ಸಂಡೂರಿನ ಪರಿಸರ-ಪ್ರಕೃತಿ ಆರಾಧಕರ ನೆಚ್ಚಿನ ತಾಣ

KannadaprabhaNewsNetwork |  
Published : Jun 05, 2025, 01:07 AM IST

ಸಾರಾಂಶ

ಸುತ್ತಲು ಹಸಿರುಟ್ಟ ಗುಡ್ಡಬೆಟ್ಟಗಳು, ಮಳೆ ಹಾಗೂ ಚಳಿಗಾಲದಲ್ಲಿ ಗಿರಿ ಶಿಖರ ಆವರಿಸಿ, ಅವುಗಳನ್ನು ಮುತ್ತಿಕ್ಕುತ್ತಾ ಸಾಗುವ ಮಂಜುತುಂಬಿದ ಮೋಡಗಳು, ಅಲ್ಲಲ್ಲಿ ಕಾಣಸಿಗುವ ಜಲಪಾತಗಳು, ಗುಡ್ಡಬೆಟ್ಟಗಳ ನಡುವೆ ಬಳಕುತ್ತಾ ಸಾಗುವ ನಾರಿಹಳ್ಳ ಮುಂತಾದ ಅಂಶಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಸಂಡೂರಿನ ಪರಿಸರ ಮಲೆನಾಡ ಸದೃಶವಾಗಿದೆ.

ಸಂಡೂರಿನ ಹೆಸರನ್ನು ಜೋಡಿಸಿಕೊಂಡಿರುವ ಜನ್‌ಸೆನ್‌ಸಿಯಾ ಸಂಡೂರಿಕಾ ಎಂಬ ಜೀರುಂಡೆ, ಕ್ರೋಟಲೇರಿಯಾ ಸಂಡೂರೆನ್‌ಸಿಸ್ ಎಂಬ ಸಸ್ಯ

ವಿ.ಎಂ. ನಾಗಭೂಷಣ

ಕನ್ನಡಪ್ರಭ ವಾರ್ತೆ ಸಂಡೂರು

ಸುತ್ತಲು ಹಸಿರುಟ್ಟ ಗುಡ್ಡಬೆಟ್ಟಗಳು, ಮಳೆ ಹಾಗೂ ಚಳಿಗಾಲದಲ್ಲಿ ಗಿರಿ ಶಿಖರ ಆವರಿಸಿ, ಅವುಗಳನ್ನು ಮುತ್ತಿಕ್ಕುತ್ತಾ ಸಾಗುವ ಮಂಜುತುಂಬಿದ ಮೋಡಗಳು, ಅಲ್ಲಲ್ಲಿ ಕಾಣಸಿಗುವ ಜಲಪಾತಗಳು, ಗುಡ್ಡಬೆಟ್ಟಗಳ ನಡುವೆ ಬಳಕುತ್ತಾ ಸಾಗುವ ನಾರಿಹಳ್ಳ ಮುಂತಾದ ಅಂಶಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಸಂಡೂರಿನ ಪರಿಸರ ಮಲೆನಾಡ ಸದೃಶವಾಗಿದೆ. ೩೫ ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ:

ತಾಲೂಕಿನಲ್ಲಿ ೩೫ ಸಾವಿರ ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶವಿದೆ. ಇವುಗಳನ್ನು ಸ್ವಾಮಿಮಲೈ, ದೋಣಿಮಲೈ, ರಾಮನಮಲೈ ಹಾಗೂ ಈಶಾನ್ಯ ಅರಣ್ಯ ಪ್ರದೇಶಗಳೆಂದು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ದಟ್ಟ ಕಾನನದಿಂದಾಗಿಯೇ ಸಂಡೂರು ತಾಲೂಕನ್ನು ಬಯಲು ಸೀಮೆಯ ಓಯಸಿಸ್, ಬಿಸಿಲ ನಾಡಿನ ಕಾಶ್ಮೀರ, ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕ್ ಮುಂತಾದ ಅಭಿದಾನಗಳಿಂದ ಗುರುತಿಸಲ್ಪಡುತ್ತಿದೆ.ಇಲ್ಲಿನ ಕಾಡಿನಲ್ಲಿ ಚಿರತೆ, ಕರಡಿ, ಚಿಪ್ಪುಹಂದಿ, ಕಾಡುಹಂದಿ, ನರಿ, ಮೊಲ, ಕೊಂಡಗುರಿ, ಮುಳ್ಳುಹಂದಿ, ನವಿಲು ಮುಂತಾದ ಪ್ರಾಣಿ ಪಕ್ಷಿಗಳನ್ನು ಕಾಣಬಹುದಾಗಿದೆ.

ಸಂಡೂರು ಹೆಸರನ್ನು ಜೋಡಿಸಿಕೊಂಡಿರುವ ಸಸ್ಯ ಹಾಗೂ ಜೀರುಂಡೆ:

ಸಂಡೂರಿನ ಕಾಡುಗಳಲ್ಲಿ ಜನ್‌ಸೆನ್‌ಸಿಯಾ ಸಂಡೂರಿಕಾ ಎಂಬ ಜೀರುಂಡೆ ೧೯೮೪ರಲ್ಲಿ ಪತ್ತೆಯಾಗಿತ್ತು. ಇದೀಗ ಈ ಜೀರುಂಡೆಯ ಪತ್ತೆ ಕಾರ್ಯದಲ್ಲಿ ವನ್ಯಜೀವಿ ಸಂಶೋಧಕರು ತೊಡಗಿದ್ದಾರೆ. ಅದೇ ರೀತಿಯಾಗಿ ಸಂಡೂರಿನ ಹೆಸರನ್ನು ಜೋಡಿಸಿಕೊಂಡಿರುವ ಕ್ರೋಟಲೇರಿಯಾ ಸಂಡೂರೆನ್ಸಿನ್ ಎಂಬ ಸಸ್ಯವೂ ತಾಲೂಕಿನ ರಾಮಘಡದ ಅರಣ್ಯದಲ್ಲಿ ಕಾಣಸಿಗುತ್ತದೆ. ಪ್ರೇಕ್ಷಣೀಯ ಸ್ಥಳಗಳು:

ಸಂಡೂರು ತಾಲೂಕಿನಲ್ಲಿಯ ಶ್ರೀಕುಮಾರಸ್ವಾಮಿ, ನವಿಲುಸ್ವಾಮಿ, ಹರಿಶಂಕರ, ನರಸಿಂಹಸ್ವಾಮಿ ಮುಂತಾದ ದೇವಸ್ಥಾನಗಳ ಸುತ್ತಲಿನ ಪರಿಸರ, ಭೀಮತೀರ್ಥ, ಭೈರವತೀರ್ಥ, ಉಬ್ಬಲಗಂಡಿಯ ಶಿಲಾ ಬೆಟ್ಟಗಳು, ಅಲ್ಲಿನ ಜಲಪಾತ, ಸಂಡೂರು ಕೂಡ್ಲಿಗಿ ರಸ್ತೆಯಲ್ಲಿನ ವ್ಯೂ ಪಾಯಿಂಟ್, ನಾರಿಹಳ್ಳ ಜಲಾಶಯ, ರಾಮಘಡದಲ್ಲಿನ ವ್ಯೂ ಪಾಯಿಂಟ್ ಮುಂತಾದವು ನೈಸರ್ಗಿಕವಾಗಿ ರೂಪಗೊಂಡಿರುವ ಪ್ರೇಕ್ಷಣೀಯ ಸ್ಥಳಗಳಾಗಿವೆ.ಸಂಡೂರಿನ ಸುಂದರ ಪರಿಸರದಿಂದಾಗಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ರಾಜ್ಯದ ವಿವಿಧೆಡೆಯಿಂದ ಚಾರಣಿಗರು ಸಂಡೂರಿನತ್ತ ಮುಖ ಮಾಡುತ್ತಾರೆ. ಇಂತಹ ಪರಿಸರವನ್ನು ಸಂರಕ್ಷಿಸಿ, ಅಭಿವೃದ್ಧಿ ಪಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ