ಕನ್ನಡ ಪ್ರಭ ವಾರ್ತೆ ಸವಣೂರು
ಬಣವೆಗೆ ಬಿದ್ದಿದ್ದ ಆಕಸ್ಮಿಕ ಬೆಂಕಿ ನಂದಿಸಲು ಹೋಗಿದ್ದ ರೈತ ಮೃತಪಟ್ಟ ಘಟನೆ ಶಿರಬಡಗಿ ಗ್ರಾಪಂ ವ್ಯಾಪ್ತಿಯ ಸೇವಾಲಾಲಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಗಂಗಪ್ಪ ಮಂಗಲೆಪ್ಪ ಲಮಾಣಿ (74) ಮೃತರು.
ಮಂಗಳವಾರ ಮುಂಜಾನೆ 10ರಿಂದ 10.30ರ ನಡುವಿನ ಅವಧಿಯಲ್ಲಿ ತಮ್ಮ ಮೇವಿನ ಬಣವಿಗೆ ಬೆಂಕಿ ಹತ್ತಿದ್ದು, ಆ ಬೆಂಕಿಯನ್ನು ಆರಿಸಲು ಹೋಗಿ ಮೈಯಲ್ಲ ಸುಟ್ಟುಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಲಕ್ಷಾಂತರ ರೂ. ಮೌಲ್ಯದ ಶೇಂಗಾ ಹೊಟ್ಟಿನ ಬಣವೆ ಮತ್ತು ರೈತ ಗಂಗಪ್ಪ ದೇಹ ಸುಟ್ಟು ಕರಕಲಾಗಿದೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಈ ಕುರಿತು ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಮೂವರ ಸಾವು; ಬಾಲಕಿ ಗಂಭೀರ:ಲಾರಿಯೊಂದು ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಡ-ಹೆಂಡತಿ ಮಗ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಹೃದಯ ವಿದ್ರಾವಕ ಘಟನೆ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಬಳಿಯಿರುವ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಮಂಗಳವಾರ ಸಂಜೆ ನಡೆದಿದೆ.ಘಟನೆಯಲ್ಲಿ ತಾಲೂಕಿನ ಹಳೇ ಶಿಡೇನೂರ ಗ್ರಾಮದ ಆಶೀಫ್ ಉಲ್ಲಾ ಇಮಾಮ್ ಸಾಬ್ ಮಲ್ಲಾಡದ (34), ಆಫ್ರೀನಾಬಾನು ಮಲ್ಲಾಡದ (27), ಪುತ್ರ ಅರ್ಫಾನ ಮಲ್ಲಾಡದ (6) ಸ್ಥಳದಲ್ಲೇ ಮೃತಪಟ್ಟಿದ್ದು, ಪುತ್ರಿ ರುಕ್ಸಾರ ಫಾತಿಮಾ (3) ತೀವ್ರ ಗಾಯಗೊಂಡಿದ್ದು, ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತರು ಶಿಡೇನೂರ ಗ್ರಾಮದವರಾಗಿದ್ದರೂ ಇತ್ತೀಚೆಗೆ ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿ ವಾಸವಾಗಿದ್ದರು. ಸಂಬಂಧಿಕರನ್ನು ಮಾತಾಡಿಸಲೆಂದು ಮಂಗಳವಾರ ಶಿಡೇನೂರ ಗ್ರಾಮಕ್ಕೆ ಬಂದಿದ್ದ ಕುಟುಂಬ ಮರಳಿ ಹಾವೇರಿಗೆ ಹೋಗುವಾಗ ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಸಂಭವಿಸಿದೆ. ವೇಗದ ರಭಸಕ್ಕೆ ಮೃತದೇಹಗಳು ಛಿದ್ರಗೊಂಡಿವೆ.ಅಪಘಾತಕ್ಕೀಡಾದ ಲಾರಿಯು ಬೆಂಗಳೂರಿನ ರಹಮತ್ ಉಲ್ಲಾ ಬೇಗ್ ಎಂಬುವರಿಗೆ ಸೇರಿದ್ದು, ಘಟನೆ ಬಳಿಕ ತಲೆಮರಿಸಿಕೊಂಡಿದ್ದ ಚಾಲಕ ಧೀರೇಂದ್ರ ಯಾದವನನ್ನು ಬ್ಯಾಡಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಈ ಕುರಿತು ಬ್ಯಾಡಗಿ ಫೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.