತಿಸಲಾದ ಶ್ರೀ ರಾಮಮಂದಿರ ಮಾದರಿ ಬಾಗಿಲು.
-ಈ ಬಾಗಿಲು ವೀಕ್ಷಿಸಲು ತಂಡೋಪತಂಡವಾಗಿ ಆಗಮಿಸಿರುವ ಜನತೆ.