ಮಹಿಳೆಯ ಜೊತೆ ಅಕ್ರಮ ಸಂಬಂಧ ಬೆಳೆಸುವ ವಿಚಾರ: ಅಣ್ಣತಮ್ಮಂದಿರ ಜಗಳ ಕೊಲೆಯಲ್ಲಿ ಅಂತ್ಯ

KannadaprabhaNewsNetwork | Updated : Jul 20 2024, 12:20 PM IST

ಸಾರಾಂಶ

ಮಹಿಳೆಯ ಜೊತೆ ಅಕ್ರಮ ಸಂಬಂಧ ಬೆಳೆಸುವ ವಿಚಾರದಲ್ಲಿ ಅಣ್ಣ-ತಮ್ಮಂದಿರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ದಾಬಸ್‌ಪೇಟೆ :  ಮಹಿಳೆಯ ಜೊತೆ ಅಕ್ರಮ ಸಂಬಂಧ ಬೆಳೆಸುವ ವಿಚಾರದಲ್ಲಿ ಅಣ್ಣ-ತಮ್ಮಂದಿರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೋಂಪುರ ಹೋಬಳಿಯ ಎಲೆಕ್ಯಾತನಹಳ್ಳಿಯಲ್ಲಿ ದುರ್ಘಟನೆ ನಡೆದಿದ್ದು, ಮರಳಕುಂಟೆ ಗ್ರಾಮದ ಯುವಕ ನಾಗೇಶ್(25) ಕೊಲೆಯಾಗಿರುವ ದುರ್ದೈವಿ. ಅದೇ ಗ್ರಾಮದ ಯುವಕ ನವೀನ್ (22) ಕೊಲೆ ಮಾಡಿದ ಆರೋಪಿ.

ಘಟನೆ ವಿವರ:

ಮರಳಕುಂಟೆ ಗ್ರಾಮದ ನಾಗೇಶ್ ಹಾಗೂ ನವೀನ್ ದೊಡ್ಡಪ್ಪ- ಚಿಕ್ಕಪ್ಪನ ಮಕ್ಕಳು. ಇಬ್ಬರು ಬೇರೆ ಬೇರೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಲೆಕ್ಯಾತನಹಳ್ಳಿಯ ವಿವಾಹಿತ ಮಹಿಳೆ ಇವರಿಬ್ಬರಿಗೂ ಪರಿಚಯವಾಗಿದ್ದು ಆಕೆ ಜೊತೆ ಅಕ್ರಮ ಸಂಬಂಧ ಬೆಳೆಸುವ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.

ಗುರುವಾರ ರಾತ್ರಿ 8 ಗಂಟೆಗೆ ಮನೆಯಲ್ಲಿದ್ದ ನಾಗೇಶನಿಗೆ ಆರೋಪಿ ನವೀನ್ ಪೋನ್ ಮಾಡಿ ಎಲೆಕ್ಯಾತನಹಳ್ಳಿ ಗ್ರಾಮಕ್ಕೆ ಕರೆಸಿದ್ದು ಇಬ್ಬರೂ ಪಾನಮತ್ತರಾಗಿ ಇದೇ ವಿಚಾರವಾಗಿ ತಡರಾತ್ರಿ ಗಲಾಟೆ ಮಾಡಿಕೊಂಡು, ಜಗಳ ವಿಕೋಪಕ್ಕೆ ತಿರುಗಿ ಆರೋಪಿ ನವೀನ್ ಮಾರಕಾಸ್ತ್ರದಿಂದ ನಾಗೇಶನ ಎದೆಗೆ ಚುಚ್ಚಿ ಕೊಲೆ ಮಾಡಿದ್ದಾನೆ.

ಆ್ಯಂಬುಲೆನ್ಸ್‌ಗೂ ಕರೆ:

ಕೊಲೆ ಮಾಡಿ ಆರೋಪಿ ನವೀನ್ ತನ್ನ ಮೊಬೈಲ್‌ನಿಂದ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಆ್ಯಂಬುಲೆನ್ಸ್ ಬರುವ ವೇಳೆಗೆ ನಾಗೇಶ್ ಮೃತಪಟ್ಟಿದ್ದ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ನವೀನ್‌ನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ನಾನು ಕೊಲೆ ಮಾಡಿಲ್ಲ. ಯಾರೋ ಕೊಲೆ ಮಾಡಿ ಓಡಿ ಹೋದ ಎಂದು ಸುಳ್ಳು ಹೇಳಿದಾಗ ಅನುಮಾನಗೊಂಡ ಪೊಲೀಸರು ವಿಚಾರಣೆಗೆ ಒಳಪಡಿಸಿ ಸತ್ಯ ಬಯಲಿಗೆಳೆದು, ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಬೆಂ.ಗ್ರಾ. ಜಿಲ್ಲಾ ಎಸ್ಪಿ ಎ ಸಿ.ಕೆ.ಬಾಬಾ, ಎಎಸ್ಪಿ ನಾಗರಾಜು, ಡಿವೈಎಸ್ಪಿ ಜಗದೀಶ್, ದಾಬಸ್‌ಪೇಟೆ ಠಾಣೆ ಎಸ್‌ಐ ಬಿ.ರಾಜು ಭೇಟಿ ನೀಡಿ ಪರಿಶೀಲಿಸಿದರು. ದಾಬಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article