ಸಾರ್ವಜನಿಕರನ್ನು ಆಕರ್ಷಿಸುತ್ತಿರುವ ಮೊದಲೂಟಿ ತಾಣ

KannadaprabhaNewsNetwork | Published : Dec 23, 2024 1:02 AM

ಸಾರಾಂಶ

ಮಸ್ಕಿ ತಾಲೂಕಿನ ಪಾಮನಕಲ್ಲೂರು ಸಮೀಪದ ತುಪ್ಪದೂರು ಗ್ರಾಮದ ಹತ್ತಿರ ಇರುವ ಮೊದಲೂಟಿ

ಕನ್ನಡಪ್ರಭ ವಾರ್ತೆ ಕವಿತಾಳ

ಮಸ್ಕಿ ತಾಲೂಕಿನ ಪಾಮನಕಲ್ಲೂರು ಸಮೀಪದ ತುಪ್ಪದೂರು ಗ್ರಾಮದ ಹತ್ತಿರವಿರುವ ಮೊದಲೂಟಿ ಉತ್ತಮ ಪರಿಸರ ಹೊಂದಿದ್ದು, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸ್ಥಳವಾಗಿ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

ನೂರಾರು ವರ್ಷಗಳ ಇತಿಹಾಸ ಹೊಂದಿದ ಆದಯ್ಯ ಮತ್ತು ಅಮರಯ್ಯ ದೇವಸ್ಥಾನಗಳಿದ್ದು, ಇಲ್ಲಿನ ಸಸ್ಯ ಶ್ಯಾಮಲೆಯಲ್ಲಿ ನಿರಂತರ ಹರಿಯುವ ನೀರಿನಲ್ಲಿ ಔಷಧೀಯ ಗುಣ ಹೊಂದಿದೆ ಎಂದು ಇಲ್ಲಿನ ಜನಾಭ್ರಿಪಾಯವಾಗಿದೆ.

ಸುತ್ತಲಿನ ಪ್ರದೇಶದಲ್ಲಿ ಎತ್ತರವಾದ ಗುಡ್ಡಗಾಡು, ಗಿಡ ಮರಗಳ ನಡುವೆ ಹಾದುಹೋಗಿರುವ ನಾಲೆಯಲ್ಲಿ ನಿರಂತರವಾಗಿ ಹರಿಯುವ ಝರಿ, ಗಮನ ಸೆಳೆಯುವ ಪ್ರಕೃತಿಯ ಹಸಿರು ಮತ್ತು ಪ್ರಶಾಂತವಾದ ವಾತಾವರಣ ಮನಸ್ಸಿಗೆ ಮುದ ನೀಡಿದರೆ, ಆದಯ್ಯ ಮತ್ತು ಅಮರಯ್ಯ ದೇವಸ್ಥಾನಗಳು ಮನದಲ್ಲಿ ಭಕ್ತಿಯ ಭಾವನೆ ಮೂಡಿಸುತ್ತವೆ.

ಇಲ್ಲಿರುವ ದೇವಸ್ಥಾನಗಳನ್ನು ಗಮನಿಸಿದರೆ ಗುರುಗುಂಟಾ ಅಮರೇಶ್ವರ ದೇವಸ್ಥಾನದ ಚಿತ್ರಣ ಕಣ್ಣಮುಂದೆ ಬಂದು ಹೋಗುತ್ತದೆ, ಅದಕ್ಕೆ ಇಂಬು ಕೊಟ್ಟಂತೆ ದೇವಸ್ಥಾನದಲ್ಲಿ ಉದ್ಭವ ಲಿಂಗಗಳಿದ್ದು ಶರಣರು ತಪ್ಪಸ್ಸು ಮಾಡಿದ ಪುಣ್ಯ ಕ್ಷೇತ್ರ ಎನಿಸಿಕೊಂಡಿದೆ.

ವರ್ಷವಿಡೀ ನೀರು ಹರಿಯವುದು ಇಲ್ಲಿನ ವಿಶೇಷತೆ. ಇಲ್ಲಿ ಹಲವು ಔಷಧೀಯ ಗಿಡಮೂಲಿಕೆ ಸಸ್ಯಗಳಿದ್ದು ಅವುಗಳ ಮೂಲಕ ಹರಿದು ಬರುವ ನೀರಿನಲ್ಲಿ ಔಷಧೀಯ ಗುಣ ಅಡಗಿದೆ.

ಹಲವು ಕಾಯಿಲೆಗಳಿಂದ ಬಳಲುವ ಅನೇಕರು ದೂರದ ಊರುಗಳಿಂದ ಆಗಮಿಸಿ ಕೇವಲ ಈ ನೀರು ಸೇವಿಸಿ ಆರೋಗ್ಯವಂತರಾಗಿ ಮರಳಿದ್ದಾರೆ ಎಂದು ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಹೇಳಿಕೆ. ಅಲ್ಲದೆ ಕೆಲ ವರ್ಷಗಳ ಹಿಂದೆ ಬೆಂಗಳೂರು ಮೂಲದ ಮುಸ್ಲಿಂ ಸಮಾಜದ ಎಂಜಿನಿಯರ್ ಮುಷ್ರಫ್ ಎಂಬುವರು 9 ವರ್ಷಗಳ ಕಾಲ ಸತತ ದಸರಾ ಸಮಯದಲ್ಲಿ ದೇವಿ ಪುರಾಣ ಪ್ರವಚನ ಮಾಡುವ ಮೂಲಕ ಭಕ್ತಿ ಮೆರೆದಿರುವುದು ಇಲ್ಲಿನ ಮತ್ತೊಂದು ವಿಶೇಷ.

ಸುತ್ತಮುತ್ತಲಿನ ಗ್ರಾಮಗಳ ಮುಖಂಡರೆಲ್ಲರೂ ಸೇರಿ ಚರ್ಚಿಸಿ ಸಮಿತಿ ರಚಿಸಿ ದೇವಸ್ಥಾನಗಳ ಅಭಿವೃದ್ಧಿಯ ಕುರಿತು ಯೋಚನೆ ನಡೆಸಬೇಕಾಗಿದ್ದು, ಇದಕ್ಕೆ ಜನಪ್ರತಿನಿಧಿಗಳು ಕೈಜೋಡಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಬಸವರಾಜಪ್ಪಗೌಡ ಹರ್ವಾಪುರ, ಶಿವಕುಮಾರ ಹಾಗೂ ಗುರುಸಿದ್ದೇಶ ಮೇಟಿ ತಿಳಿಸಿದ್ದಾರೆ.

ಈ ಸ್ಥಳದಲ್ಲಿ ಹಲವು ವಿಶೇಷಗಳಿದ್ದು, 7 ನಾಲೆಗಳ ನೀರು ವರ್ಷವಿಡೀ ಹರಿಯುತ್ತದೆ ಹೀಗಾಗಿ ಈ ಜಾಗದಲ್ಲಿ ಒಂದು ಚೆಕ್‌ಡ್ಯಾಂ ನಿರ್ಮಿಸಿದರೆ ಸುತ್ತಲಿನ ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುವುದ ಜೊತೆಗೆ ರೈತರಿಗೆ ಅನುಕೂಲವಾಗಲಿದೆ. ನೀರು ಸಂಗ್ರಹದಿಂದ ದನಕರುಗಳು, ಕುರಿ-ಮೇಕೆಗಳು ಮತ್ತು ಪ್ರಾಣಿ ಪಕ್ಷಿಗಳಿಗೆ ನೀರು ದೊರಕುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಅಭಿವೃದ್ಧಿಗೆ ಮುಂದಾಗಬೇಕು.

Share this article