- ಸಂವಿಧಾನದ ಮಹತ್ವ, ಮಕ್ಕಳ ಸುರಕ್ಷತಾ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ಕೊಪ್ಪ೧೮ ವರ್ಷದ ಒಳಗಿನ ಮಕ್ಕಳು ಯಾವುದೇ ದೌರ್ಜನ್ಯಕ್ಕೆ ಒಳಗಾಗದೆ ಬದುಕುವಂತಹ ಭಯಮುಕ್ತ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಬೇಕು. ಅಂತಹ ಸಮಾಜದ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.ಕೊಪ್ಪ ಸಂತಜೋಸೆಫರ ಶಾಲೆಯಲ್ಲಿ ಭಾನುವಾರ ಆಯೋಜಿಸಿದ ಸಂವಿಧಾನದ ಮಹತ್ವ ಮತ್ತು ಮಕ್ಕಳ ಸುರಕ್ಷತಾ ಕಾರ್ಯಾಗಾರ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಮಾತನಾಡಿ ೧೮ ವರ್ಷದೊಳಗಿನ ಮಕ್ಕಳು ಯಾವುದೇ ರೀತಿ ಸಂಕಷ್ಟ, ತೊಂದರೆ, ದೈಹಿಕ/ಮಾನಸಿಕ ಶಿಕ್ಷೆ, ಹಿಂಸೆ, ನಿರ್ಲಕ್ಷ್ಯ, ತಾರತಮ್ಯ ಹಾಗೂ ಲೈಂಗಿಕ ಅಧಾರಿತ ಯಾವುದೇ ಶೋಷಣೆಗೆ ಒಳಗಾದಲ್ಲಿ ತಕ್ಷಣ ೧೦೯೮, ಅಥವಾ ೧೧೨ ಚೈಲ್ಡ್ ಲೈನ್‌ಗೆ ಕರೆಮಾಡಬೇಕೆಂದು ಮಾಹಿತಿ ನೀಡಿದ ಅವರು ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಲಿ ಎಂದು ಶುಭ ಹಾರೈಸಿದರು.ಮಕ್ಕಳ ಸುರಕ್ಷತಾ ಸಮಿತಿ ಕಾನೂನು ಸಲಹೆಗಾರ ಸುಧೀರ್ ಕುಮಾರ್ ಮುರೊಳ್ಳಿ ಪ್ರಾಸ್ತಾವಿಕ ಮಾತನಾಡಿ ಕೊಪ್ಪದ ವಸತಿ ಶಾಲೆಯಲ್ಲಿ ಬಾಲಕಿ ಯೋರ್ವಳು ಸಾವಿಗೀಡಾದಾಗ ಮಕ್ಕಳ ದೌರ್ಜನ್ಯ ತಡೆ ಸಮಿತಿ ಪ್ರತಿ ಶಾಲೆಯಲ್ಲೂ ಅನುಷ್ಠಾನ ಗೊಳಿಸಬೇಕೆಂದು ಸರ್ಕಾರದ ಆದೇಶವಿದ್ದರೂ ಆ ಶಾಲೆಯಲ್ಲಿ ಸಮಿತಿ ಅನುಷ್ಠಾನಕ್ಕೆ ಬರದೇ ಇದ್ದುದರಿಂದ ಸಹಜವಾಗಿ ತೊಂದರೆಗಳು ಎದುರಾದವು. ಆ ಸಮಯದಲ್ಲಿ ಅಲ್ಲಿ ನಡೆದ ಪೋಷಕರ ಸಭೆಯಲ್ಲಿ ಇನ್ನು ಮುಂದೆ ನನ್ನ ಕ್ಷೇತ್ರದಲ್ಲಿ ಈ ರೀತಿ ಯಾವುದೇ ಪ್ರಕರಣಗಳು ನಡೆಯಬಾರದೆಂದು ಪಣತೊಟ್ಟ ಶಾಸಕರು ಕಾನೂನಾತ್ಮಕವಾಗಿ ತಮ್ಮ ಕ್ಷೇತ್ರದ ಎಲ್ಲಾ ತಾಲೂಕುಗಳಲ್ಲಿ ಮಕ್ಕಳ ದೌರ್ಜನ್ಯ ತಡೆ ಸಮಿತಿ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನ್ ದಾಸ್ ಅವರಿಂದ ಸಂವಿಧಾನದ ಮಹತ್ವದ ಬಗ್ಗೆ, ಮಕ್ಕಳ ಸುರಕ್ಷತೆ ಬಗ್ಗೆ ಉಪನ್ಯಾಸ ನೀಡಲು ಡಾ.ರಾಘವೇಂದ್ರ ಭಟ್‌ರವರನ್ನು ಆಹ್ವಾನಿಸಿ ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ಮುಂದಾಗಿರುವ ಸಂತ ಜೋಸೆಫರ ಕಾನ್ವೆಂಟ್ ಶಾಲೆ ಹಳೆ ವಿದ್ಯಾರ್ಥಿಗಳ ಸಂಘ, ಶಿಕ್ಷಕ ವೃಂದ, ಮೂರೂ ತಾಲೂಕುಗಳ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸ್ವಾಗತಾರ್ಹ ಎಂದರು. ಕೊಪ್ಪ ಶಿಕ್ಷಣಾಧಿಕಾರಿ ರಾಘವೇಂದ್ರ, ಶೃಂಗೇರಿ ಶಿಕ್ಷಣಾಧಿಕಾರಿ ವರಲಕ್ಷ್ಮಿ, ನ.ರಾ. ಪುರ ಶಿಕ್ಷಣಾಧಿಕಾರಿ ರಮೇಶ್, ಬೆಂಗಳೂರಿನ ಮಕ್ಕಳ ಆಯೋಗದ ಸದಸ್ಯೆ ಮಂಜು, ತಾಪಂ ಕಾರ್ಯನಿರ್ವಹಣಾಧಿಕಾರಿಗಳಾದ ಕೊಪ್ಪದ ನವೀನ್ ಕುಮಾರ್, ಶೃಂಗೇರಿಯ ಸುಧೀರ್, ವಂದನೀಯ ಸಿಸ್ಟೆರ್ ಜಸಿಂತ ಪಿರೇರಾ, ಕಾನ್ವೆಂಟ್ ಶಾಲೆ ಮುಖ್ಯಶಿಕ್ಷಕಿ ಅನಿತಾ ಶಾಂತಿ ಮೆನೇಜಸ್, ಹಳೆ ವಿದ್ಯಾರ್ಥಿ ಸಂಘದ ಹೆಚ್.ಎಲ್. ದೀಪಕ್, ಎಸ್.ಡಿಎಂಸಿ ಅಧ್ಯಕ್ಷ ಹರೀಶ್, ನ.ರಾ. ಪುರ ಪಪಂ ಅಧ್ಯಕ್ಷೆ ಜುಬೇದಾ ಮುಂತಾದವರಿದ್ದರು.