ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಬಲಿಪಾಡ್ಯಮಿ ಮಾರನೆ ದಿನ ನಡೆಯುವ ಈ ಹಬ್ಬದಲ್ಲಿ ಸಗಣಿಯಲ್ಲಿ ಹೊಡೆದಾಡಿಕೊಳ್ಳುವುದೇ ವಿಶೇಷ ಆಚರಣೆಯಾಗಿದೆ. ವಯಸ್ಸಿನ ಬೇಧವಿಲ್ಲದೆ ಕಿರಿಯರು, ಹಿರಿಯರು, ಯುವಕರು ದಪ್ಪ ಸಗಣಿ ಉಂಡೆಗಳನ್ನು ಒಬ್ಬರಿಗೊಬ್ಬರು ಹೊಡೆದುಕೊಂಡು ಗಮನ ಸೆಳೆದರು. ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡಿಕೊಳ್ಳುವುದು ಈ ಹಬ್ಬದ ವಿಶೇಷ.
ಮನೆಗಳಿಂದ ಸಗಣಿ ಸಂಗ್ರಹ: ಅಚ್ಚ ಕನ್ನಡಿಗರೇ ಇರುವ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಪ್ರತಿವರ್ಷ ಇಲ್ಲಿ ಬಲಿಪಾಡ್ಯಮಿಯ ಮಾರನೆ ದಿನ ಗೊರೆ ಹಬ್ಬ ಆಚರಿಸಲಾಗುತ್ತದೆ. ಅದರಂತೆ ಈ ವರ್ಷವೂ ಸಹ ಸಂಪ್ರದಾಯದಂತೆ ಗೊರೆ ಹಬ್ಬ ಆಚರಿಸಲಾಗಿದೆ. ಹಬ್ಬದ ದಿನ ಬೆಳಗ್ಗೆ ಗ್ರಾಮದ ಎಲ್ಲರ ಮನೆಯ ಕೊಟ್ಟಿಗೆಗಳಿಂದ ಸಗಣಿಯನ್ನು ಎತ್ತಿನ ಗಾಡಿ ಹಾಗು ಟ್ರಾಕ್ಟರ್ಗಳ ಮೂಲಕ ತಂದು ಗ್ರಾಮದ ಬೀರೇಶ್ವರ ದೇವಸ್ಥಾನದ ಬಳಿ ರಾಶಿ ಹಾಕಲಾಗುತ್ತದೆ.ಇದಾದ ನಂತರ ಗ್ರಾಮದ ಹೊಳೆ ದಂಡೆಗೆ ಹೋಗಿ ಇಬ್ಬರು ವ್ಯಕ್ತಿಗಳಿಗೆ ಹುಲ್ಲಿನ ಮೀಸೆ ಗಡ್ಡವನ್ನು ಕಟ್ಟಿ ಹಣೆಗೆ ನಾಮ ಬಳಿದು ಅವರನ್ನು ಕತ್ತೆಯ ಮೇಲೆ ಕೂರಿಸಿ ಊರ ತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತದೆ. ಹೀಗೆ ಕತ್ತೆಯ ಮೇಲೆ ಕುಳ್ಳರಿಸಿ ಮೆರವಣಿಗೆ ಮಾಡುವವರನ್ನು ಕೊಂಡಕಾರರು ಎನ್ನಲಾಗುತ್ತದೆ.
ಆಗ ನೋಡಿ ಶುರುವಾಗುವ ಸಗಣಿಯಾಟದಲ್ಲಿ ಸಗಣಿಯ ರಾಶಿಯಲ್ಲಿ ಹೊರಳಾಡುವ ಗ್ರಾಮಸ್ಥರು ಪರಸ್ಪರ ಸಗಣಿಯಲ್ಲೇ ಹೊಡೆದಾಡುತ್ತಾರೆ. ದೊಡ್ಡ ದೊಡ್ಡ ಸಗಣಿ ಮುದ್ದೆಗಳನ್ನು ಮಾಡಿ ಒಬ್ಬರ ಮೇಲೆ ಒಬ್ಬರು ಸಗಣಿ ಮುದ್ದೆಗಳನ್ನು ಎತ್ತಿ ಹಾಕಿ ಖುಷಿಪಡುತ್ತಾರೆ.
ಹೀಗೆ ಸಗಣಿಯಿಂದ ಹೊಡೆದಾಡಿದರೆ ಚರ್ಮದ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆಯೂ ಇದೆ. ಬೀರೇಶ್ವರನಿಗೆ ಹರಕೆ ಹೊತ್ತವರು ಸಹ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇದರಿಂದ ತಮ್ಮ ಮನದ ಬಯಕೆ ಈಡೇರುತ್ತದೆ ಎಂಬ ನಂಬಿಕೆ ಸಹ ಇದೆ. ಈ ಹಬ್ಬ ಆಚರಿಸಲು ಒಂದು ಹಿನ್ನೆಲೆಯೂ ಇದೆ. ಹಿಂದೆ ಊರ ಗೌಡರ ಮನೆಯಲ್ಲಿ ಜೀತಕ್ಕಿದ್ದ ವ್ಯಕ್ತಿ ಮಹಾಶಿವಭಕ್ತನಾಗಿದ್ದನಂತೆ. ಆತನ ಮರಣ ನಂತರ ಆತನ ವಿಭೂತಿ, ರುದ್ರಾಕ್ಷಿ ಹಾಗೂ ಜೋಳಿಗೆಯನ್ನು ತಿಪ್ಪೆಗೆ ಎಸೆಯಲಾಗಿತ್ತಂತೆ. ಕಾಲಾನಂತರ ಗೊಬ್ಬರಕ್ಕಾಗಿ ತಿಪ್ಪೆ ಅಗೆಯುತ್ತಿದ್ದಾಗ ಆ ಸ್ಥಳದಲ್ಲಿ ಲಿಂಗವೊಂದು ಉದ್ಭವವಾಗಿರುವುದು ಗೋಚರಿಸಿತು ಎಂಬ ನಂಬಿಕೆಯಿದೆ. ನಂತರ ಅದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ ಅಂದಿನಿಂದ ಪ್ರತಿ ವರ್ಷ ಇಲ್ಲಿ ಸಗಣಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ ಅನ್ನೋದು ಸ್ಥಳೀಯರ ಮಾತು.
ದೀಪಾವಳಿ ಸಡಗರದ ಬಳಿಕ ಗಡಿನಾಡ ಕನ್ನಡಿಗರು ಆಚರಿಸುವ ಈ ವಿಶೇಷ ಸಗಣಿ ಹಬ್ಬ ಸುತ್ತಮುತ್ತಲಿನ ಗ್ರಾಮಸ್ಥರನ್ನು ಆಕರ್ಷಿಸುವುದಂತೂ ಸತ್ಯ.