- ಸಿದ್ದರಾಮಯ್ಯ ನಂತರ ಯಾರೆಂಬ ಚಿಂತೆ ಬಿಡಿ: ಶರಣಪ್ಪ ಸಲಹೆ । - ನೀವೂ ನಾಯಕರಾಗಿ ಶೀರ್ಷಿಕೆಯಡಿ ರಾಜಕೀಯ ಚಿಂತನ- ಮಂಥನ ಸಭೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯಕ್ಕೆ 2 ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ನಂತರ ಕುರುಬ ಸಮುದಾಯದಲ್ಲಿ ಎರಡನೇ ಹಂತದ ನಾಯಕರು ಮುಂಚೂಣಿಗೆ ಬರುತ್ತಿಲ್ಲವೆಂಬ ನೋವು, ಬೇಸರ ಕಾಡದಂತೆ ಸಮಾಜದ ಮುಂದಿನ ಪೀಳಿಗೆ ಸಕ್ರಿಯವಾಗಬೇಕು ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಾಲುಮತ ಮಹಾಸಭಾ ಹಮ್ಮಿಕೊಂಡಿದ್ದ ನೀವೂ ನಾಯಕರಾಗಿ ಎಂಬ ರಾಜಕೀಯ ಚಿಂತನ- ಮಂಥನ ಸಭೆಯಲ್ಲಿ ಅವರು ಮಾತನಾಡಿದರು. ಸಿದ್ದರಾಮಯಯ್ಯ ನಂತರ ಇನ್ಯಾರು ಎಂಬ ಚಿಂತೆ ಕೈಬಿಟ್ಟು, ಸಮಾಜ ಸಂಘಟನೆಯಲ್ಲಿ ಕುರುಬ ಬಾಂಧವರು ತೊಡಗಬೇಕು ಎಂದರು.
ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷಾತೀತವಾಗಿ ಕುರುಬ ಸಮಾಜದ ನಾಯಕರನ್ನು ಬೆಂಬಲಿಸುವ ಕೆಲಸವಾಗಬೇಕು. ಸಿದ್ದರಾಮಯ್ಯ 2 ಬಾರಿ ಮುಖ್ಯಮಂತ್ರಿಯಾಗುವ ಮೂಲಕ ಸಮಾಜಕ್ಕೆ ಸಾಕಷ್ಟು ಶಕ್ತಿ, ಉತ್ಸಾಹ ಮೂಡಿಸಿದ್ದಾರೆ. ಅದೇ ರೀತಿ ಸಮಾಜದ ಎರಡನೇ ಹಂತದ ನಾಯಕರು ಸಹ ಸಮಾಜದಲ್ಲಿ ಮುಂದೆ ಬರಬೇಕು ಎಂದರು.
ನಮ್ಮದೇ ಸಮುದಾಯದವು ನಮ್ಮದೇ ಸಮುದಾಯದ ಮುಂದಿನ ಪೀಳಿಗೆಯನ್ನು ಬೆಳೆಸದಿರುವುದೇ ಕುರುಬ ಸಮುದಾಯ ಜನಸಂಖ್ಯೆಯಲ್ಲಿ ಮುಂದಿದ್ದರೂ ರಾಜಕೀಯ, ಸಾಮಾಜಿಕವಾಗಿ ಹೀನಾಯ ಸ್ಥಿತಿಯಲ್ಲಿದೆ. ಬೆಳಗಾವಿ ಭಾಗದಲ್ಲಿ ಕುರುಬ ಸಮುದಾಯವು ಸುಮಾರು 5 ಲಕ್ಷ ಜನಸಂಖ್ಯೆ ಇದ್ದರೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ದಕ್ಕಲಿಲ್ಲ. ಸ್ವಾತಂತ್ರ್ಯ ನಂತರ ಈವರೆಗೆ ಸಮಾಜದ 157 ಜನ ಮಾತ್ರ ಶಾಸಕರಾಗಿದ್ದಾರೆ ಎಂದು ಹೇಳಿದರು.
ಗ್ರಾಪಂ, ತಾಪಂ, ಜಿಪಂ, ಪುರಸಭೆ, ಪಪಂ, ನಗರಸಭೆ, ಮಹಾ ನಗರ ಪಾಲಿಕೆಗಳಿಗೆ ಶೀಘ್ರವೇ ಚುನಾವಣೆ ಸಮೀಪಿಸುತ್ತಿವೆ. ಈ ಹಿನ್ನೆಲೆ ಚುನಾವಣೆ ತಯಾರಿ, ಸೋಷಿಯಲ್ ಮೀಡಿಯಾ, ಎಐ (ಆರ್ಟಿಫಿಷಿಯನ್ ಇಂಟೆಲಿಜೆನ್ಸ್) ಬಳಕೆ, ಕ್ಷೇತ್ರಗಳ ಸಮಸ್ಯೆ, ಮತದಾರರನ್ನು ತಲುಪುವ ವಿಚಾರಗಳ ಬಗ್ಗೆ, ವಿವಿಧ ಪಕ್ಷಗಳ ಸ್ಪರ್ಧಾಕಾಂಕ್ಷಿಗಳಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಿದೆ. ಎಲ್ಲ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ವಿವರ ಕ್ರೋಢೀಕರಿಸಿ, ಕುರುಬ ಸಮಾಜದವರಿಗೆ ಟಿಕೆಟ್ ನೀಡುವಂತೆ ಆಯಾ ಪಕ್ಷದ ರಾಜ್ಯಾಧ್ಯಕ್ಷರಿಗೆ ಮಹಾಸಭಾದಿಂದ ಒತ್ತಾಯಿಸಲಾಗುವುದು ಎಂದು ರಾಜು ಮೌರ್ಯ ವಿವರಿಸಿದರು.
- - -
ದಾವಣಗೆರೆಯಲ್ಲಿ ಭಾನುವಾರ ಹಾಲುಮತ ಮಹಾಸಭಾದಿಂದ ನೀವೂ ನಾಯಕರಾಗಿ ಶೀರ್ಷಿಕೆಯಡಿ ರಾಜಕೀಯ ಚಿಂತನ- ಮಂಥನ ಸಭೆ ನಡೆಯಿತು.