ಎಲೆ ಬಳ್ಳಿಯಿಂದ ಬದುಕು ಕಟ್ಟಿಕೊಂಡ ರೈತ: ಕೈಹಿಡಿದ ನರೇಗಾ

KannadaprabhaNewsNetwork | Published : Aug 18, 2024 1:52 AM

ಸಾರಾಂಶ

ಭೂಮಿ ತನ್ನನ್ನು ನಂಬಿದವರನ್ನು ಅದು ಎಂದಿಗೂ ಕೈಬಿಡುವುದಿಲ್ಲ ಎಂಬುದಕ್ಕೆ ತಾಲೂಕಿನ ಹನುಮಾಪುರ ಗ್ರಾಮದ ರೈತ ನಾಗಪ್ಪ ಮಾದರ ಸಾಕ್ಷಿಯಾಗಿದ್ದಾರೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ಭೂಮಿ ತನ್ನನ್ನು ನಂಬಿದವರನ್ನು ಅದು ಎಂದಿಗೂ ಕೈಬಿಡುವುದಿಲ್ಲ ಎಂಬುದಕ್ಕೆ ತಾಲೂಕಿನ ಹನುಮಾಪುರ ಗ್ರಾಮದ ರೈತ ನಾಗಪ್ಪ ಮಾದರ ಸಾಕ್ಷಿಯಾಗಿದ್ದಾರೆ. ನಾಗಪ್ಪ ತಮಗಿರುವ ಒಂದು ಎಕರೆ ಭೂಮಿಯಲ್ಲಿಯೇ ಕಷ್ಟಪಟ್ಟು ಆದಾಯ ಗಳಿಸುವ ಚಿಂತನೆ ಹೊಂದಿದ್ದರು. ಈ ಹಿಂದೆ ಇವರು ಹತ್ತಿ ಅಥವಾ ಮೆಕ್ಕೆಜೋಳ ಬೆಳೆಯುತ್ತಿದ್ದರು. ಇದರಿಂದ ಎಲ್ಲಾ ಖರ್ಚು ವೆಚ್ಚ ತೆಗೆದು ವರ್ಷಕ್ಕೆ 30ರಿಂದ 40 ಸಾವಿರ ಆದಾಯ ಗಳಿಸಲು ಸಾಧ್ಯವಾಗುತ್ತಿತ್ತು.

ಆಗ ಪರ್ಯಾಯ ಬೆಳೆಯ ಬಗ್ಗೆ ಚಿಂತನೆ ಮಾಡಿದ ಇವರು ಗ್ರಾಮಪಂಚಾಯತಿ ಹಾಗೂ ತೋಟಗಾರಿಕೆ ಇಲಾಖೆ ಮಾರ್ಗದರ್ಶನದಲ್ಲಿ ಎಲೆ ಬಳ್ಳಿ ತೋಟ ಮಾಡಲು ನಿರ್ಧರಿಸಿದರು. ಅದಕ್ಕಾಗಿ ಭೂಮಿಯನ್ನು ಹದಗೊಳಿಸಿ 4*4 ಸಾಲುಗಳ ಅಂತರದಲ್ಲಿ 320 ಮಡಿಗಳನ್ನು ಮಾಡಿ ಒಟ್ಟು 1280 ಎಲೆ ಬಳ್ಳಿ ಗುಂಡಿಗಳನ್ನು ಮಾಡಿದರು. ಅದರಲ್ಲಿ ಸ್ಥಳೀಯ ಎಲೆ ಬಳ್ಳಿಗಳನ್ನು ತಂದು ನಾಟಿ ಮಾಡಿದರು. ಎಲೆ ಬೆಳೆಯಲು ಆಸರೆಯಾಗಿ ನುಗ್ಗೆ, ಚೊಗಚೆ, ಬೋರಲ ಗಿಡಗಳನ್ನು ಬೆಳೆಸಿದರು. ಇದಕ್ಕೆ ಪ್ರಾರಂಭಿಕವಾಗಿ ಸುಮಾರು 70ರಿಂದ 80 ಸಾವಿರ ಖರ್ಚಾಗಿದ್ದು ನರೇಗಾದಿಂದ ಸುಮಾರು 45,000 ಸಾವಿರ ಅನುದಾನ ದೊರೆತಿದೆ. ಎಲೆ ಬಳ್ಳಿ ತೋಟ ಮಾಡಿದ ನಂತರ ತಿಂಗಳಿಗೆ 40ರಿಂದ 50 ಸಾವಿರ ಆದಾಯ ಗಳಿಸುತ್ತಿದ್ದಾರೆ. ಜಾನುವಾರು ಸಾಕಾಣಿಕೆ: ಇವರು ಕೃಷಿಯೊಂದಿಗೆ ಉಪ ಕಸುಬು ಆಗಿ ಮನೆಯಲ್ಲಿ ಎರಡು ಎಮ್ಮೆಗಳನ್ನು ಸಾಕಿದ್ದಾರೆ. ಎಲೆ ಬಳ್ಳಿ ತೋಟದಲ್ಲಿ ದೊರೆಯುವ ನುಗ್ಗೆ ಸೊಪ್ಪು ಚೊಗಚಿ, ಬೋರಲ ಹಸಿ ಮೇವನ್ನು ಜಾನುವಾರುಗಳಿಗೆ ಆಹಾರವಾಗಿ ಬಳಸುತ್ತಿದ್ದಾರೆ. ಇದರಿಂದ ಹಾಲಿನ ಉತ್ಪಾದನೆ ಕೂಡ ಹೆಚ್ಚಾಗಿದೆ. ಇನ್ನು ಜಾನುವಾರುಗಳ ಸಗಣಿಯನ್ನು ತೋಟಕ್ಕೆ ಗೊಬ್ಬರವಾಗಿ ಬಳಕೆ ಮಾಡುತ್ತಿದ್ದಾರೆ. ಒಟ್ಟಾರೆ ಇವರ ಸಾಧನೆ ಇತರ ರೈತರಿಗೆ ಮಾದರಿಯಾಗಿದೆ. ಮನೆಯವರೇ ಹೊಲದಲ್ಲಿ ಕೆಲಸ ಮಾಡಿದ್ದರಿಂದ ಕೃಷಿ ಖರ್ಚು ಕಡಿಮೆಯಾಗಿದೆ. ಸಾವಯವ ಕೃಷಿ ಪದ್ಧತಿ ಅನುಸರಿಸಿದ್ದರಿಂದ ಉತ್ತಮ ಇಳುವರಿ ದೊರಕಿದೆ. ಕೃಷಿಯಲ್ಲಿ ಪ್ರಗತಿ ಸಾಧಿಸಲು ನರೇಗಾ ಯೋಜನೆ ಸಹಾಯ ಮಾಡಿದೆ ಎನ್ನುತ್ತಾರೆ ರೈತ ನಾಗಪ್ಪ ಮಾದರ.

Share this article