27ರಂದು ಎಂಎಲ್‌ಸಿ ರುದ್ರೇಗೌಡರಿಗೆ ಅಭಿನಂದನಾ ಕಾರ್ಯಕ್ರಮ

KannadaprabhaNewsNetwork |  
Published : Jan 09, 2024, 02:00 AM IST
ಪೊಟೋ: 08ಎಸ್‌ಎಂಜಿಕೆಪಿ01ಶಿವಮೊಗ್ಗದ ಮಥುರಾ ಪ್ಯಾರಡೇಸ್‌ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್‌.ರುದ್ರೇಗೌಡರ ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯ ಹೆಸರಾಂತ ಉದ್ಯಮಿ, ವಿಧಾನಪರಿಷತ್ತು ಸದಸ್ಯ ಎಸ್‌. ರುದ್ರೇಗೌಡ ಅವರ ಸಾಧನೆ, ಸೇವೆ ಜನತೆ ಅರಿಯುವಂಥ ಅವಕಾಶಕ್ಕೆ ಕಾಲಕೂಡಿಬಂದಿದೆ. ರುದ್ರೇಗೌಡರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜ.27ರಂದು ಅಮೃತಮಯಿ ಶೀರ್ಷಿಕೆಯಡಿ ಅದ್ಧೂರಿ ಅಭಿನಂದನಾ ಕಾರ್ಯಕ್ರಮ, ಎಸ್‌.ರುದ್ರೇಗೌಡ- ದಿ ಐರನ್‌ ಮ್ಯಾನ್‌ ಕೃತಿ ಬಿಡುಗಡೆಗೊಳ್ಳಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಡಿ.ಜಿ.ಬೆನಕಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

- "ದಿ ಐರನ್‌ ಮ್ಯಾನ್‌ " ಪುಸ್ತಕ ಬಿಡುಗಡೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರಿಂದ ಉದ್ಘಾಟನೆ - ಸುಪ್ರೀಂಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್‌ ವಿ. ಪಾಟೀಲ್‌ ಉಪಸ್ಥಿತಿ - ವಿಪ ಸಭಾಪತಿ ಬಸವರಾಜ್‌ ಹೊರಟ್ಟಿ ಅವರಿಂದ ಕೃತಿ ಬಿಡುಗಡೆ - ಗೌಡರ ಕುರಿತು ವಿಪ ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌ರಿಂದ ಅಭಿನಂದನಾ ನುಡಿ - - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ವಿಧಾನ ಪರಿಷತ್ತು ಸದಸ್ಯ ಎಸ್‌.ರುದ್ರೇಗೌಡರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜ.27ರಂದು ಅಮೃತಮಯಿ ಶೀರ್ಷಿಕೆಯಡಿ ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಶನ್‌ ಹಾಲ್‌ನಲ್ಲಿ ಅದ್ಧೂರಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಡಿ.ಜಿ. ಬೆನಕಪ್ಪ ಹೇಳಿದರು.

ಸೋಮವಾರ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿ, ಅಂದು ಸಂಜೆ 5.30ಕ್ಕೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್‌ ವಿ. ಪಾಟೀಲ್‌ ಉಪಸ್ಥಿತರಿರುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಗೌಡರ ಬದುಕು-ಸಾಧನೆ ಕುರಿತ "ಎಸ್‌. ರುದ್ರೇಗೌಡ-ದಿ ಐರನ್‌ ಮ್ಯಾನ್‌ " ಪುಸ್ತಕವನ್ನು ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಅವರು ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ತು ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌ ಅವರು ಗೌಡರ ಕುರಿತು ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದು ತಿಳಿಸಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ ಮಾತನಾಡಿ, ಅಭಿನಂದನಾ ಸಮಿತಿಯನ್ನು ರಚಿಸಲಾಗಿದ್ದು, ಸಂಸದ ಬಿ.ವೈ.ರಾಘವೇಂದ್ರ ಅವರು ಗೌರವಾಧ್ಯಕ್ಷರಾಗಿದ್ದಾರೆ ಎಂದರು.

ವಿವಿಧ ಗೋಷ್ಠಿ-ಗಣ್ಯರು:

ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕವಾಗಿಯೂ ರುದ್ರೇಗೌಡ ಅವರ ಕೊಡುಗೆ ದೊಡ್ಡದು. ಪರಿಸರಪ್ರಜ್ಞೆಯೇ ಸಮಾಜಸೇವೆ ಕುರಿತ ಮೊದಲ ಗೋಷ್ಠಿಯಲ್ಲಿ ತೇಜಸ್ವಿನಿ ಅನಂತಕುಮಾರ್‌ ಮಾತನಾಡುವರು, ಮೌಲ್ಯಾಧಾರಿತ ರಾಜಕಾರಣ ಕುರಿತ ಎರಡನೇ ಗೋಷ್ಠಿಯಯಲ್ಲಿ ಕಾರ್ಕಳ ಶಾಸಕ ಸುನೀಲ್‌ಕುಮಾರ್‌ ಮಾತನಾಡುವರು, ಸಾಧನೆಗೊಂದು ಗುರಿ ಮೂರನೇ ಗೋಷ್ಠಿಯಲ್ಲಿ ಕಿರ್ಲೋಸ್ಕರ್‌ ಕಂಪನಿಯ ಇಂಡಿಪೆಂಡೆಂಟ್‌ ಡೈರೆಕ್ಟರ್‌ ಬಿ.ಎಸ್‌. ಗೋವಿಂದ್‌ ಮಾತನಾಡುವರು. ಈ ಗೋಷ್ಠಿಗಳ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ನಾಡೋಜ ಷಡಕ್ಷರಿ ಅವರು ನೆರವೇರಿಸಲಿದ್ದಾರೆ ಎಂದರು.

ಸಂವಾದ ಕಾರ್ಯಕ್ರಮ:

3ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಕ್ಷೇತ್ರಗಳ ಆಯ್ದ ಯುವಕರೊಂದಿಗೆ ರುದ್ರೇಗೌಡರ ಬದುಕು-ಸಾಧನೆ ಕುರಿತು “ಅಂತರಂಗ-ಬಹಿರಂಗ” ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅವರ ಬೆಳವಣಿಗೆ, ಕಷ್ಟಗಳನ್ನು ಅವಕಾಶಗಳನ್ನಾಗಿಸಿಕೊಂಡು ಸಾಧಿಸಿದ ರೀತಿ, ಉದ್ಯಮಗಳನ್ನು ಕಟ್ಟಿದ ಶ್ರಮ, ಎಲ್ಲರನ್ನೂ ಜೊತೆಯಾಗಿ ಬೆಳೆಸಿದ ಪರಿ, ಈ ಎಲ್ಲ ವಿಚಾರಗಳನ್ನೂ ಅವರೊಂದಿಗಿನ ಆತ್ಮೀಯ ಸಂವಾದದಲ್ಲಿ ಪುತ್ರಿ ಚೈತ್ರ ಅರುಣ್‌ ನಿರ್ವಹಿಸಲಿದ್ದಾರೆ ಎಂದರು.

ಮಲೆನಾಡಿನ ಹೆಸರಾಂತ ಕೈಗಾರಿಕೋದ್ಯಮಿ ಮತ್ತು ವಿಧಾನ ಪರಿಷತ್ತು ಸದಸ್ಯರೂ ಆಗಿರುವ ಎಸ್‌.ರುದ್ರೇಗೌಡ ಅವರು ಚನ್ನಗಿರಿ ತಾಲೂಕಿನ ಪುಟ್ಟ ಗ್ರಾಮ ಲಿಂಗದಹಳ್ಳಿಯ ಸಾಮಾನ್ಯ ರೈತ ಕುಟುಂಬದಿಂದ ಬಂದು ಅತ್ಯುನ್ನತ ಸಾಧನೆಗೈದವರು. ರುದ್ರೇಗೌಡರ ವ್ಯಕ್ತಿತ್ವದ ಭಾಗವಾದ ರಾಜಕಾರಣ, ಸಮಾಜ ಸೇವೆ, ಕೈಗಾರಿಕೆಗಳ ವಿಸ್ತೃತ ಚರ್ಚೆಯನ್ನು ಯುವ ಪೀಳಿಗೆಗೆ ದಾಟಿಸಲು “ಶ್ರಮದಿಂದ ಸಾರ್ಥಕತೆಯೆಡೆಗೆ” ಎನ್ನುವ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಮೂವರು ಸ್ಫೂರ್ತಿದಾಯಕ ಸಾಧಕರಿಂದ ಯುವಕರಿಗೆ ಮಾರ್ಗದರ್ಶನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಯುವಕ ಯುವತಿಯರು, ಯುವ ಉದ್ಯಮಿಗಳು, ಸಮಾಜ ಸೇವೆಯಲ್ಲಿ ತೊಡಗಿರುವವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದರು.

ಅಭಿನಂದನಾ ಸಮಿತಿ ಪ್ರಮುಖರಾದ ಆರ್‌.ಕೆ.ಸಿದ್ರಾಮಣ್ಣ ಮಾತನಾಡಿ, ಶಿವಮೊಗ್ಗದ ಮೌಲ್ಯಾಧಾರಿತ ರಾಜಕಾರಣಿ ಹಾಗೂ ಕೈಗಾರಿಕಾ ಕ್ಷೇತ್ರದ ಬಹುದೊಡ್ಡ ಸಾಧಕರು ರುದ್ರೇಗೌಡರು. ಸರಳ, ಸಜ್ಜನರು ಹಾಗೂ ಕೊಡುಗೈ ದಾನಿಯೂ ಆಗಿರುವ ಅವರು ನಿಸ್ವಾರ್ಥ ಸೇವೆಯೊಂದಿಗೆ ಸಮಾಜಕ್ಕೆ ಮಾದರಿ ಆಗಿದ್ದಾರೆ. 75 ವರ್ಷದ ತುಂಬಿದ ಹಿನ್ನೆಲೆ ಅವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಅಭಿನಂದನಾ ಸಮಿತಿ ಪ್ರಮುಖರಾದ ಎಸ್‌.ಎಸ್‌. ಜ್ಯೋತಿಪ್ರಕಾಶ್‌, ಉದ್ಯಮಿ ಎನ್‌.ಗೋಪಿನಾಥ್‌, ಓಪನ್‌ ಮೈಂಡ್‌ ವರ್ಲ್ಡ್‌ ಸ್ಕೂಲ್‌ನ ಟ್ರಸ್ಟಿ ಕೆ.ಕಿರಣ್‌ ಕುಮಾರ್‌, ಮಾಚೇನಹಳ್ಳಿ ಕೈಗಾರಿಕಾ ಸಂಘ ಅಧ್ಯಕ್ಷ ರಮೇಶ್‌ ಹೆಗಡೆ, ಮಾಜಿ ಪಾಲಿಕೆ ಸದಸ್ಯ ವಿ.ವಿಶ್ವಾಸ್‌, ಹರ್ಷ ಕಾಮತ್‌, ಹಂಜಿ ರುದ್ರಣ್ಣ, ಬಾಳೆಕಾಯಿ ಮೋಹನ್‌ ಮತ್ತಿತರರು ಉಪಸ್ಥಿತರಿದ್ದರು.

- - - -08ಎಸ್‌ಎಂಜಿಕೆಪಿ01:

ಎಸ್‌.ರುದ್ರೇಗೌಡರ ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಿವಿಧ ಗಣ್ಯರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ