ಮಾಧ್ವ ಯುವಕ ಸಂಘ ವಾರ್ಷಿಕೋತ್ಸವ: ಇಂದಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ

KannadaprabhaNewsNetwork | Published : Dec 23, 2024 1:02 AM

ಸಾರಾಂಶ

ಶ್ರೀ ಮಾಧ್ವ ಯುವಕ ಸಂಘದ 44ನೇ ವಾರ್ಷಿಕೋತ್ಸವ ಸೋಮವಾರದಿಂದ ಡಿ.29ರವರೆಗೆ ನಗರದ ಲಾಯರ್ ರಸ್ತೆಯ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ 6 ರಿಂದ 7.30 ರವರೆಗೆ ವೇದ ಪಂಡಿತ ನರಹರಿ ಆಚಾರ್ಯ ಮುತ್ತಗಿ ಅವರಿಂದ ‘ಸಮಾಜಕ್ಕೆ ರಾಮಾಯಣದ ಕೊಡುಗೆ’ ವಿಷಯದ ಕುರಿತು ಪ್ರವಚನ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀ ಮಾಧ್ವ ಯುವಕ ಸಂಘದ 44ನೇ ವಾರ್ಷಿಕೋತ್ಸವ ಸೋಮವಾರದಿಂದ ಡಿ.29ರವರೆಗೆ ನಗರದ ಲಾಯರ್ ರಸ್ತೆಯ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ 6 ರಿಂದ 7.30 ರವರೆಗೆ ವೇದ ಪಂಡಿತ ನರಹರಿ ಆಚಾರ್ಯ ಮುತ್ತಗಿ ಅವರಿಂದ ‘ಸಮಾಜಕ್ಕೆ ರಾಮಾಯಣದ ಕೊಡುಗೆ’ ವಿಷಯದ ಕುರಿತು ಪ್ರವಚನ ಹಮ್ಮಿಕೊಳ್ಳಲಾಗಿದೆ.

ಡಿ.25ರಂದು ಮಧ್ಯಾಹ್ನ 3 ಗಂಟೆಯಿಂದ 6 ರಿಂದ 10 ವರ್ಷದ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, 11 ರಿಂದ 18 ವರ್ಷದ ಮಕ್ಕಳಿಗೆ ‘ಸಮಾಜಕ್ಕೆ ರಾಮಾಯಣದ ಕೊಡುಗೆ’ ಕುರಿತು ಪ್ರಬಂಧ ಸ್ಪರ್ಧೆ ಹಾಗೂ 18 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ರಾಮಾಯಣದ ಬಗ್ಗೆ ಲಿಖಿತ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ತುಮಕೂರಿನ ಅನಘಾ ಪ್ರಸಾದ್ ಅವರಿಂದ ‘ಶ್ರೀನಿವಾಸ ಕಲ್ಯಾಣ’ ಹರಿಕಥೆ ಹಮ್ಮಿಕೊಳ್ಳಲಾಗಿದೆ. ಡಿ.27ರಂದು ಸಂಜೆ 7 ಗಂಟೆಗೆ ಸಮ್ಮಿತಾ ಮುತಾಲಿಕ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಡಿ.29ರಂದು ಬೆಳಗ್ಗೆ 6 ಗಂಟೆಯಿಂದ ಶ್ರೀ ಪವಮಾನ ಹೋಮ ಹಾಗೂ ಶ್ರೀ ಧನ್ವಂತರಿ ಹೋಮ, 9 ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಪ್ರವಚನ ಮಂಗಳ ಮಹೋತ್ಸವ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ, ಶ್ರೀ ಮಾಧ್ವ ಯುವಕ ಸಂಘದ ಸಂಸ್ಥಾಪಕ ಪದಾಧಿಕಾರಿಗಳಾದ ಗೋಪಾಲಾಚಾರ್ಯ ಮಣ್ಣೂರು, ಗುರುರಾಜಾಚಾರ್ಯ ಕಂಪ್ಲಿ ಮತ್ತು ವಿ. ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಗುವುದು. ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಕಾರ್ಯಕ್ರಮಗಳಿಗೆ ವಿಶ್ವಮಧ್ವ ಮಹಾ ಪರಿಷತ್, ಅಖಿಲ ಭಾರತ ಮಾಧ್ವ ಮಹಾಮಂಡಲ, ಕೆ.ಬಿ. ಬಡಾವಣೆ ಮತ್ತು ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ನಂದಕಿಶೋರ ಭಜನಾ ಮಂಡಳಿ, ಭಾರತಿ ಭಜನಾ ಮಂಡಳಿ, ಶ್ರೀಕೃಷ್ಣ ಮಿತ್ರ ವೃಂದ ಹಾಗೂ ಬ್ರಾಹ್ಮಣ ಸಮಾಜ ಸಹಕಾರ ನೀಡಿವೆ ಎಂದು ತಿಳಿಸಲಾಗಿದೆ.

- - - (ಸಾಂದರ್ಭಿಕ ಚಿತ್ರ)

Share this article