ಶಿವಾನಂದ ಅಂಗಡಿ
ಮುಂಗಾರಿನ ಮೊದಲ ಸುಗ್ಗಿ ಹೆಸರು ಕಾಳು ಹಂಗಾಮು ಎಲ್ಲೆಡೆ ಆರಂಭವಾಗಿದ್ದು, ಹುಬ್ಬಳ್ಳಿ-ಗದಗ ಚತುಷ್ಟಥ ರಾಷ್ಟ್ರೀಯ ಹೆದ್ದಾರಿ-67 ಈಗ ಒಕ್ಕಲು ಕಣವಾಗಿ ಮಾರ್ಪಟ್ಟಿದೆ.
ಹೌದು, ಶಿರಗುಪ್ಪಿ, ನಲವಡಿ, ಭದ್ರಾಪುರ, ಅಣ್ಣಿಗೇರಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಗುಂಟ ಹೊರಟರೆ ಸಾಕು, ಅಲ್ಲಲ್ಲಿ ಗ್ರಾಮಸ್ಥರು ಹೆಸರು ಕಾಳು ರಾಶಿ ಹಾಕಿರುವುದು ಕಂಡು ಬರುತ್ತದೆ.ಹೆದ್ದಾರಿಯ ಸರ್ವೀಸ್ ರಸ್ತೆ, ಹೆದ್ದಾರಿ ಪಕ್ಕದ ಜಾಗ ಸೇರಿದಂತೆ ವಿಶಾಲವಾದ ಜಾಗವಿರುವ ಕಡೆ ಒಕ್ಕಲಿ ಮಾಡುತ್ತಿದ್ದಾರೆ. ಮೊದಲೆಲ್ಲಾ ಒಕ್ಕಲು ಕಣಗಳು ಇರುತ್ತಿದ್ದವು. ಈ ಬಾರಿ ಮಳೆಯಿಂದಾಗಿ ಹೊಲದಲ್ಲೂ ಸಹ ನೆಲ ಆರಿಲ್ಲ. ಹೊಲದಲ್ಲಿ ಕಟಾವ್ ಮಿಷನ್‌ಗಳಲ್ಲಿ ಹಾಕಿದ ಮೇಲೆ ಹೊರತಂದ ಹೆಸರುಕಾಳುಗಳನ್ನು ಜಾಗೆಯ ಅಭಾವದಿಂದಾಗಿ ಹೆದ್ದಾರಿಯಲ್ಲೆ ಸ್ವಚ್ಛಗೊಳಿಸುತ್ತ, ಒಣಗಿಸುತ್ತಿದ್ದೇವೆ. ರಸ್ತೆ ಇದ್ದರೆ ಮಳೆ ಬಂದರೂ ಹೆಸರು ಸಂರಕ್ಷಣೆಗೆ ಅನುಕೂಲ ಎನ್ನುತ್ತಾರೆ ರೈತರು.
ಧಾರವಾಡ ಜಿಲ್ಲೆಯಲ್ಲಿ ಈ ಬಾರಿ 67150 ಹೆಕ್ಟೇರ್ ಗುರಿ ಹೊಂದಲಾಗಿದ್ದು, 94,956 ಹೆಕ್ಟೇರ್ ಕ್ಷೇತ್ರದಲ್ಲಿ ಹೆಸರು ಬಿತ್ತನೆಯಾಗಿದೆ. ಈ ಪೈಕಿ ನವಲಗುಂದ ತಾಲೂಕಿನಲ್ಲಿಯೇ ಅತಿ ಹೆಚ್ಚು 38 ಸಾವಿರ ಹೆಕ್ಟೇರ್ ಹೆಸರು ಬಿತ್ತನೆಯಾಗಿದೆ. ಅಣ್ಣಿಗೇರಿ ತಾಲೂಕಿನಲ್ಲಿ 19 ಸಾವಿರ, ಕುಂದಗೋಳ ತಾಲೂಕಲ್ಲಿ 13,856 ಹೆಕ್ಟೇರ್, ಹುಬ್ಬಳ್ಳಿ ತಾಲೂಕಿನಲ್ಲಿ 12600, ಧಾರವಾಡ ತಾಲೂಕಿನಲ್ಲಿ 10,780 ಹೆಕ್ಟೇರ್ ಹೆಸರು ಬಿತ್ತನೆಯಾಗಿದೆ.
ಎಪಿಎಂಸಿಗೆ ಹೆಸರು ಆವಕ
ಅಣ್ಣಿಗೇರಿ ಸೇರಿದಂತೆ ನವಲಗುಂದ ತಾಲೂಕಿನಲ್ಲಿ ಖರೀದಿದಾರರು ಸ್ಥಳದಲ್ಲಿಯೇ ಹೆಸರು ಖರೀದಿ ಮಾಡುತ್ತಿದ್ದು, ಕ್ವಿಂಟಲ್‌ಗೆ ₹ 6000ದಿಂದ ₹ 6500ರ ವರೆಗೆ ಹೆಸರು ಮಾರಾಟವಾಗುತ್ತಿದೆ.ಈ ಬಾರಿ ಸಕಾಲದಲ್ಲಿ ಹೆಸರು ಕಾಳು ಬಿತ್ತನೆ ಮಾಡಿದ್ದೇವೆ. ಆದರೆ, ನಿರಂತರ ಮಳೆಯಿಂದ ಬೆಳೆಗೆ ರೋಗ ಬಾಧಿಸಿದೆ. ಈ ವೇಳೆ ತೀವ್ರ ಆತಂಕ ಎದುರಾಗಿತ್ತು, ಆದರೂ ಎಕರೆಗೆ ಮೂರರಿಂದ ಐದು ಚೀಲ ಹೆಸರು ಇಳುವರಿ ಬಂದಿದ್ದು, ಸಮಾಧಾನ ತಂದಿದೆ ಎಂದು ಅಣ್ಣಿಗೇರಿ ರೈತ ಮೈಲಾರಪ್ಪ ವಗ್ಗರ ಹೇಳಿದರು.ಕಟಾವ್ ಮಶಿನ್‌ಗಳಿಂದ ಈಗೀಗ ಸುಗ್ಗಿಯು ಬೇಗ ಮುಗಿಯುತ್ತಿದೆ. ಅಣ್ಣಿಗೇರಿಗೆ ನಾವು ಬಂದು15 ದಿನ ಆಯಿತು. ಆಗಲೇ ಸುಗ್ಗಿ ಶೇ. 75ರಷ್ಟು ಮುಕ್ತಾಯವಾಗಿದೆ. ಒಂದು ಹಂತದಲ್ಲಿ ಇಲ್ಲಿ 70ಕ್ಕೂ ಅಧಿಕ ಮಿಷನ್‌ಗಳು ಇದ್ದವು. ಸ್ಪರ್ಧೆಯಿಂದಾಗಿ ಬಾಡಿಗೆ ದರವೂ ಇಳಿಮುಖವಾಗಿದೆ ಎಂದು ಕಟಾವ್ ಮಶಿನ್ ತಂದಿರುವ ಹೊಸಪೇಟೆ ವ್ಯಕ್ತಿ ಜುಬೇರ ಹೇಳಿದರು.