ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ, ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಪವಿತ್ರ ತಪೋಭೂಮಿ ಮಲೆ ಮಹದೇಶ್ವರ ಬೆಟ್ಟದ ಸನ್ನಿಧಾನದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಸಂಪ್ರದಾಯಬದ್ಧವಾದ ಹಾಲರವೆ ಉತ್ಸವವು ಭಕ್ತಿಭಾವ, ಶ್ರದ್ಧೆ ಮತ್ತು ಸಂಭ್ರಮದಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಹನೂರು
ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ, ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಪವಿತ್ರ ತಪೋಭೂಮಿ ಮಲೆ ಮಹದೇಶ್ವರ ಬೆಟ್ಟದ ಸನ್ನಿಧಾನದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಸಂಪ್ರದಾಯಬದ್ಧವಾದ ಹಾಲರವೆ ಉತ್ಸವವು ಭಕ್ತಿಭಾವ, ಶ್ರದ್ಧೆ ಮತ್ತು ಸಂಭ್ರಮದಿಂದ ನೆರವೇರಿತು.
ಸಾಲೂರು ಬೃಹನ್ಮಠದ ಮಠಾಧ್ಯಕ್ಷ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ನೇತೃತ್ವ, ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯ ಬದ್ಧವಾಗಿ ನಡೆಯಿತು,
ಮಹದೇಶ್ವರ ಸ್ವಾಮಿಯ ಧಾರ್ಮಿಕ ಪರಂಪರೆ, ಸಂಪ್ರದಾಯ ಹಾಗೂ ಆಚರಣೆಗಳ ಪ್ರತೀಕವಾಗಿರುವ ಈ ಉತ್ಸವದಲ್ಲಿ 101 ಬೇಡಗಂಪಣ ಬಾಲಕಿಯರು ಪವಿತ್ರ ಹಾಲರುವೆ ಸೇವೆಯಲ್ಲಿ ಪಾಲ್ಗೊಂಡರು.
ಹಾಲೇರು ಹಳ್ಳದಲ್ಲಿ ಪುಣ್ಯಸ್ನಾನ:
ಉತ್ಸವದ ಅಂಗವಾಗಿ ಬೆಳಗಿನ ಜಾವ ಸುಮಾರು 3 ಗಂಟೆಗೆ 101 ಬಾಲಕಿಯರು ಹಾಲೇರು ಹಳ್ಳಕ್ಕೆ ತೆರಳಿ, ಉಪವಾಸ ವ್ರತಾಚರಣೆಯೊಂದಿಗೆ ಅಲ್ಲಿನ ಪವಿತ್ರ ಜಲದಲ್ಲಿ ಪುಣ್ಯಸ್ನಾನ ನೆರವೇರಿಸಿದರು. ನಂತರ ಕಾಡಿನಲ್ಲಿ ಬೆಳೆಯುವ ಕಾಡುಬಾಳೆ ಗಿಡದ ನಾರಿನಿಂದ ಸಿಂಬಿಯನ್ನು ಸಿದ್ಧಪಡಿಸಿಕೊಂಡು, ಹಾಲರುವೆಯ ಕುಂಭಗಳನ್ನು ಎತ್ತಿಕೊಂಡು ಬಾಯಿಯನ್ನು ಭದ್ರವಾಗಿ ಕಟ್ಟಿ, ಧೂಪ, ದೀಪ ಹಾಗೂ ಮಂಗಳಾರತಿ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ನಂತರ ಹಾಲರುವೆಯ ಕುಂಭಗಳನ್ನು ತಲೆಯ ಮೇಲೆ ಹೊತ್ತುಕೊಂಡು ಭಕ್ತಿಪೂರ್ವಕವಾಗಿ ಸಾಗಿದ ಬಾಲಕಿಯರು ಬೆಳಿಗ್ಗೆ ಸುಮಾರು 6 ರಿಂದ 7 ಗಂಟೆಯ ವೇಳೆಗೆ ಹಾಲರುವೆಯ ಕತ್ತಿ ಪವಾಡದ ಸ್ಥಳಕ್ಕೆ ಆಗಮಿಸಿದರು.
ಗಮನ ಸೆಳೆದ ಬಾಲಕಿಯರಿಗೆ ನೂತನ ಸೀರೆ ವಿತರಣೆ:
ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಸಾಮೂಹಿಕವಾಗಿ ಒಂದೆಡೆ ಸೇರಿ, ಹಾಲರವೆ ಸೇವೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಬಾಲಕಿಯರಿಗೂ ನೂತನ ಸೀರೆ ಮತ್ತು ರವಿಕೆ ತೊಡಿಸಿ ಸಂಪ್ರದಾಯಬದ್ಧವಾಗಿ ಅಲಂಕರಿಸಿದರು. ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಭಕ್ತ ಮಹಿಳೆಯರು ಬಾಲಕಿಯರಿಗೆ ಕೈಬಳೆಗಳನ್ನು ತೊಡಿಸಿ, ತಲೆಕೂದಲನ್ನು ಅಲಂಕರಿಸಿ ವಿಶೇಷ ಶೃಂಗಾರ ಮಾಡಿದರು.
ಈ ಪವಿತ್ರ ಸೇವೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಬೇಡಗಂಪಣ ಬಾಲಕಿಯರಿಗೆ ಶ್ರೀ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತವಾಗಿ ಸೀರೆ ಮತ್ತು ರವಿಕೆಗಳನ್ನು ವಿತರಿಸಲಾಯಿತು. ದೂರದ ಅರಣ್ಯ ಪ್ರದೇಶಗಳಿಂದ ಆಗಮಿಸುವ ಬೇಡಗಂಪಣ ಸಮುದಾಯದ ಬಾಲಕಿಯರು ತಮ್ಮ ಧಾರ್ಮಿಕ ಸಂಪ್ರದಾಯ ಮತ್ತು ಭಕ್ತಿಪರಂಪರೆಯನ್ನು ತಲೆಮಾರುಗಳಿಂದ ಮುಂದುವರಿಸಿಕೊಂಡು ಬರುತ್ತಿರುವುದು ಈ ಉತ್ಸವದ ವಿಶೇಷತೆಯಾಗಿದೆ.
ಶ್ರೀ ಮಲೆ ಮಹದೇಶ್ವರ ಸನ್ನಿಧಾನದಲ್ಲಿ ನಡೆಯುವ ಹಾಲರವೆ ಉತ್ಸವವು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಬೇಡಗಂಪಣ ಸಮುದಾಯದ ವಿಶಿಷ್ಟ ಸಾಂಸ್ಕೃತಿಕ ಪರಂಪರೆ, ಮಹಿಳೆಯರ ಪಾಲ್ಗೊಳ್ಳುವಿಕೆ ಹಾಗೂ ಭಕ್ತಿಸೇವೆಯ ಮಹತ್ವವನ್ನು ಸಾರುವ ವಿಶೇಷ ಉತ್ಸವ.
ಈ ಸಂದರ್ಭದಲ್ಲಿ ಶ್ರೀ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ, ಬೇಡಗಂಪಣ ಸಮುದಾಯದ ಅರ್ಚಕರು, ಮುಖಂಡರಾದ ಮುರುಗೇಶ್, ಮಹಿಳಾ ಭಕ್ತರು, ಮಾದಪ್ಪನ ಭಕ್ತಾದಿಗಳು ಹಾಜರಿದ್ದರು.
ಅಮಾವಾಸ್ಯೆ ಭಕ್ತ ವೃಂದ: ದೀಪಾವಳಿ ಅಮಾವಾಸ್ಯೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಹಾಲರುವೇ ಉತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಮಾದಪ್ಪನ ಭಕ್ತಾದಿಗಳು ಆಗಮಿಸಿದ ಹಿನ್ನೆಲೆಯಲ್ಲಿ ದೇವಾಲಯ ಸೇರಿದಂತೆ ಎಲ್ಲಿ ನೋಡಿದರೂ ಭಾರಿ ಭಕ್ತ ಪರಿಷೆ ಜಮವಣೆಗೊಂಡು ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಮಾದಪ್ಪನಿಗೆ ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸಿ ವಿವಿಧ ಉತ್ಸವಗಳಲ್ಲಿ ಪಾಲ್ಗೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.